ಬಿಜೆಪಿ ಬಡವರ ವಿರೋಧಿ, ಹಸಿದವರ ಅನ್ನ ಕಸಿದ ಪಕ್ಷ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Mar 11, 2024, 01:25 AM IST
ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

ಬಿಜೆಪಿಯವರ ಮೇಲೆ ಇದ್ದಕ್ಕಿದ್ದಂತೆ ಜೆಡಿಎಸ್‌ನವರಿಗೆ ಪ್ರೀತಿ ಬಂದಿದೆ. ಬಿಜೆಪಿ ಅವರು ಹೇಳುವುದಕ್ಕೆಲ್ಲಾ ಜೆಡಿಎಸ್‌ನವರು ತಾಳ ಹಾಕುತ್ತಾರೆ. ನಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿ ಟೀಕೆ ಮಾಡಿದರೆ ಜೆಡಿಎಸ್ ಅವರು ಚಪ್ಪಾಳೆ ತಟ್ಟುತ್ತಾ ಇದ್ದಾರೆ. ಇವರೆಲ್ಲಾ ರೈತರ ಮಕ್ಕಳು, ಮಣ್ಣಿನ ಮಕ್ಕಳು...!

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಯಡಿಯೂರಪ್ಪ. ಆಫರೇಷನ್ ಕಮಲ ಮಾಡಿ ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಭಾನುವಾರ ನಗರದ ಮಂಡ್ಯ ವಿಶ್ವವಿದ್ಯಾಲಯ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ೨೦೧೮ರಲ್ಲಿ ಕುಮಾರಸ್ವಾಮಿ ಮನೆಗೆ ಹೋಗಿ ಕರೆದುಕೊಂಡು ಬಂದು ಮುಖ್ಯಮಂತ್ರಿ ಮಾಡಿದೆವು. ಆದರೆ, ಕುಮಾರಸ್ವಾಮಿ ವೆಸ್ಡೆಂಡ್ ಹೊಟೇಲ್‌ನಲ್ಲಿ ಕುಳಿತು ಅಧಿಕಾರ ಕಳೆದುಕೊಂಡರು. ಅವರನ್ನು ಅಧಿಕಾರದಿಂದ ಕೆಳಗಿಳಿಸಿದವರು ಬಿ.ಎಸ್.ಯಡಿಯೂರಪ್ಪ. ೧೭ ಶಾಸಕರನ್ನು ಅಪರೇಷನ್ ಮಾಡಿ ಕುಮಾರಸ್ವಾಮಿ ಸರ್ಕಾರವನ್ನು ತೆಗೆದುಹಾಕಿದರು. ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ ಜೊತೆಯೇ ಈಗ ಕುಮಾರಸ್ವಾಮಿ ಸೇರಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ದೇವೇಗೌಡರು ಯಾವುದೇ ಕಾರಣಕ್ಕೂ ನಾನು ಬಿಜೆಪಿ ಜೊತೆ ಹೋಗುವುದಿಲ್ಲ. ಮುಂದಿನ ಜನ್ಮ ಅಂತಾ ಇದ್ದರೆ ಮುಸ್ಲಿಂ ಆಗಿ ಹುಟ್ಟುತ್ತೇನೆ. ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸಿದ್ದ ದೇವೇಗೌಡರೇ ಇಂದು ಬಿಜೆಪಿಯನ್ನು ಅಪ್ಪಿಕೊಂಡಿರುವುದಾಗಿ ಕುಹಕವಾಡಿದರು.

ಅನ್ನ ಕಸಿದ ಬಿಜೆಪಿ:

ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ೭ ಕೆಜಿ ಅಕ್ಕಿ ನೀಡಿದ್ದೆ. ಬಿಜೆಪಿ ಅವರು ಅಧಿಕಾರಕ್ಕೆ ಬಂದ ಬಳಿಕ ಅದನನ್ನು ೫ ಕೆಜಿಗೆ ಇಳಿಸಿದರು. ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಹಠದೊಂದಿಗೆ ೨೦೨೩ರ ಚುನಾವಣೆಗೂ ಮುನ್ನ ೧೦ ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದೆ. ನಾವು ಅಧಿಕಾರಕ್ಕೆ ಬಂದ ನಂತರ ನಾವು ಕೇಳಿದರೂ ಕೇಂದ್ರ ಅಕ್ಕಿಯನ್ನು ಕೊಡಲಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಬಡವರ ವಿರೋಧಿಯಂತೆ ವರ್ತಿಸಿತು. ಅದಕ್ಕಾಗಿ ೫ ಕೆಜಿ ಅಕ್ಕಿ ಜೊತೆಗೆ ೧೭೦ ರು. ಹಣವನ್ನು ನೇರವಾಗಿ ಜನರ ಖಾತೆಗೆ ಹಾಕುತ್ತಿದ್ದೇನೆ. ನಾವೆಂದೂ ಮಾತಿಗೆ ತಪ್ಪಿ ನಡೆದಿಲ್ಲ ಎಂದರು.

ಜನರ ಆಶೀರ್ವಾದ ಪಡೆದು ಬಿಜೆಪಿ ಯಾವಾಗಲೂ ಅಧಿಕಾರಕ್ಕೆ ಬಂದಿಲ್ಲ. ಜೆಡಿಎಸ್ ಅವರು ಇನ್ನೊಬ್ಬರ ಹೆಗಲ ಮೇಲೆ ಕೂತು ಅಧಿಕಾರಕ್ಕೆ ಬಂದಿದ್ದಾರೆಯೇ ವಿನಃ ಸ್ವಂತ ಶಕ್ತಿಯಿಂದ ಜೆಡಿಎಸ್ ಅಧಿಕಾರಕ್ಕೆ ಬಂದಿಲ್ಲ. ನಾವು ಮಾತ್ರ ಜನ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದೇವೆ. ಈ ರಾಜ್ಯದಲ್ಲಿ ಜನರು ಪೂರ್ಣವಿಶ್ವಾಸ ತೋರಿಸಿರುವುದು ಕಾಂಗ್ರೆಸ್‌ಗೆ ಮಾತ್ರ ಎಂದರು.

ಬಿಜೆಪಿಯವರ ಮೇಲೆ ಇದ್ದಕ್ಕಿದ್ದಂತೆ ಜೆಡಿಎಸ್‌ನವರಿಗೆ ಪ್ರೀತಿ ಬಂದಿದೆ. ಬಿಜೆಪಿ ಅವರು ಹೇಳುವುದಕ್ಕೆಲ್ಲಾ ಜೆಡಿಎಸ್‌ನವರು ತಾಳ ಹಾಕುತ್ತಾರೆ. ನಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿ ಟೀಕೆ ಮಾಡಿದರೆ ಜೆಡಿಎಸ್ ಅವರು ಚಪ್ಪಾಳೆ ತಟ್ಟುತ್ತಾ ಇದ್ದಾರೆ. ಇವರೆಲ್ಲಾ ರೈತರ ಮಕ್ಕಳು, ಮಣ್ಣಿನ ಮಕ್ಕಳು ಎಂದು ಕುಹಕವಾಡಿದರು.

ಏನೂ ಮಾಡದಿದ್ದರೂ ಮಣ್ಣಿನ ಮಕ್ಕಳು..!

ಮೈಷುಗರ್ ಕಾರ್ಖಾನೆ ನಷ್ಟದಲ್ಲಿದೆ ೨೫ ಕೋಟಿ ರು. ಹಣ ಬಿಡುಗಡೆ ಮಾಡುವಂತೆ ಚಲುವರಾಯಸ್ವಾಮಿ ಕೇಳಿದ್ದರು. ನಾನು ೫೦ ಕೋಟಿ ರು. ಹಣ ನೀಡಿದೆ. ಹೊಸ ಕಾರ್ಖಾನೆ ಮಾಡಲು ಘೋಷಣೆ ಮಾಡಿದ್ದೇನೆ. ಮಣ್ಣಿನ ಮಕ್ಕಳು ಇದನ್ನೆಲ್ಲಾ ಮಾಡಿದ್ದರಾ. ಅವರು ಏನೂ ಮಾಡದಿದ್ದರೂ ಮಣ್ಣಿನ ಮಕ್ಕಳಾ ಎಂದು ಸಿದ್ದರಾಮಯ್ಯ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು.

ಮಂಡ್ಯ ಗಂಡು ಮೆಟ್ಟಿನ ನೆಲ ಎಂದು ಚಲುವರಾಯಸ್ವಾಮಿಗೆ ಕೃಷಿ ಸಚಿವ ಸ್ಥಾನ ನೀಡಿದ್ದೇವೆ. ಚಲುವರಾಯಸ್ವಾಮಿ ಮೇಲೆ ರೈತರ ಮಕ್ಕಳು ಗೂಬೆ ಕೂರಿಸಲು ಹೋದರು. ಆದರೆ, ಅದೂ ಕೂಡ ಸಾಧ್ಯವಾಗಲಿಲ್ಲ ಎಂದರು.

ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ಕೆ.ಎಂ.ಉದಯ್, ಕೆ.ಆರ್.ನಗರ ಶಾಸಕ ರವಿಶಂಕರ್, ಗೌರಿಬಿದನೂರು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮರಿತಿಬ್ಬೇಗೌಡ, ಮಂಡ್ಯ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಇತರರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು