ಎಸ್‌ಐಆರ್‌ ಹೋರಾಟಕ್ಕೆ ಬಿಜೆಪಿ ಲಗ್ಗೆ

Published : Jul 06, 2026, 05:00 AM IST
SIR

ಸಾರಾಂಶ

ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಪ್ರಕ್ರಿಯೆಯು ಮನೆ-ಮನೆಗಳ ಬದಲು ಕೆಲವೆಡೆ ಮಸೀದಿ, ಮಂದಿರ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಕಾರಣ ಗೊಂದಲಗಳು ಹಾಗೂ ಎಡವಟ್ಟುಗಳು ಸೃಷ್ಟಿಯಾಗಿವೆ.

  ಬೆಂಗಳೂರು :  ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಪ್ರಕ್ರಿಯೆಯು ಮನೆ-ಮನೆಗಳ ಬದಲು ಕೆಲವೆಡೆ ಮಸೀದಿ, ಮಂದಿರ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಕಾರಣ ಗೊಂದಲಗಳು ಹಾಗೂ ಎಡವಟ್ಟುಗಳು ಸೃಷ್ಟಿಯಾಗಿವೆ. ಹೀಗಾಗಿ ಇದರ ವಿರುದ್ಧ ಹೋರಾಟಕ್ಕೆ ಧುಮುಕಲು ರಾಜ್ಯದ ಪ್ರಮುಖ ಪ್ರತಿಪಕ್ಷ ಬಿಜೆಪಿ ನಿರ್ಧರಿಸಿದೆ. ಇದರ ಮೊದಲ ಭಾಗವಾಗಿ ಸೋಮವಾರ ಮಿತ್ರಪಕ್ಷ ಜೆಡಿಎಸ್‌ ಜತೆ ಸೇರಿಕೊಂಡು ಚುನಾವಣಾ ಆಯೋಗಕ್ಕೆ ಎಸ್‌ಐಆರ್‌ ಅಕ್ರಮಗಳ ದೂರು ನೀಡಲು ತೀರ್ಮಾನಿಸಿದೆ.

ಎಸ್ಐಆರ್‌ ಪ್ರಕ್ರಿಯೆಯಲ್ಲಿ ಪ್ರಮಾದಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಭಾನುವಾರ ಪಕ್ಷದ ಕಚೇರಿಯಲ್ಲಿ ಬೆಳಗ್ಗೆ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದರೆ ಮಧ್ಯಾಹ್ನ ಕೋರ್ ಕಮಿಟಿ ಸಭೆ ನಡೆಸಿತು. ಈ ವೇಳೆ, ‘ರಾಜ್ಯ ಪದಾಧಿಕಾರಿಗಳು ಹಾಗೂ ಹಿರಿಯ ನಾಯಕರನ್ನೊಳಗೊಂಡ ಕೋರ್ ಕಮಿಟಿ ಸದಸ್ಯರು ತಮಗೆ ವಹಿಸಿರುವ ಉಸ್ತುವಾರಿ ವಿಭಾಗ, ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಬೇಕು. ಇಡೀ ಪ್ರಕ್ರಿಯೆಯಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಸೂಚನೆ ನೀಡಿದೆ.

ಸಮರ್ಪಕವಾಗಿ ನಡೆಯಬೇಕು:

ಎಸ್‌ಐಆರ್‌ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಡೀ ಪ್ರಕ್ರಿಯೆಯನ್ನು ಗೊಂದಲಮಯವಾಗಿಸುತ್ತಿದೆ. ಹೀಗಾಗಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ಬಗ್ಗೆ ನಿಗಾ ವಹಿಸಬೇಕು ಎಂಬ ನಿಲುವಿಗೆ ಬರಲಾಗಿದೆ.

ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೋರ್ ಕಮಿಟಿ ಸಭೆಯಲ್ಲಿ ಎಸ್‌ಐಆರ್‌ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಇಡೀ ವ್ಯವಸ್ಥೆ ಹಾಳು ಮಾಡುವಂಥ ಕೆಲಸ ಮಾಡುತ್ತಿದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಎಸ್‌ಐಆರ್‌ ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯಬೇಕು. ನಮ್ಮ ಪಕ್ಷದ ಕಾರ್ಯಕರ್ತರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.

ಹೊಣೆಗಾರಿಕೆ:

ಕೋರ್ ಕಮಿಟಿಯ ಪ್ರತಿಯೊಬ್ಬ ಸದಸ್ಯರಿಗೆ ಒಂದೊಂದು ಪಕ್ಷದ ಸಂಘಟನಾತ್ಮಕ ವಿಭಾಗದ ಜವಾಬ್ದಾರಿ ವಹಿಸಲಾಗಿದೆ. ಒಂದೊಂದು ವಿಭಾಗದಲ್ಲಿ ಸುಮಾರು ಮೂರು ಜಿಲ್ಲೆಗಳು ಇರುತ್ತವೆ. ಆ ಜಿಲ್ಲೆಗಳಿಗೆ ಕೋರ್ ಕಮಿಟಿ ಸದಸ್ಯರು ಪ್ರವಾಸ ಕೈಗೊಂಡು ಪಕ್ಷದ ಹಾಲಿ ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರು ಹಾಗೂ ಮುಖಂಡರನ್ನು ಭೇಟಿ ಮಾಡಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕಾಗಿ ಕೈಗೆತ್ತಿಕೊಳ್ಳುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕೋರ್‌ ಕಮಿಟಿ ಸಭೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಮಾಜಿ ಸಚಿವ ಸಿ.ಟಿ.ರವಿ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಚು.ಆಯೋಗ ತಂಡ ಇಂದು ರಾಜ್ಯಕ್ಕೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಗೊಂದಲಗಳ ಬಗ್ಗೆ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡವು ಸೋಮವಾರ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿದೆ.

ಬಿಜೆಪಿ ನಿರ್ಧಾರಗಳೇನು?

- ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ. ಈ ಬಗ್ಗೆ ಬಿಜೆಪಿ ಸಭೆ

- ಎಸ್‌ಐಆರ್‌ ಮೇಲೆ ನಿಗಾ. ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಿರ್ಧಾರ

- ಎಲ್ಲ ಕೋರ್ ಕಮಿಟಿ ಸದಸ್ಯರಿಗೆ ಪಕ್ಷದ ಸಂಘಟನಾತ್ಮಕ ವಿಭಾಗದ ಜವಾಬ್ದಾರಿ

- ಪ್ರತಿ ವಿಭಾಗದಲ್ಲಿ 3 ಜಿಲ್ಲೆಗಳು. ಆ ಜಿಲ್ಲೆಗಳಿಗೆ ಕೋರ್‌ ಕಮಿಟಿ ಸದಸ್ಯರ ಪ್ರವಾಸ

- ಹಾಲಿ ಶಾಸಕ/ಸಂಸದರು, ಮಾಜಿ ಶಾಸಕ/ಸಂಸದರ ಜತೆ ಪ್ರವಾಸ ವೇಳೆ ಭೇಟಿ

- ಎಸ್‌ಐಆರ್‌ ಪ್ರಕ್ರಿಯೆ ಇನ್ನಷ್ಟು ಚುರುಕಾಗಿ ನಡೆಯುವಂತೆ ನೋಡಿಕೊಳ್ಳಲು ನಿರ್ಧಾರ 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಗೊಂದಲ ಬೆನ್ನಲ್ಲೇ ಕೇಂದ್ರ ಆಯೋಗದ ತಂಡ ನಾಳೆ ರಾಜ್ಯಕ್ಕೆ
SIRನಲ್ಲಿ ಗೊಂದಲ: ಚುನಾವಣಾಧಿಕಾರಿಗೆ ಬಿಜೆಪಿ ದೂರು