ದೊಡ್ಡಬಳ್ಳಾಪುರ: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್) ಜಿಲ್ಲೆಯಾದ್ಯಂತ ಆರಂಭವಾಗಿದ್ದು ಬಿಎಲ್ಒಗಳು ಕಡ್ಡಾಯವಾಗಿ ಮನೆ ಮನೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆ (ಎನ್ಯುಮರೇಶನ್‌ ಫಾರ್ಮ್) ವಿತರಿಸಿ, ಭರ್ತಿ ಮಾಡಿಸಿ ವಾಪಸ್ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ ಸಿ ಜಾಫರ್ ಅಧಿಕಾರಿಗಳಿಗೆ ಸೂಚಿಸಿದರು

ದೊಡ್ಡಬಳ್ಳಾಪುರ: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್) ಜಿಲ್ಲೆಯಾದ್ಯಂತ ಆರಂಭವಾಗಿದ್ದು ಬಿಎಲ್ಒಗಳು ಕಡ್ಡಾಯವಾಗಿ ಮನೆ ಮನೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆ (ಎನ್ಯುಮರೇಶನ್‌ ಫಾರ್ಮ್) ವಿತರಿಸಿ, ಭರ್ತಿ ಮಾಡಿಸಿ ವಾಪಸ್ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ ಸಿ ಜಾಫರ್ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರ ಪಟ್ಟಿಯಲ್ಲಿ ಯಾವುದೇ ಅರ್ಹ ನಾಗರಿಕರು ಬಿಟ್ಟು ಹೋಗಬಾರದು ಮತ್ತು ಯಾವುದೇ ಅನರ್ಹ ವ್ಯಕ್ತಿಗಳನ್ನು ಸೇರ್ಪಡೆ ಮಾಡಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗದಿಂದ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದರು. ಮನೆಗೆ ಬರುವ ಬಿಎಲ್ಒಗಳು ಎರಡು ಗಣತಿ ನಮೂನೆಗಳನ್ನು (ಎನ್ಯುಮರೇಶನ ಫಾರ್ಮ್) ನೀಡುತ್ತಾರೆ. ಮತದಾರರು ಎರಡನ್ನು ಭರ್ತಿ ಮಾಡಿ ಸಹಿ ಮಾಡಬೇಕು. ಒಂದನ್ನು ಸ್ವೀಕೃತಿಯಾಗಿ ಮತದಾರರಿಗೆ ಮರಳಿಸಿದರೆ, ಇನ್ನೊಂದು ಪ್ರತಿಯನ್ನು ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಿಎಲ್ಒಗಳ ಪಾತ್ರ ದೊಡ್ಡದು, ಗಣತಿ ನಮೂನೆ ಸ್ವೀಕೃತಿಯಾದ ನಂತರ ಅವುಗಳನ್ನು ಡಿಜಟಲೀಕರಣ(ಬಿಎಲ್ಒ ಆಪ್) ಮಾಡಿ ನಂತರ ಅವುಗಳನ್ನು ಸುರಕ್ಷಿತವಾಗಿ ಇಡಬೇಕಾಗಿರುವುದು ತಹಸೀಲ್ದಾರ್ ಅವರ ಜವಾಬ್ದಾರಿ ಎಂದು ಹೇಳಿದರು.

ಎಸ್ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು, ಇತ್ತೀಚಿನ ಘಟನಾವಳಿಗಳು ಗಮನಿಸಿದರೆ ಸಾಕಷ್ಟು ಆರೋಪಗಳು ಬರುವುದು ಸಹಜ, ಅಂತಹ ಆರೋಪಿಗಳಿಗೆ ಅಧಿಕಾರಿಗಳು ಆಸ್ಪದ ನೀಡಬೇಡಿ, ಅಧಿಕಾರಿಗಳು ಯಾರಿಗೂ ಸಹಾಯ ಮಾಡೋದು ಬೇಡ, ಯಾರಿಗೂ ತೊಂದರೆ ಕೊಡೋದು ಬೇಡ. ಗುಂಪು ಗುಂಪಾಗಿ ಎಸ್ಐಆರ್ ಪ್ರಕ್ರಿಯೆ ಮಾಡುವುದು ಬೇಡ, ತಪ್ಪಿತಸ್ಥರು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು, ನಿಮ್ಮ ಜವಾಬ್ದಾರಿಯಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ಕೆಲಸ ಮಾಡಿ, ಪಾರದರ್ಶಕವಾಗಿ ನಡೆಯಲಿ ಎಂದು ತಿಳಿಸಿದರು.

ಮನೆ ಮನೆ ಭೇಟಿ ಪ್ರಕ್ರಿಯೆ ಮುಗಿದ ನಂತರ ಆಗಸ್ಟ್ 05 ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಆ ಸಂದರ್ಭದಲ್ಲಿ ಬರುವಂತಹ ಹಕ್ಕು, ಆಕ್ಷೇಪಣೆ ಸರಿಪಡಿಸಲು ಸಿದ್ಧತೆ ಕೈಗೊಳ್ಳಿ ಎಂದರಲ್ಲದೆ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7ರಂದು ಪ್ರಕಟಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಸಿಇಒ ಡಾ ವಾಸಂತಿ ಅಮರ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಫೋಟೋ-

4ಕೆಡಿಬಿಪಿ1-

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್‌ ಅಧ್ಯಕ್ಷತೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಯಿತು.