ಕನ್ನಡಪ್ರಭ ವಾರ್ತೆ ಪಾಂಡವಪುರ
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಜಿಲ್ಲೆಯಲ್ಲಿ ಎರಡು ಪಕ್ಷಗಳಿಗೆ ಆನೆಬಲ ಬಂದಂತಾಗಿದೆ. ನಾವೆಲ್ಲರು ಒಂದೇ ಕುಟುಂಬದಂತೆ ಚುನಾವಣೆಯಲ್ಲಿ ಕೆಲಸ ಮಾಡಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮನವಿ ಮಾಡಿದರು.ಪಟ್ಟಣದ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್ ಅವರ ಪರಿವರ್ತನ ಟ್ರಸ್ಟ್ ಕಚೇರಿಗೆ ಭೇಟಿ ನೀಡಿ ಬಿಜೆಪಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಮಾತನಾಡಿ, ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿ ಮಾಡಲು ಬಿಜೆಪಿ-ಜೆಡಿಎಸ್ ಎರಡು ದೇಹ ಒಂದೇ ಜೀವ ಎಂಬಂತೆ ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಿ ಎಚ್ಡಿಕೆಯನ್ನು ಬಹುಮತ ಕೊಟ್ಟು ಗೆಲ್ಲಿಸಿ ಲೋಕಸಭೆಗೆ ಕಳುಹಿಸಬೇಕಾಗಿದೆ ಎಂದರು.
2018ರಲ್ಲಿ ಕಾಂಗ್ರೆಸ್ ನವರೊಂದಿಗೆ ಮೈತ್ರಿ ಸರಕಾರ ಮಾಡಿ ಸಾಕಷ್ಟು ನೋವು ಅನುಭವಿಸಿದ್ದೇವೆ. ಆ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಿಂದಲೇ ಜೆಡಿಎಸ್, ಬಿಜೆಪಿ ಪಕ್ಷಗಳು ಹುಟ್ಟಿಕೊಂಡಿವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕಪಾಠ ಕಲಿಸಬೇಕಾಗಿದೆ ಎಂದರು.ಏ.2ರಂದು ಪಟ್ಟಣದ ಟಿಎಪಿಸಿಎಂಎಸ್ ನಲ್ಲಿ ಜೆಡಿಎಸ್-ಬಿಜೆಪಿ ಪಕ್ಷದ ಜಂಟಿ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಆಗಮಿಸಬೇಕು. ಜತೆಗೆ ಏ.4 ರಂದು ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮಂಡ್ಯದ ಬಾಲಕರ ಕಾಲೇಜಿನ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳು ಇದ್ದಂತೆ. ಕಾಂಗ್ರೆಸ್ ಪಕ್ಷದವರ ರೀತಿ ಬೆನ್ನಿಗೆ ಚೂರಿಹಾಕುವ ಕೆಲಸ ಮಾಡೋಲ್ಲ. ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಮತಕೊಟ್ಟು ಗೆಲ್ಲಿಸುತ್ತೇವೆ ಎಂದರು.ಕಾರ್ಯಕರ್ತರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ವೈಮನಸ್ಸು ಬಿಟ್ಟು ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವಿಗೆ ಶ್ರಮಿಸೋಣ. ಕಾಂಗ್ರೆಸ್ ನವರು ದುಡ್ಡು ಇರುವ ಅಭ್ಯರ್ಥಿಯನ್ನು ತಂದು ಚುನಾವಣೆಗೆ ನಿಲ್ಲಿಸಿದ್ದಾರೆ. ಜಿಲ್ಲೆಯ ಜನರು ದುಡ್ಡಿಗೆ ತಮ್ಮ ಮತ ಮಾರಾಟ ಮಾಡಿಕೊಳ್ಳೋದಿಲ್ಲ. ಈ ಚುನಾವಣೆ ಹಣವಂತ ಹಾಗೂ ಹೃದಯವಂತನ ನಡುವೆ ನಡೆಯುತ್ತಿರುವ ಚುನಾವಣಾಗಿದೆ. ಹೃದಯವಂತ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಗೆಲ್ಲುವುದು ಖಚಿತವಾಗಿದೆ ಎಂದರು.
ಈ ವೇಳೆ ಜೆಡಿಎಸ್ ಅಧ್ಯಕ್ಷ ಎಸ್.ಮಲ್ಲೇಶ್, ಬಿಜೆಪಿ ಅಧ್ಯಕ್ಷ ಧನಂಜಯ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಳ ನವೀನ್ ಕುಮಾರ್, ಎಸ್.ಎನ್.ಟಿ. ಸೋಮಶೇಖರ್, ಮೈಶುಗರ್ ಮಾಜಿ ಅಧ್ಯಕ್ಷ ಜೆ. ಶಿವಲಿಂಗೇಗೌಡ, ಪುರಸಭೆ ಸದಸ್ಯ ಆರ್.ಸೋಮಶೇಖರ್, ಎಂ. ಗಿರೀಶ್, ಚಿಕ್ಕಾಡೆ ಪ್ರಸನ್ನ, ನಿರಂಜನ್ ಬಾಬು, ಚಿಕ್ಕಮರಳಿ ನವೀನ್‌ಕುಮಾರ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.ಇದಕ್ಕೂ ಮುನ್ನ ಬಿಜೆಪಿ ಕಚೇರಿಗೆ ಆಗಮಿಸಿದ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್ ಅಭಿನಂದಿಸಿದರು.