ಬಿಜೆಪಿ ನಾಯಕರು ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ : ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ

KannadaprabhaNewsNetwork |  
Published : Aug 10, 2025, 01:30 AM ISTUpdated : Aug 10, 2025, 09:48 AM IST
50 | Kannada Prabha

ಸಾರಾಂಶ

 ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯವ್ಯೆಸಗುತ್ತಿದ್ದರೂ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ನರೇಂದ್ರ ಮೋದಿ ಅವರನ್ನು ನ್ಯಾಯ ಕೇಳುವ ಧೈರ್ಯ ಮಾಡುತ್ತಿಲ್ಲ, ಅವರು ನ್ಯಾಯ ಕೇಳದಿದ್ದರೆ ಕರ್ನಾಟಕದ ಜನತೆಗೆ ಮಾಡುವ ದ್ರೋಹವಾಗಿದೆ ಎಂದರಲ್ಲದೆ, ಕೇಂದ್ರ ಸರ್ಕಾರ ತೆರಿಗೆ ಪಾಲನ್ನು ನೀಡುತ್ತಿದೆ.

 ನಂಜನಗೂಡು :  ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿದ್ದ ಜಿಎಸ್‌.ಟಿ ತೆರಿಗೆ ಪಾಲನ್ನು ನೀಡುವಲ್ಲಿ ಅನ್ಯಾಯವೆಸಗುತ್ತಿದೆ, ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವುದಾಗಿ ಹೇಳಿ ಒಂದು ಬಿಡುಗಾಸನ್ನು ಬಿಡುಗಡೆ ಮಾಡಿಲ್ಲ, ನಾನು ಹೇಳುವುದು ನೂರಕ್ಕೆ ನೂರು ಸತ್ಯ, ನಾನು ಹೇಳುವುದು ಸುಳ್ಳು ಎಂದು ಆರೋಪಿಸುವ ಬಿಜೆಪಿ ನಾಯಕರು ಒಂದೇ ವೇದಿಕೆಗೆ ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಥಾಹ್ವಾನ ನೀಡಿದರು.

ತಾಲೂಕಿನ ಹದಿನಾರು ಗ್ರಾಮದಲ್ಲಿ ಮೈಸೂರು ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದ ಏರ್ಪಡಿಸಿದ್ದ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1,108 ಕೋಟಿ ಮೌಲ್ಯದ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಜಿಎಸ್‌.ಟಿ ತೆರಿಗೆ ಕಲೆಕ್ಷನ್ ನಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದೆ, ಆದರೆ ಕೇಂದ್ರ ಸರ್ಕಾರ ರಾಜ್ಯದ ಪಾಲನ್ನ ಸರಿಯಾಗಿ ವಿತರಣೆ ಮಾಡುತ್ತಿಲ್ಲ, 14ನೇ ಹಣಕಾಸು ಯೋಜನೆಯಲ್ಲಿ ಶೇ. 4.7 ರಷ್ಟು ತೆರಿಗೆ ಪಾಲು ನೀಡಲಾಗಿತ್ತು, 15ನೇ ಹಣಕಾಸು ಯೋಜನೆಯಲ್ಲಿ ಶೇ 3.6 ಕ್ಕೆ ಇಳಿದಿದೆ, ಅಲ್ಲದೆ 5,495 ಕೋಟಿ ವಿಶೇಷ ಅನುದಾನ, ಕೆರೆ ಅಭಿವೃದ್ಧಿ ಮತ್ತು ಪೆರಿಫೆರಿ ರಸ್ತೆ ನಿರ್ಮಾಣಕ್ಕೆ 6 ಸಾವಿರ ಕೋಟಿ ಸೇರಿದಂತೆ 11,495 ಕೋಟಿ ರು.ಗಳನ್ನು ರಾಜ್ಯಕ್ಕೆ ಕೊಡಬೇಕಿತ್ತು, ಅಲ್ಲದೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಗಳನ್ನು ಘೋಷಿಸಿ ಇಂದಿಗೂ ಒಂದು ಬಿಡುಗಾಸನ್ನು ಬಿಡುಗಡೆ ಮಾಡಿಲ್ಲ ಎಂದು ಅವರು ದೂರಿದರು.

ಕರ್ನಾಟಕದ ಜನತೆಗೆ ಮಾಡು ದ್ರೋಹ:

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯವ್ಯೆಸಗುತ್ತಿದ್ದರೂ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ನರೇಂದ್ರ ಮೋದಿ ಅವರನ್ನು ನ್ಯಾಯ ಕೇಳುವ ಧೈರ್ಯ ಮಾಡುತ್ತಿಲ್ಲ, ಅವರು ನ್ಯಾಯ ಕೇಳದಿದ್ದರೆ ಕರ್ನಾಟಕದ ಜನತೆಗೆ ಮಾಡುವ ದ್ರೋಹವಾಗಿದೆ ಎಂದರಲ್ಲದೆ, ಕೇಂದ್ರ ಸರ್ಕಾರ ತೆರಿಗೆ ಪಾಲನ್ನು ನೀಡುತ್ತಿದೆ ಎಂದು ಆರೋಪಿಸುವ ಬಿಜೆಪಿ ನಾಯಕರನ್ನು ಒಂದೇ ವೇದಿಕೆಗೆ ನಾನು ಅನೇಕ ಸಾರಿ ಚರ್ಚೆಗೆ ಕರೆದಿದ್ದೇನೆ, ಆದರೂ ನನ್ನ ಆಹ್ವಾನವನ್ನು ಅವರು ಸ್ವೀಕರಿಸಿಲ್ಲ ನಾನು ಹೇಳುವುದು ನೂರಕ್ಕೆ ನೂರು ಸತ್ಯ ಸುಳ್ಳು ಎನ್ನುವ ಬಿಜೆಪಿಗರು ಈಗಲೂ ಒಂದೇ ವೇದಿಕೆಗೆ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದರು.

ಬಿಜೆಪಿಗರಿಗೆ ಅಧಿಕಾರಗ ದಾಹ:

ಬಿಜೆಪಿಗರು ಎಂದಿಗೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ, ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಿ ಇವಿಎಂ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ, ರಾಜ್ಯದಲ್ಲಿಯೂ ಸಹ ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ, ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರೋಧ ನೀತಿಯಾಗಿದೆ, ಬಿಜೆಪಿಗರು ಬರೀ ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಹೇಳುತ್ತಾರೆ ಅಷ್ಟೇ, ಆದರೆ ಅವರು ಬರೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ನೀತಿಯನ್ನು ಅನುಸರಿಸುವುದಿಲ್ಲ ಎಂದು ಅವರು ಟೀಕಿಸಿದರು.

ಅಧಿಕಾರ ದಾಹದಿಂದ ಮತ ಕಳ್ಳತನಕ್ಕೆ ಇಳಿದಿದ್ದಾರೆ, ಈ ಬಗ್ಗೆ ಒಂದು ಕ್ಷೇತ್ರದಲ್ಲಿ ಸಂಪೂರ್ಣವಾಗಿ ನಾವು ಸಂಶೋಧನೆ ನಡೆಸಿ ರಾಹುಲ್ ಗಾಂಧಿ ಅವರು ಈ ಬಗ್ಗೆ ಲೋಕಸಭೆಯಲ್ಲಿ ವಿಷಯ ಮಂಡನೆ ಮಾಡಿ ಮಾಧ್ಯಮದ ಜೊತೆಯು ದಾಖಲಾತಿ ಪ್ರದರ್ಶನ ಮಾಡಿದ್ದಾರೆ, ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಬೇಕಾದರೆ ನಾವೆಲ್ಲರೂ ಸಂವಿಧಾನ ರಕ್ಷಣೆಗೆ ಮುಂದಾಗಬೇಕು ಸಂವಿಧಾನ ಉಳಿಸಿದಲ್ಲಿ ಸಂವಿಧಾನ ನಮ್ಮನ್ನು ಕಾಪಾಡುತ್ತದೆ ಎಂದರು.

ಗ್ಯಾರಂಟಿಗಳ ಅನುಷ್ಠಾನದಿಂದ ತಲಾದಾಯ ಹೆಚ್ಚಳ:

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎಲ್ಲಾ ವರ್ಗದ, ಎಲ್ಲ ಜಾತಿಯ ಜನರಿಗೂ ಸಮಾನ ಅವಕಾಶ ಕಲ್ಪಿಸಬೇಕು, ಬಡವ ಶ್ರೀಮಂತ ಎಂಬ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂಬ ಹಿತದೃಷ್ಟಿಯಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಎಲ್ಲ ವರ್ಗದ ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿದೆ, ಇದರಿಂದಾಗಿ ಜನರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಿದೆ ಆರ್ಥಿಕ ಚಟುವಟಿಕೆಗಳು ಗರಿ ಗೆರಿಗೆದರಿ ಕರ್ನಾಟಕ ರಾಜ್ಯ 2.4 ಲಕ್ಷ ತಲಾದಾಯವನ್ನು ಹೊಂದುವ ಮೂಲಕ ದೇಶದಲ್ಲಿಯೇ ತಲಾದಾಯದಲ್ಲಿ ಮೊದಲನೇ ಸ್ಥಾನದಲ್ಲಿದೆ, ಉದ್ಯೋಗದ ದರ ಶೇ. 23ಕ್ಕೆ ಹೆಚ್ಚಾಗಿದೆ ಹುಬ್ಬಳ್ಳಿ ಧಾರವಾಡದಲ್ಲಿ ಶೇ. 21 ರಷ್ಟು ಹೆಚ್ಚಾಗಿದೆ, ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದೆ, ಅಸಮಾನತೆ ದೂರವಾಗಿದೆ ಎಂದರು.

ಪ್ರತಿಪಕ್ಷಗಳ ನಾಯಕರ ಟೀಕೆಗಳಿಗೆ ಹುರುಳಿಲ್ಲ:

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ಮೋದಿ ಆದಿಯಾಗಿ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು, ಅಲ್ಲದೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ದುಡ್ಡಿಲ್ಲ ಎಂದು ಆರೋಪಿಸಿದ್ದರು, ಆದರೆ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ ಗ್ಯಾರಂಟಿ ಯೋಜನೆಗಳಿಗೆ 55 ಸಾವಿರ ಕೋಟಿ ಅನುದಾನ ನೀಡುವುದಲ್ಲದೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹ ನಡೆಸುತ್ತಾ ಬಂದಿದ್ದೇವೆ. ಅಭಿವೃದ್ಧಿಗೆ ಹಣವಿಲ್ಲ ಎಂದು ನಿರಾಧಾರವಾಗಿ ಸುಳ್ಳು ಆರೋಪ ಮಾಡುವ ಬಿಜೆಪಿಗರು ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಸರ್ಕಾರಿ ಕಾರ್ಯಕ್ರಮಕ್ಕೆ ಬಂದು ನೋಡಲಿ ಎಂದು ಸವಾಲೆಸೆದರು.

ವರುಣ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ:

ನಾನು ರಾಜಕೀಯವಾಗಿ ಬೆಳೆಯಲು ಶಕ್ತಿ ತುಂಬಿದ್ದು, ಚಾಮುಂಡೇಶ್ವರಿ ಮತ್ತು ವರುಣ ಕ್ಷೇತ್ರದ ಮತದಾರರು, ನಿಮ್ಮ ಋಣವನ್ನು ನಾನು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಆದ್ದರಿಂದ ವರುಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ನಿಮ್ಮಗಳ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ, ಕಳೆದ ವರ್ಷ 501 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು, ಇಂದು 1 ಸಾವಿರದ 107 ಕೋಟಿ 72 ಲಕ್ಷ ವೆಚ್ಚದ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ರಾಜ್ಯದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ, ಜನರ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಖಾತೆಗಳಿಗೆ ಜಮಾವಣೆ ಮಾಡಲಾಗುತ್ತಿದೆ, ಅಭಿವೃದ್ಧಿ ಕೆಲಸಗಳಿಗೆ ದುಡ್ಡಿಲ್ಲ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಸತ್ವವಿಲ್ಲ, ಬಿಜೆಪಿ ಸರ್ಕಾರ ಈವಿಎಂ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಚುನಾವಣಾ ಅವ್ಯವಹಾರ ನಡೆಸಿ ಮತಗಳ್ಳತನ ಮಾಡುತ್ತಿದೆ ಇದಕ್ಕೆ ಚುನಾವಣಾ ಆಯೋಗವು ಸಹ ಕೈಜೋಡಿಸುತ್ತಿದೆ, ಆದ್ದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನಜಾಗೃತಿ ಮೂಡಿಸಬೇಕಾಗಿದೆ ಎಂದರು.

ಸಮಾರಂಭದಲ್ಲಿ ಕೃಷಿ ಇಲಾಖೆ ಯಂತ್ರೋಪಕರಣಗಳು ಸೇರಿದಂತೆ ವಿವಿಧ ಇಲಾಖೆಯ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶುಸಂಗೋಪನೆ ಇಲಾಖೆ ಸಚಿವ ಕೆ. ವೆಂಕಟೇಶ್, ಸಂಸದ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷೆ ಪುಷ್ಪಅಮರನಾಥ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯರಂಗಸ್ವಾಮಿ, ವಾಲ್ಮೀಕಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಚ್.ಸಿ. ಬಸವರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ಇಂದನ್ ಬಾಬು, ಹದಿನಾರು ನಾಗರಾಜು, ದಕ್ಷಿಣಮೂರ್ತಿ, ಹೊಸಕೋಟೆ ಕುಮಾರ್, ಕಲ್ಮಳ್ಳಿ ಬಾಬು, ರಂಗಸ್ವಾಮಿ, ಗಿರಿಧರ್, ಹೊಸಕೋಟೆ ಬಸವರಾಜು, ಹದಿನಾರು ಗ್ರಾಪಂ ಮಾಜಿ ಅಧ್ಯಕ್ಷ ಅಭಿ, ಹದಿನಾರು ಗ್ರಾಪಂ ಅಧ್ಯಕ್ಷ ಸಣ್ಣತಾಯಮ್ಮ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯಕರ್ತರು, ಹಲವಾರು ಪ್ರಮುಖರು ಇದ್ದರು.

1,107.72 ಕೋಟಿ ರು. ವೆಚ್ಚದಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕು ಸ್ಥಾಪನೆ, ಉದ್ಘಾಟನೆ

 ನಂಜನಗೂಡು :  ತಾಲೂಕಿನ ಹದಿನಾರು ಗ್ರಾಮದಲ್ಲಿ ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಏರ್ಪಡಿಸಿದ್ದ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1,107.72 ಕೋಟಿ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

ಸುಮಾರು 1,065.27 ಕೋಟಿ ವೆಚ್ಚದ ಶಂಕುಸ್ಥಾಪನೆ ಹಾಗೂ 42.45 ಕೋಟಿ ವೆಚ್ಚದ 22 ಕಾಮಗಾರಿಗಳ 295 ಕಾಮಗಾರಿಗಳನ್ನು ಉದ್ಘಾಟಿಸಿದರು.

ಜಲಸಂಪನ್ಮೂಲ ಇಲಾಖೆಯ 117 ಕಾಮಗಾರಿಗಳ 636.92 ಕೋಟಿ ವೆಚ್ಚದ ಕಾಮಗಾರಿಗಳು, ಲೋಕೋಪಯೋಗಿ ಇಲಾಖೆಯ 33 ಕಾಮಗಾರಿಗಳ 283.96 ಕೋಟಿ, ಸಣ್ಣ ನೀರಾವರಿ ಇಲಾಖೆಯ 15 ಕಾಮಗಾರಿಗಳ 72 ಕೋಟಿ, ಆಯುಷ್ ಇಲಾಖೆಯ 2.32 ಕೋಟಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 13 ಕಾಮಗಾರಿಗಳ 21.50 ಕೋಟಿ, ಕೆಪಿಟಿಸಿಎಲ್ ಸಿಎಸ್ಆರ್ ಫಂಡ್ ಅನುದಾನದ ಅಡಿಯಲ್ಲಿ 25.54 ಕೋಟಿ, ಕೆಐಡಿಬಿಯ 18.95 ಕೋಟಿ, ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ತಾಲೂಕಿನ ಕಾರ್ಯ ಗ್ರಾಮ ಪಂಚಾಯಿತಿಯ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ 10.44 ಕೋಟಿ ವೆಚ್ಚದ 64 ಕಾಮಗಾರಿಗಳು, ನಗರಾಭಿವೃದ್ಧಿ ಕೋಶದ 10 ಕೋಟಿ ಮೌಲ್ಯದ 18 ಕಾಮಗಾರಿಗಳು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ 7.45 ಕೋಟಿ ವೆಚ್ಚದ ಏಳು ಕಾಮಗಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 4.56 ಕೋಟಿ, ಸಮಾಜ ಕಲ್ಯಾಣ ಇಲಾಖೆಯಡಿ ಹದಿನಾರು ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ಮತ್ತು ಬುದ್ಧ ಪ್ರಾರ್ಥನ ಮಂದಿರ ಕೇಂದ್ರ ನಿರ್ಮಾಣ ಕಾಮಗಾರಿ ಸೇರಿದಂತೆ 4.45 ಕೋಟಿ ವೆಚ್ಚದ ಕಾಮಗಾರಿ, ನಿರ್ಮಿತಿ ಕೇಂದ್ರದ 4.35 ಕೋಟಿ ವೆಚ್ಚದ 28 ಕಾಮಗಾರಿಗಳು, ಯುನೈಟೆಡ್ ವೇ ಬೆಂಗಳೂರು ಏರ್ಪೋರ್ಟ್ ಅಥಾರಿಟಿಯ ಸಿಎಸ್ಆರ್ ಅನುದಾನದಲ್ಲಿ ಶಿಕ್ಷಣ ಇಲಾಖೆಗೆ 3.98 ಕೋಟಿ ವೆಚ್ಚದ 6 ಕಾಮಗಾರಿಗಳು, ಗಣಿ ಮತ್ತು ಭೂ ವಿಜ್ಞಾನ ಕೇಂದ್ರದ 80 ಲಕ್ಷ ವೆಚ್ಚದ 4 ಕಾಮಗಾರಿಗಳು, ಪಶು ಸಂಗೋಪನೆ ಇಲಾಖೆಯ 50 ಲಕ್ಷ ವೆಚ್ಚದ ಕಾಮಗಾರಿಗಳು ಸೇರಿದಂತೆ 1,107.72 ಕೋಟಿ ವೆಚ್ಚದ 317 ಕಾಮಗಾರಿಗಳಿಗೆ ರಿಮೋಟ್ ಬಟನ್ ಒತ್ತುವ ಮೂಲಕ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

ಇದೇ ವೇಳೆ ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

PREV
Read more Articles on

Recommended Stories

ಸಚಿವ ರಾಜಣ್ಣ ವಿರುದ್ಧ ಸುರ್ಜೇವಾಲಾಗೆ ದೂರು
ಧರ್ಮಸ್ಥಳ ಕೇಸ್‌ ಎಡಪಂಥೀಯರ ಷಡ್ಯಂತ್ರ, ಟೂಲ್‌ಕಿಟ್‌ : ಜೋಶಿ ಕಿಡಿ