ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಧಾನಪರಿಷತ್‌ನಲ್ಲಿ ನನ್ನ ವಿರುದ್ಧ ಆಕ್ಷೇಪಾರ್ಹ ಪದ ಬಳಸಿಲ್ಲ ಎಂದಾದರೆ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಾನಕ್ಕೆ ಬನ್ನಿ. ನಾನೂ ಕುಟುಂಬ ಸಮೇತ ಬರುವೆ. ಆಣೆ- ಪ್ರಮಾಣ ಮಾಡೋಣ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇರವಾಗಿ ಸವಾಲು ಹಾಕಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಮಂಜುನಾಥನನ್ನು ನಾನು ನಂಬುತ್ತೇನೆ. ದೇವಾನು ದೇವತೆಗಳನ್ನೂ ನಾನು ನಂಬುತ್ತೇನೆ. ಸಿ.ಟಿ. ರವಿ ಅವರ ಚಿಕ್ಕಮಗಳೂರಿಗೆ ಧರ್ಮಸ್ಥಳ ತುಂಬಾ ಹತ್ತಿರವಿದೆ. ಅವರೂ ದೇವರನ್ನು ನಂಬುತ್ತಾರೆ. ದತ್ತಮಾಲೆ ಹಾಕುತ್ತಾರೆ. ದತ್ತ ಪೀಠಕ್ಕೆ ಹೋಗುತ್ತಾರೆ. ಆ ಪದ ಬಳಸಿಲ್ಲ ಎಂದರೆ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಬನ್ನಿ, ನಾನೂ ಬರುತ್ತೇನೆ ಎಂದು ಹೆಬ್ಬಾಳಕರ ಹೇಳಿದರು.