ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಯ್ದೆಯನ್ನು ರದ್ದುಪಡಿಸಿ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌-ಗ್ರಾಮೀಣ (ವಿಬಿ-ಜಿ ರಾಮ್‌ ಜಿ) ಕಾಯ್ದೆ ರೂಪಿಸಿರುವ ವಿರುದ್ಧ ಕಾನೂನು ಹೋರಾಟ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

 ಬೆಂಗಳೂರು : ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಜಿ ನರೇಗಾ) ಕಾಯ್ದೆಯನ್ನು ರದ್ದುಪಡಿಸಿ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌-ಗ್ರಾಮೀಣ (ವಿಬಿ-ಜಿ ರಾಮ್‌ ಜಿ) ಕಾಯ್ದೆ ರೂಪಿಸಿರುವ ವಿರುದ್ಧ ಕಾನೂನು ಹೋರಾಟ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಪಕ್ಷದ ಜೊತೆಗೆ ಸರ್ಕಾರದ ಮಟ್ಟದಲ್ಲೂ ಎಂಜಿ ನರೇಗಾ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ರಾಜಕೀಯವಾಗಿ ಮತ್ತು ಕಾನೂನಾತ್ಮಕ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಜೊತೆಗೆ ಈ ವಿಚಾರವನ್ನು ಜನತಾ ನ್ಯಾಯಾಲಯದ ಮುಂದೆಯೂ ಕೊಂಡೊಯ್ದು ಸಾಧಕ-ಬಾಧಕಗಳ ಮಾಹಿತಿ ನೀಡಲು ತೀರ್ಮಾನಿಸಲಾಗಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಸಚಿವ ಸಂಪುಟದಲ್ಲಿ ಸುದೀರ್ಘ ಚರ್ಚೆ ಹಾಗೂ ಅಡ್ವೊಕೇಟ್‌ ಜನರಲ್‌(ಎಜಿ) ಅವರ ಸಲಹೆ ಮೇಲೆ ಎಂಜಿ ನರೇಗಾ ಕಾಯ್ದೆ ರದ್ದುಪಡಿಸಿರುವ ಕೇಂದ್ರದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಈ ಕಾಯ್ದೆ ರದ್ದು ಪ್ರಶ್ನಿಸಿ ಮೊದಲು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕೇ ಅಥವಾ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಹೋಗಬೇಕೇ ಎನ್ನುವುದನ್ನು ಪರಿಶೀಲಿಸಿ ಸರ್ಕಾರಕ್ಕೆ ತಿಳಿಸಲು ಎಜಿ ಅವರಿಗೆ ತಿಳಿಸಲಾಗಿದೆ ಎಂದರು.

ಸಂವಿಧಾನದ 73ನೇ ತಿದ್ದುಪಡಿ ಬಳಿಕ ದೇಶದಲ್ಲಿ ವಿಕೇಂದ್ರೀಕರಣದ ಚಳವಳಿ ಪ್ರಾರಂಭವಾಗಿದೆ. ವಿಕೇಂದ್ರೀಕರಣಕ್ಕೆ ಕೊಡಲಿ ಪೆಟ್ಟು ಬೀಳುವಂತೆ ಜಿ ರಾಮ್‌ ಜಿ ಕಾಯ್ದೆ ತರಲಾಗಿದೆ. ಇದರಿಂದ ಮೊದಲಿಂದ ಎಂಜಿ ನರೇಗಾ ಮೂಲಕ ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಸಿಗುತ್ತಿದ್ದ ಉದ್ಯೋಗದ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ಆಗಿದೆ. ಅಲ್ಲದೆ, ನರೇಗಾ ಮೂಲಕ ಗ್ರಾಪಂಗಳಲ್ಲಿ ಆಸ್ತಿ ನಿರ್ಮಾಣ ಆಗುತ್ತಿತ್ತು. ಶಾಲಾ ಕಾಂಪೌಂಡ್‌, ಆಟದ ಮೈದಾನ. ರೈತರ ಭೂಮಿಯಲ್ಲಿ ಬದು, ಕೃಷಿ ಹೊಂಡ, ದನದ ಕೊಟ್ಟಿಗೆ, ಕುರಿ ದೊಡ್ಡಿ ನಿರ್ಮಾಣದಂತಹ ಅನೇಕ ಕೆಲಸಗಳನ್ನು ನಿಲ್ಲಿಸುವ ಕರಾಳ ಕಾನೂನು ಇದಾಗಿದೆ. ಯೋಜನೆಯಿಂದ ಮಹಾತ್ಮ ಗಾಂಧಿ ಅವರ ಹೆಸರು ಕೈಬಿಟ್ಟು ಅವಮಾನ ಮಾಡಲಾಗಿದೆ. ಜೊತೆಗೆ ಹೊಸ ಕಾಯ್ದೆಯಲ್ಲಿ ರಾಜ್ಯದ ಪಾಲಿನ ಅನುದಾನ ಪ್ರಮಾಣ ಹೆಚ್ಚಿಸಿರುವುದರಿಂದ ದೊಡ್ಡ ಆರ್ಥಿಕ ಹೊರೆಯಾಗಲಿದೆ ಎಂದು ತಿಳಿಸಿದರು.

ಗುತ್ತಿಗೆದಾರರಿಗೆ ಅನುಕೂಲ:

ಅಲ್ಲದೆ, ಹೊಸ ಜಿ ರಾಮ್‌ ಜಿ ಕಾಯ್ದೆ ಬಡ, ಕೂಲಿ ಕಾರ್ಮಿಕರಿಗೆ ತಮ್ಮ ಊರಿನ ಸಮೀಪ ಸಿಗುವ ಉದ್ಯೋಗದ ಹಕ್ಕು ಕಿತ್ತುಕೊಂಡು ಗುತ್ತಿಗೆದಾರರ ಹಿತ ಕಾಯುವ ಕಾಯ್ದೆ. ಬಡ ಕೂಲಿ ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಂತೆ ಕೇಂದ್ರ ಸರ್ಕಾರ ಗುತ್ತಿದಾರರ ಮೂಲಕ ನಡೆಸುವ ಯೋಜನೆಗಳ ಕೆಲಸಗಳಿಗೆ ತೆರಳಬೇಕಾಗುತ್ತದೆ. ಅಷ್ಟೇ ಅಲ್ಲ, ನರೇಗಾದಡಿ ಯಾವ ಕೆಲಸ, ಎಲ್ಲಿ, ಹೇಗೆ ಮಾಡಬೇಕೆಂದು ನಿರ್ಧರಿಸಲು ಈವರೆಗೆ ಗ್ರಾಪಂಗಳಿಗೆ ಇದ್ದ ಅಧಿಕಾರವನ್ನೂ ಮೊಟಕುಗೊಳಿಸಿ ಎಲ್ಲವೂ ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ನಡೆಯುವಂತೆ ರೂಪಿಸಲಾಗಿದೆ ಎಂದು ಆರೋಪಿಸಿದರು. ಇದೆಲ್ಲವನ್ನೂ ಜನತಾ ನ್ಯಾಯಾಲಯದ ಮುಂದೆ ಕೊಂಡೊಯ್ಯುತ್ತೇವೆ ಎಂದರು.

ಕೇಂದ್ರಕ್ಕೆ ಯಾವುದೇ ಯೋಜನೆ ಮೂಲಕ ಆರ್ಥಿಕ ಹೊರೆ ಬೀಳುತ್ತಿದ್ದರೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳನ್ನು ಕರೆದು ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಮಾಡಬೇಕಿತ್ತು. 15ನೇ ಹಣಕಾಸು ಆಯೋಗದ ವರದಿ ನಂತರ ಇಂತಹದ್ದೊಂದು ಹೊರೆಯನ್ನು ರಾಜ್ಯಗಳ ಮೇಲೆ ಹಾಕಿದರೆ ಅನುದಾನವನ್ನು ಎಲ್ಲಿಂದ ತರಬೇಕು?

ಹೊಸ ಕಾಯ್ದೆಯಡಿ 100 ದಿನ ಇದ್ದ ಕೂಲಿ ದಿನಗಳನ್ನು 125 ದಿನಕ್ಕೆ ಹೆಚ್ಚಿಸಿರುವುದು ರಾಜಕೀಯವಾಗಿ ಅಂಕಿ ಬಳಸಿಕೊಳ್ಳಬಹುದೇ ಹೊರತು ತಾತ್ವಿಕವಾಗಿ ಆಗುವಂತಹದ್ದಲ್ಲ. ಇದರ ವಿರುದ್ಧ ರಾಜಕೀಯ, ಕಾನೂನಾತ್ಮಕ ಹೋರಾಟಕ್ಕೆ ಸಂಪುಟ ತೀರ್ಮಾನಿಸಿದ್ದು, ಜೊತೆಗೆ ಜನತಾ ನ್ಯಾಯಾಲಯದ ಮುಂದೆಯೂ ಹೋಗುತ್ತೇವೆ ಎಂದರು.

 ನರೇಗಾ ಮರುಜಾರಿಗಾಗಿ ವಿಧಾನಮಂಡಲ ಕಲಾಪ

ಬೆಂಗಳೂರು :  ಮನರೇಗಾ ಯೋಜನೆಯನ್ನು ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಶೀಘ್ರವೇ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ‘ನರೇಗಾ ಉಳಿಸಿ ಜನಾಂದೋಲನ’ ಆಯೋಜಿಸುವ ಸಂಬಂಧ ನಡೆದ ಕಾಂಗ್ರೆಸ್‌ ಶಾಸಕರ ಸಭೆಯಲ್ಲಿ ಮಾತನಾಡಿದರು.ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿ ಬಿಜೆಪಿಯವರ ಹುನ್ನಾರ. ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆಗಿದ್ದಾಗ ಮನರೇಗಾ ಯೋಜನೆ ಜಾರಿಗೆ ತಂದಿದ್ದರು. ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ. ದಲಿತರು, ಮಹಿಳೆಯರು, ರೈತರಿಗೆ ಉದ್ಯೋಗ ಒದಗಿಸುವುದು ಯೋಜನೆ ಉದ್ದೇಶ. ವರ್ಷದಲ್ಲಿ ನೂರು ದಿನ ಉದ್ಯೋಗಾವಕಾಶ ಈ ಯೋಜನೆಯಲ್ಲಿ ಸಿಗುತ್ತಿತ್ತು. ಈ ಉದ್ಯೋಗವನ್ನೇ ಕಸಿಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಉದ್ಯೋಗದ ಹಕ್ಕು ಇಲ್ಲವಾಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೊಂದಲ ಸೃಷ್ಟಿ ಹುನ್ನಾರ:ಮನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧಿಯವರ ಹೆಸರು ತೆಗೆದು ಗೊಂದಲ ಸೃಷ್ಟಿ ಮಾಡುವ ಹುನ್ನಾರ ಕೇಂದ್ರ ಸರ್ಕಾರದ್ದು. ಈ ಮೂಲಕ ಮತ್ತೆ ಗಾಂಧೀಜಿ ಹತ್ಯೆ ಮಾಡಲಾಗಿದ್ದು, ಇದು ಸಂಘ ಪರಿವಾರದವರು ಹೇಳಿ ಕೊಟ್ಟಿರುವ ಪಾಠ. 28 ಕೋಟಿ ದಲಿತರಿಗೆ ಇದರಿಂದ ಅನ್ಯಾಯವಾಗಿದೆ. ಇದರ ವಿರುದ್ಧ ನಮ್ಮ ಹೋರಾಟ ತೀವ್ರವಾಗಿರಬೇಕು. ಬಡವರ ಉದ್ಯೋಗದ ಹಕ್ಕು ಕಸಿದುಕೊಂಡವರಿಗೆ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಮನರೇಗಾ ಕಾಯಿದೆ ಮತ್ತೆ ಜಾರಿ ಅಗುವ ರೀತಿ ಜನಾಂದೋಲನ ನಡೆಯಬೇಕು. ಪ್ರತಿ ಗ್ರಾಪಂ ಸದಸ್ಯ ನರೇಗಾದಲ್ಲಿ ಕೆಲಸ ಮಾಡುತ್ತಿರುವವರನ್ನು ತಲುಪಬೇಕು. ಈ ವಿಷಯದ ಬಗ್ಗೆ ಜನರನ್ನೂ ಜಾಗೃತಗೊಳಿಸುವ ಕೆಲಸವನ್ನು ಶಾಸಕರು ಮಾಡಬೇಕು. ನಮ್ಮ ಹೋರಾಟ ಜನಾಂದೋಲನವಾಗಿ ರೂಪುಗೊಳ್ಳುವಂಥ ವಾತಾವರಣ ನಿರ್ಮಾಣ ಆಗಬೇಕಿದೆ. ಕಾಂಗ್ರೆಸ್ ಜಾರಿಗೆ ತಂದ ಕಾರ್ಯಕ್ರಮ ರದ್ದು ಮಾಡಿ ಉದ್ಯೋಗದ ಹಕ್ಕು ಕಸಿದುಕೊಂಡಿರುವುದು ಸಂವಿಧಾನ ಬಾಹಿರ ಕೆಲಸ ಎಂದು ಹೇಳಿದರು.