ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆಯ ಲೋಪಗಳ ಕುರಿತು ರಾಜ್ಯ ಬಿಜೆಪಿ ನಿಯೋಗವು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ನಿಯೋಗವು ಶನಿವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅವರನ್ನು ಭೇಟಿಯಾಗಿ ದೂರು ನೀಡಿದೆ. ಎಐಆರ್ ಪ್ರಕ್ರಿಯೆ ಕುರಿತು ಕೇಳಿ ಬಂದಿರುವ ಆರೋಪಗಳ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸುವಂತೆ ಆಗ್ರಹಿಸಲಾಗಿದೆ.

ಅಕ್ರಮಕ್ಕೆ ಎಡೆ:

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆ ವಿತರಿಸಿ ಬಳಿಕ ಭರ್ತಿ ಮಾಡಿಸಿಕೊಂಡು ವಾಪಸ್‌ ಪಡೆಯಬೇಕು. ಆದರೆ ಸಮುದಾಯ ಭವನಗಳು, ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳ ಮುಖಾಂತರ ಎಸ್‌ಐಆರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದು ಎಸ್‌ಐಆರ್‌ನ ಮೂಲ ಉದ್ದೇಶಕ್ಕೆ ವಿರುದ್ಧ. ಇಂಥ ಕಾರ್ಯಗಳು ಮತದಾರರ ಪಟ್ಟಿಯಲ್ಲಿ ತಪ್ಪುಗಳು ಮತ್ತು ಅಕ್ರಮಗಳ ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಹೀಗಾಗಿ ಈ ಎಸ್ಐಆರ್‌ ಪ್ರಕ್ರಿಯೆ ಅನುಷ್ಠಾನದಲ್ಲಿ ಕೇಳಿ ಬಂದಿರುವ ಆರೋಪಗಳ ಬಗ್ಗೆ ತಕ್ಷಣ ತನಿಖೆ ಮಾಡಿಸಬೇಕು. 


ಮನೆ-ಮನೆಗೆ ತೆರಳಿ ಗಣತಿ ನಮೂನೆ ನೀಡಬೇಕು

ನಿಯಮಾನುಸಾರ ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಗಣತಿ ನಮೂನೆ ನೀಡಬೇಕು. ಅಕ್ರಮ ವಲಿಸಿಗರು ಅಥವಾ ಅನರ್ಹ ವ್ಯಕ್ತಿಗಳು ಮತದಾರರ ಪಟ್ಟಿಗೆ ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕು. ಬಿಎಲ್‌ಒಗಳು ಕೇಂದ್ರ ಚುನಾವಣಾ ಆಯೋಗದ ನಿರ್ದೇಶದ ಅನುಸಾರ ಸ್ವತಂತ್ರವಾಗಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಎಸ್‌ಐಆರ್‌ ಪ್ರಕ್ರಿಯೆಯ ಸಮಗ್ರತೆ ಕಾಯ್ದುಕೊಳ್ಳಲು ಸ್ವತಂತ್ರ ವೀಕ್ಷಕರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದ್ದಾರೆ.