ನವದೆಹಲಿ: ಭಾರತಕ್ಕಿಂತ ಪಾಕಿಸ್ತಾನದಲ್ಲೇ ನಿರುದ್ಯೋಗ ಪ್ರಮಾಣ ಕಡಿಮೆ ಎಂಬ ರಾಹುಲ್ ಪ್ರಶಂಸೆ ಬಗ್ಗೆ ಕಿಡಿಕಾರಿರುವ ಬಿಜೆಪಿ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಗೆ ನೆರೆದೇಶದ ಮೇಲೆ ಅಷ್ಟೇಕೆ ಪ್ರೀತಿ ಎಂದು ಪ್ರಶ್ನಿಸಿದೆ.
ಈ ಕುರಿತು ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ಪ್ರತ್ಯೂಷ್ ಕಾಂತ್, ‘ದೇಶದ ಬಗ್ಗೆ ಒಂದೂ ಒಳ್ಳೆಯ ಮಾತನಾಡದ ಕಲೆಯನ್ನು ರಾಹುಲ್ ಸಿದ್ಧಿಸಿಕೊಂಡಿದ್ದಾರೆ.
ಅದು ದೇಶದೊಳಗೇ ಇರಬಹುದು ಅಥವಾ ದೇಶದ ಹೊರಗೆ ಹೋದಾಗಲಾದರೂ ಇರಬಹುದು. ಪಾಕಿಸ್ತಾನದ ಶೇ.40ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದ್ದರೂ ರಾಹುಲ್‌ಗೆ ಮಾತ್ರ ಆ ಬಗ್ಗೆ ಅರಿವಿಲ್ಲ.
ಇದು ರಾಹುಲ್ ಜ್ಞಾನವನ್ನು ಎಲ್ಲರಿಗೂ ತೋರಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.ಇದೇ ವೇಳೆ ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಆವರಣದಲ್ಲಿ ಕಾಂಗ್ರೆಸ್ ಸಂಸದ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದಾಗಲೂ ಅದನ್ನು ಕಾಂಗ್ರೆಸ್ ನಿರಾಕರಿಸಿತ್ತು.
ಅವರಿಗೇಕೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮೇಲೆ ಅಷ್ಟು ಪ್ರೀತಿ ಎಂದು ಕಾಂತ್ ಪ್ರಶ್ನಿಸಿದರು.ಅಲ್ಲದೆ ಬೆಂಗಳೂರು ಸ್ಫೋಟದ ಪ್ರಕರಣದ ವೇಳೆಯೂ ಅದನ್ನು ಕಡೆಗಣಿಸುವ ಯತ್ನವನ್ನು ಕಾಂಗ್ರೆಸ್ ಮಾಡಿತು ಎಂದು ಕಾಂತ್ ಕಿಡಿಕಾರಿದರು.