;Resize=(412,232))
ಹುಬ್ಬಳ್ಳಿ : ನನ್ನ ಮಾತಿಗೆ ಗೌರವ ಕೊಟ್ಟು ಬರುವುದಾದರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಶಾಸಕ ಸಿ.ಟಿ. ರವಿ ಇಬ್ಬರನ್ನೂ ಕರೆದು ಕೂಡಿಸಿ ಪ್ರಕರಣ ಮುಕ್ತಾಯ ಮಾಡಲು ಈಗಲೂ ಸಿದ್ಧ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಬುಧವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಬ್ಬರು ಮಕ್ಕಳು ಜಗಳವಾಡಿದರೆ ಸಮಾಧಾನ ಪಡಿಸುವುದು ಹಿರಿಯರ ಕರ್ತವ್ಯ. ಘಟನೆ ನಡೆದ ನಂತರ ಸಿ.ಟಿ.ರವಿ ಕರೆದು ಕೇಳಿದಾಗ ಅವಾಚ್ಯ ಶಬ್ದ ಬಳಸಿಲ್ಲ ಎಂದಿದ್ದಾರೆ. ಹೆಬ್ಬಾಳಕರ ಅವರು ಅವಾಚ್ಯ ಶಬ್ದ ಬಳಸಿದ್ದಾರೆ. ಇಲ್ಲಂದರೆ ನಾನ್ಯಾಕೆ ನನ್ನ ಮರ್ಯಾದೆ ಕಳೆದುಕೊಳ್ಳಲಿ ಎಂದರು. ಆದರೆ ಈಗಲೂ ಪ್ರಕರಣ ಇತ್ಯರ್ಥ ಮಾಡುವಂಥ ಕೆಲಸಕ್ಕೆ ಸಿದ್ಧ ಎಂದರು.
ಸದನದಲ್ಲಿ ಮಹಿಳೆ ಮೇಲೆ ದೌರ್ಜನ್ಯವಾದರೂ ಸಭಾಪತಿ ಮಾತಾಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲಕ್ಷ್ಮೀ ಹೆಬ್ಬಾಳಕರ್ ಒಬ್ಬರು ರಾಜಕಾರಣಿ, ಮಂತ್ರಿ, ಎಂಎಲ್‌ಎ ಎಂಬುದಕ್ಕಿಂತ ಹೆಚ್ಚಾಗಿ ನಮ್ಮ ಮನೆ ಹೆಣ್ಮಗಳಾಗಿದ್ದರೆ ಎಷ್ಟು ಕಾಳಜಿ ವಹಿಸಬೇಕಿತ್ತೊ ಅಷ್ಟೇ ಕಾಳಜಿಯಿಂದ ಕೆಲಸ ಮಾಡಿದ್ದೇವೆ ಎಂದು ಪ್ರತಿಕ್ರಿಯಿಸಿದರು.
ನಾನು ಕೊಟ್ಟಂತಹ ತೀರ್ಮಾನ ಶ್ರೇಷ್ಠ ತೀರ್ಮಾನ ಅಂತ ಇಡೀ ದೇಶ ನೋಡಿದೆ. ಬೆಂಕಿ ಹತ್ತಿದಾಗ ತುಪ್ಪ ಸುರಿವ ಕೆಲಸ ಮಾಡಬಾರದು ಎಂದು ಅವರು ಸಮರ್ಥಿಸಿಕೊಂಡರು.
ಸಿಐಡಿ ಮಹಜರು ಮಾಡಲು ಬರಲ್ಲ, ವಿಚಾರಣೆ ಮಾಡಲಿ:
ಸಿಐಡಿಯವರು ವಿಧಾನ ಪರಿಷತ್ತಿನಲ್ಲಿ ಮಹಜರು ಮಾಡಲು ಬರುವುದಿಲ್ಲ. ಅಲ್ಲಿ ಟೇಬಲ್ ಕುರ್ಚಿಗಳನ್ನು ಮಹಜರು ಮಾಡುತ್ತಾರೆಯೇ? ಎಂದ ಬಸವರಾಜ ಹೊರಟ್ಟಿ, ಸಿಐಡಿ ವಿಚಾರಣೆ ಮಾಡಲಿ, ಆಮೇಲೆ ನಾವು ಏನು ಮಾಡಬೇಕು ಎನ್ನುವುದನ್ನು ಯೋಚಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಿ.ಟಿ.ರವಿ ಅವರನ್ನು ಬೇರೆ ಕಡೆ ಕರೆದುಕೊಂಡು ಹೋಗಿದ್ದು ಸರಿಯಲ್ಲ. ಈ ಕುರಿತಂತೆ 7 ಪುಟಗಳ ಪತ್ರ ಬರೆದು ದೂರು ಕೊಟ್ಟಿದ್ದಾರೆ. ಹಕ್ಕುಚ್ಯುತಿ ಆಗಿದೆ. ಆ ರೀತಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಹೊರಟ್ಟಿ ತಿಳಿಸಿದರು.