‘ಮೋದಿಗೆ ಪರಿವಾರವೇ ಇಲ್ಲ’ (ಮೋದಿ ಸಂಸಾರಸ್ಥ ಅಲ್ಲ) ಎಂಬ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಟೀಕೆ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ನಾಯಕರು ತಮ್ಮ ನಾಯಕನ ನೆರವಿಗೆ ಧಾವಿಸಿದ್ದಾರೆ.
ಪಿಟಿಐ ನವದೆಹಲಿ
‘ಮೋದಿಗೆ ಪರಿವಾರವೇ ಇಲ್ಲ’ (ಮೋದಿ ಸಂಸಾರಸ್ಥ ಅಲ್ಲ) ಎಂಬ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಟೀಕೆ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ನಾಯಕರು ತಮ್ಮ ನಾಯಕನ ನೆರವಿಗೆ ಧಾವಿಸಿದ್ದಾರೆ.
ಬಹುತೇಕ ಬಿಜೆಪಿ ನಾಯಕರು ಸೋಮವಾರ ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ‘ಮೋದಿ ಕಾ ಪರಿವಾರ್’ ಎಂದು ಪ್ರತ್ಯಯ ಹಾಕಿದ್ದಾರೆ.
ವಿಪಕ್ಷಗಳ ಟೀಕೆಯನ್ನೇ ಚುನಾವಣೆ ಅಸ್ತ್ರ ಮಾಡಿಕೊಳ್ಳುವ ಬಿಜೆಪಿ ನಾಯಕರೂ ಈ ಬಾರಿಯೂ ಅದನ್ನೇ ಆರ್‌ಜೆಡಿ ನಾಯಕನ ವಿರುದ್ಧ ಅಸ್ತ್ರ ಮಾಡಿಕೊಂಡಿದ್ದಾರೆ.
2014ರಲ್ಲಿ ಕಾಂಗ್ರೆಸ್ಸಿಗರು ಮೋದಿ ಚಿಕ್ಕವರಿದ್ದಾಗ ಮಾಡುತ್ತಿದ್ದ ಚಹಾ ವ್ಯಾಪಾರ ವೃತ್ತಿ ಟೀಕಸಿದಾಗ, ಮೋದಿ ‘ಚಾಯ್ ಪೇ ಚರ್ಚಾ’ ಆರಂಭಿಸಿ ತಿರುಗೇಟು ನೀಡಿದ್ದರು.
ಕಳೆದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಮೋದಿ ಅವರನ್ನು ‘ಚೌಕಿದಾರ್ ಚೋರ್ ಹೈ’ (ಕಾವಲುಗಾರನೇ ಕಳ್ಳ) ಎಂದಿದ್ದರು.
ಆಗ ಬಿಜೆಪಿಗರು ‘ಮೈ ಭೀ ಚೌಕಿದಾರ್’ ಆಂದೋಲನ ಆರಂಭಿಸಿದ್ದರು.ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕರ್ನಾಟಕ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಆದಿಯಾಗಿ ಅನೇಕರು ಟ್ವೀಟರ್ ಸೇರಿದಂತೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮನ್ನು ತಾವು ‘ಮೋದಿ ಕಾ ಪರಿವಾರ್’ (ಮೋದಿ ಅವರ ಕುಟುಂಬ) ಎಂದು ಘೋಷಿಸಿಕೊಂಡಿದ್ದಾರೆ.
ಅನೇಕ ಮೋದಿ ಬೆಂಬಲಿತ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಪುಟಗಳಲ್ಲಿ ಅದೇ ಬದಲಾವಣೆಯನ್ನು ಮಾಡಿದ್ದಾರೆ.ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 16-17 ವರ್ಷಗಳಿಂದ ಮೋದಿ ವಿರುದ್ಧ ವಿಪಕ್ಷಗಳು ವೈಯಕ್ತಿಕ ದಾಳಿಗಳನ್ನು ನಡೆಸುತ್ತಿವೆ.
ಈ ನಡುವೆ ಭಾನುವಾರ ಪಟನಾದಲ್ಲಿ ನಡೆದ ಸಮಾವೇಶದಲ್ಲಿ ಮತ್ತೊಮ್ಮೆ ಮೋದಿ ವಿರುದ್ಧ ಇಂತಹ ಕ್ಷುಲ್ಲಕ ಟೀಕೆಗಳನ್ನು ಲಾಲು ಮಾಡಿದ್ದಾರೆ. ಇದು ದುಃಖಕರ ಮತ್ತು ನೋವಿನ ಸಂಗತಿ’ ಎಂದು ಕಿಡಿಕಾರಿದರು.
‘ಅವರು (ಯಾದವ್) ಮೋದಿ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ಮೋದಿಗೆ ಇಡೀ ದೇಶವೇ ಅವರ ಕುಟುಂಬ ಎಂಬುದನ್ನು ನಾನು ಲಾಲುಗೆ ನೆನಪಿಸಲು ಬಯಸುತ್ತೇನೆ’ ಎಂದು ತ್ರಿವೇದಿ ಹೇಳಿದರು.