ಮೈಸೂರು : ‘ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರೋದಿಲ್ಲ. 2028ರಲ್ಲೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುತ್ತೆ. ಜೆಡಿಎಸ್-ಬಿಜೆಪಿಯವರು ಮೈತ್ರಿ ಮಾಡಿಕೊಂಡರೂ ಕೂಡ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ 2028ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘2028ಕ್ಕೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ, ಕಾಯಿರಿ’ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಹಾಸನದಲ್ಲಿ ಶನಿವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಸುಮ್ಮನೆ ರಾಜಕೀಯವಾಗಿ ಅವರು ಭಾಷಣ ಮಾಡಿದ್ದಾರೆ ಅಷ್ಟೇ. ಅವರು ಬಿಜೆಪಿ ಜೊತೆ ಸೇರಿಕೊಂಡಿರುವ ಕಾರಣಕ್ಕೆ ಅಧಿಕಾರಕ್ಕೆ ಬರಬಹುದು ಎಂದುಕೊಂಡಿದ್ದಾರೆ. ಆದರೆ, ಬಹುಮತ ಬಂದರೆ ಬಿಜೆಪಿಯವರು ಜೆಡಿಎಸ್ ಗೆ ಯಾಕೆ ಅಧಿಕಾರ ಬಿಟ್ಟುಕೊಡ್ತಾರೆ ಎಂದು ಪ್ರಶ್ನಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಇಬ್ಬರಿಗೂ ಬಹುಮತ ಬರೋದಿಲ್ಲ. ಒಂದು ವೇಳೆ ಬಂದರೂ ಜೆಡಿಎಸ್ ಗೆ ಅಧಿಕಾರ ಕೊಡೋದಿಲ್ಲ. 2028ಕ್ಕೂ ನಮ್ಮದೇ ಅಧಿಕಾರ. ಸಿಎಂ ಯಾರು, ನಾಯಕತ್ವ ಯಾರದ್ದು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
‘ನಮಗೂ ಸಮಯ ಬರುತ್ತೆ’ ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಯಾವ ಸಂದರ್ಭದಲ್ಲಿ ಸಮಯ ಬರುತ್ತೆ ಎಂಬುದು ಗೊತ್ತಿಲ್ಲ. ಅವರು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. 17 ಸ್ಥಾನ ಪಡೆದಿರುವವರಿಗೆ ಹೇಗೆ ಅಧಿಕಾರ ಸಿಗುತ್ತದೆ? ಎಂದು ಪ್ರಶ್ನಿಸಿದರು.
ಸುಮ್ಮನೆ ರಾಜಕೀಯ ಭಾಷಣ ಮಾಡಿದಾಕ್ಷಣ ಆಗುತ್ತದೆಯೇ?. 2004ರಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಜೆಡಿಎಸ್ 59 ಸ್ಥಾನ ಗೆದ್ದಿತ್ತು. ಈಗ ಎಷ್ಟಿದ್ದಾರೆ? ಎಂದು ಪ್ರಶ್ನಿಸಿದರು.