ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಬಂಧನ ಪ್ರಕರಣ: ಖಾನಾಪುರ ಸಿಪಿಐ ನಾಯಕ ಅಮಾನತು

ಸಾರಾಂಶ

ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದ ಮೇರೆಗೆ ಖಾನಾಪುರ ಠಾಣೆಯ ಸಿಪಿಐ ಮಂಜುನಾಥ ನಾಯಕ ಅವರನ್ನು ಅಮಾನತು ಮಾಡಿ ಉತ್ತರ ವಲಯ ಐಜಿಪಿ ವಿಕಾಸಕುಮಾರ್ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ : ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದ ಮೇರೆಗೆ ಖಾನಾಪುರ ಠಾಣೆಯ ಸಿಪಿಐ ಮಂಜುನಾಥ ನಾಯಕ ಅವರನ್ನು ಅಮಾನತು ಮಾಡಿ ಉತ್ತರ ವಲಯ ಐಜಿಪಿ ವಿಕಾಸಕುಮಾರ್ ಆದೇಶ ಹೊರಡಿಸಿದ್ದಾರೆ.

ಡಿ.19ರಂದು ಸಿ.ಟಿ.ರವಿ ಅವರನ್ನು ಹಿರೇಬಾಗೇವಾಡಿ ಠಾಣೆಯಿಂದ ಖಾನಾಪುರ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಠಾಣೆಯ ಸಿಬ್ಬಂದಿಯನ್ನಿಟ್ಟುಕೊಂಡು ಸೂಕ್ತ ಭದ್ರತೆ ನೀಡುವಂತೆ ಸೂಚಿಸಲಾಗಿತ್ತು. ಆರೋಪ ಎದುರಿಸುತ್ತಿರುವ ಸಿ.ಟಿ. ರವಿ ಹೊರತುಪಡಿಸಿ ಯಾರನ್ನೂ ಒಳಬೀಡದಂತೆ ಆದೇಶಿಸಲಾಗಿತ್ತು. 

ಆದರೆ, ಸಿಪಿಐ ಮಂಜುನಾಥ ನಾಯಕ ಸೂಕ್ತ ಬಂದೋಬಸ್ತ್‌ ಮಾಡಿರಲ್ಲ. ರಾಜಕೀಯ ಮುಖಂಡರು ಖಾನಾಪುರ ಠಾಣೆ ಒಳಗೆ ನುಗ್ಗಿದ್ದರು. ಇದರಿಂದ ಠಾಣೆಯೊಳಗೆ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ರಾಜಕೀಯ ಮುಖಂಡರನ್ನು ತಡೆಯುವಲ್ಲಿ ವಿಫಲರಾಗಿದ್ದರು. ಮೇಲಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಕರ್ತವ್ಯ ಲೋಪ, ಬೇಜವಾಬ್ದಾರಿತನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿಟ್ಟು ಆದೇಶ ಹೊರಡಿಸಲಾಗಿದೆ

ಖಾನಾಪುರ ಬಂದ್​ಗೆ ಕರೆ:  ಸಿಪಿಐ ಮಂಜುನಾಥ್​​ ನಾಯಕ​​ ಅಮಾನತು ಖಂಡಿಸಿ, ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಡಿ. 26 ರಂದು ಬಿಜೆಪಿ, ಜೆಡಿಎಸ್​, ದಲಿತಪರ, ಕನ್ನಡಪರ ಸಂಘಟನೆಗಳು ಖಾನಾಪುರ ಪಟ್ಟಣ ಬಂದ್​ಗೆ ಕರೆ ನೀಡಿವೆ.

ಈ ಮಧ್ಯೆ ಸಿ.ಟಿ. ರವಿ ಬಂಧನ ಪ್ರಕರಣ ಸಂಬಂಧ ಅಮಾನತುಗೊಂಡಿರುವ ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಮಂಜುನಾಥ ನಾಯಕ ಅವರು ನನಗೆ ನ್ಯಾಯ ಸಿಗುತ್ತದೆ ಎಂದು ಮೇಲಧಿಕಾರಿಗಳ ಮೇಲೆ ವಿಶ್ವಾಸವಿದೆ. ಯಾರೂ ಸಹ ಬಂದ್‌ ಮಾಡುವುದಾಗಲಿ, ಪ್ರತಿಭಟನೆ ಮಾಡುವುದಾಗಲಿ ಮಾಡಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Share this article