ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಿವಕುಮಾರ್ ಅವರ ಗುಣಗಾನ ಮಾಡಿದ್ದಾರೆ.
ಶಿವಕುಮಾರ್ ಅವರಿಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ
ಇದೇ ವೇಳೆ ‘ನನಗಿಂತ ಕಿರಿಯರಾದ ಶಿವಕುಮಾರ್ ಅವರಿಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ. 2028ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಬಯಕೆ. ಇದಕ್ಕಾಗಿ ನಡೆಯುವ ಪಕ್ಷ ಸಂಘಟನೆ ಮತ್ತು ಹೋರಾಟದಲ್ಲಿ ನಾನು ಕೂಡಾ ಜೊತೆಯಿರುತ್ತೇನೆ’ ಎಂದು ಭರವಸೆ ನೀಡಿದ್ದಾರೆ.
ಶಿವಕುಮಾರ್ ಅವರ ಸಂಘಟನಾ ಚಾತುರ್ಯ ಮಾದರಿ
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ‘ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ದತೆ ಮತ್ತು ಕಠಿಣ ಶ್ರಮ ಪಕ್ಷದ ಎಲ್ಲ ಯುವನಾಯಕರಿಗೆ ಮಾದರಿ. ವಿರೋಧ ಪಕ್ಷವಾದ ಬಿಜೆಪಿ ಸುಳ್ಳು ಕೇಸ್‌ಗಳನ್ನು ಹಾಕಿ ಬಗೆಬಗೆಯ ಕಿರುಕುಳ ನೀಡಿದರೂ ಶಿವಕುಮಾರ್ ಅವರು ಮಣಿಯದೆ ಪಕ್ಷಕ್ಕೆ ನಿಷ್ಠರಾಗಿ ಉಳಿದರು. ಇದು ಕಾಂಗ್ರೆಸ್ ಪಕ್ಷದ ಬಗ್ಗೆ ಅವರಲ್ಲಿರುವ ರಾಜಿಯಿಲ್ಲದ ನಿಷ್ಠೆಗೆ ಸಾಕ್ಷಿ. ಇದು ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಸ್ಪೂರ್ತಿದಾಯಕ ನಡವಳಿಕೆ’ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆ ಡಿ.ಕೆ.ಶಿವಕುಮಾರ್ ಹಗಲಿರುಳು ದುಡಿದಿದ್ದಾರೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮತ್ತೆ ಕಟ್ಟುವಲ್ಲಿ ಶಿವಕುಮಾರ್ ನನ್ನ ಹೆಗಲಿಗೆ ಹೆಗಲಾಗಿ ನಿಂತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
