ಎಂಜಿ-ನರೇಗಾ ಯೋಜನೆಯ ಉದ್ದೇಶಕ್ಕೆ ಧಕ್ಕೆ ಬರುವಂತೆ ‘ವಿಬಿ ಜಿ ರಾಮ್‌ ಜಿ’ ಹೆಸರಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸುವ ಕೇಂದ್ರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

- ಯೋಜನೆಯ ಬಗ್ಗೆ ಸಂಪುಟ ತೀವ್ರ ಖಂಡನೆ- ಇಂದು ಸಿಎಂ ಸುದ್ದಿಗೋಷ್ಠಿ: ನಿಲುವು ಪ್ರಕಟ?

---

ಸಂಪೂರ್ಣ ತಿರಸ್ಕಾರಅಸಾಧ್ಯ: ಸಚಿವ ಎಚ್ಕೆಯೋಜನೆ ಅನುಷ್ಠಾನ ಕುರಿತು ಸರ್ಕಾರದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಎಚ್.ಕೆ.ಪಾಟೀಲ್‌, ಜಿ ರಾಮ್‌ ಜಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಅವು ಉದ್ಯೋಗ ಖಾತ್ರಿ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಪೂರಕವಾಗಿಲ್ಲ. ಹಾಗಂತ ಯೋಜನೆಯನ್ನು ರಾಜ್ಯ ಸರ್ಕಾರ ಸಂಪೂರ್ಣ ತಿರಸ್ಕರಿಸಲೂ ಸಾಧ್ಯವಿಲ್ಲ. ಅದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಹೀಗಾಗಿ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಮಾತನಾಡಲಿದ್ದಾರೆ ಎಂದರು.

-

=

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಂಜಿ-ನರೇಗಾ ಯೋಜನೆಯ ಉದ್ದೇಶಕ್ಕೆ ಧಕ್ಕೆ ಬರುವಂತೆ ‘ವಿಬಿ ಜಿ ರಾಮ್‌ ಜಿ’ ಹೆಸರಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸುವ ಕೇಂದ್ರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜತೆಗೆ, ರಾಜ್ಯದಲ್ಲಿ ವಿಕಸಿತ್‌ ಭಾರತ್‌ ಗ್ಯಾರಂಟಿ ಫಾರ್‌ ರೋಜ್ಗಾರ್‌ ಮತ್ತು ಆಜೀವಿಕ ಮಿಷನ್‌ (ಗ್ರಾಮೀಣ) ಕಾಯ್ದೆ (ವಿಬಿ ಜಿ ರಾಮ್‌ ಜಿ) ಯೋಜನೆಯನ್ನು ಅನುಷ್ಠಾನ ಮಾಡದೆ ತಿರಸ್ಕರಿಸಬೇಕೇ? ಅಥವಾ ತಿದ್ದುಪಡಿಗೆ ಕೇಂದ್ರಕ್ಕೆ ಪರಿಷ್ಕೃತ ಪ್ರಸ್ತಾವನೆ ಮಂಡಿಸಬೇಕೇ? ಎಂಬುದೂ ಸೇರಿ ಮುಂದಿನ ರೂಪುರೇಷೆ ಕುರಿತ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಡಲು ನಿರ್ಧರಿಸಲಾಗಿದೆ.

ಈ ಕುರಿತು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಪರಿಷ್ಕೃತ ಯೋಜನೆಗೆ ರಾಜ್ಯ ಸರ್ಕಾರದ ರಾಜಕೀಯ ವಿರೋಧವನ್ನು ಪ್ರತಿಪಾದಿಸುವ ಜತೆಗೆ ಯೋಜನೆ ಅನುಷ್ಠಾನ ಕುರಿತ ರಾಜ್ಯ ಸರ್ಕಾರದ ಮುಂದಿನ ನಡೆ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಆದರೆ ಮುಖ್ಯಮಂತ್ರಿ ಕಚೇರಿ ಮೂಲಗಳ ಪ್ರಕಾರ, ಯೋಜನೆಯ ರೂಪುರೇಷೆಗಳ ಬಗ್ಗೆ ಮಾತನಾಡುವುದಿಲ್ಲ. ಬದಲಿಗೆ ಎಐಸಿಸಿಯು ಜಿ ರಾಮ್‌ ಜಿ ವಿರುದ್ಧ ಅಭಿಯಾನ ರೂಪಿಸಿದ್ದು ಅದಕ್ಕೆ ಪೂರಕವಾಗಿ ಕೇಂದ್ರದ ನಿರ್ಧಾರ ಖಂಡಿಸಿ ಮಾತ್ರ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟದಲ್ಲಿ ತೀವ್ರ ಖಂಡನೆ:

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್‌, ಎಂಜಿ ನರೇಗಾ ಯೋಜನೆಯನ್ನು ರದ್ದುಪಡಿಸಿ ‘ಜಿ ರಾಮ್‌ಜಿ’ ಯೋಜನೆ ಜಾರಿ ಮಾಡಿರುವ ಕೇಂದ್ರ ಸರ್ಕಾರದ ನಿರ್ಣಯವನ್ನು ಸಂಪುಟ ತೀವ್ರವಾಗಿ ಖಂಡಿಸಿದೆ ಎಂದು ತಿಳಿಸಿದರು.

ಹಿಂದೆ ಯುಪಿಎ ಸರ್ಕಾರವು ಎಂಜಿ-ನರೇಗಾ ಯೋಜನೆ ತರುವ ಮೂಲಕ ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಪಂಚಾಯ್ತಿ ವಿಕೇಂದ್ರೀಕರಣಕ್ಕೆ ಒತ್ತು ನೀಡಿತ್ತು. ಅಂಥ ರಚನಾತ್ಮಕ, ಸಕಾರಾತ್ಮಕ ಯೋಜನೆ ರದ್ದುಪಡಿಸಿ ಪಂಚಾಯತ್ ರಾಜ್ ವ್ಯವಸ್ಥೆ ಬುಡಮೇಲು ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಜತೆಗೆ, ಯಾವ ಪಂಚಾಯ್ತಿಯಲ್ಲಿ ಕೆಲಸ ಮಾಡಬೇಕು ಎಂಬುದನ್ನೂ ಕೇಂದ್ರವೇ ನಿರ್ಧಾರ ಮಾಡುವುದಾಗಿ ಹೇಳಿದೆ. ಕೇಂದ್ರದ ಶೇ.90-ರಾಜ್ಯದ ಶೇ.10 ರ ಪಾಲು ಬದಲಿಗೆ 60-40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡುವುದಾಗಿ ಹೇಳಲಾಗಿದೆ. ಈ ಮೂಲಕ ಯೋಜನೆಯನ್ನು ವಿಫಲಗೊಳಿಸುವ ಮತ್ತು ಉದ್ಯೋಗ ಹಕ್ಕು ಕಸಿಯುವ ಕೆಲಸ ಮಾಡಲಾಗುತ್ತದೆ. ಹೀಗಾಗಿ ಇದನ್ನು ಖಂಡಿಸಲು ತೀರ್ಮಾನಿಸಲಾಗಿದೆ ಎಂದು ಎಚ್.ಕೆ. ಪಾಟೀಲ್ ಮಾಹಿತಿ ನೀಡಿದರು.