ರಾಜ್ಯ ಬಿಜೆಪಿಯಲ್ಲಿನ ಬಣಜಗಳ ನಡುವೆಯೇ ಇಂದು ರಾಧಾಮೋಹನ್ ದಾಸ್ ಅಗರ್‌ವಾಲ್‌ ನೇತೃತ್ವದಲ್ಲಿ ಮಹತ್ವದ ಸರಣಿ ಸಭೆ

KannadaprabhaNewsNetwork |  
Published : Jan 21, 2025, 01:33 AM ISTUpdated : Jan 21, 2025, 04:16 AM IST
ಬಿಜೆಪಿ | Kannada Prabha

ಸಾರಾಂಶ

ರಾಜ್ಯ ಬಿಜೆಪಿಯಲ್ಲಿನ ಬಣ ಜಗಳ ಹಾಗೂ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಬೇಕೆಂಬ ಪಟ್ಟಿನ ನಡುವೆಯೇ ಮಂಗಳವಾರ ಪಕ್ಷದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್‌ ನೇತೃತ್ವದಲ್ಲಿ ಮಹತ್ವದ ಸರಣಿ ಸಭೆಗಳು ನಡೆಯಲಿದ್ದು, ಪಕ್ಷದಲ್ಲಿನ ಭಿನ್ನಮತಕ್ಕೆ ಮದ್ದು ಹುಡುಕುವ ಪ್ರಯತ್ನಕ್ಕೆ ಚಾಲನೆ ಸಿಗಲಿದೆ.

 ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿನ ಬಣ ಜಗಳ ಹಾಗೂ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಬೇಕೆಂಬ ಪಟ್ಟಿನ ನಡುವೆಯೇ ಮಂಗಳವಾರ ಪಕ್ಷದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್‌ ನೇತೃತ್ವದಲ್ಲಿ ಮಹತ್ವದ ಸರಣಿ ಸಭೆಗಳು ನಡೆಯಲಿದ್ದು, ಪಕ್ಷದಲ್ಲಿನ ಭಿನ್ನಮತಕ್ಕೆ ಮದ್ದು ಹುಡುಕುವ ಪ್ರಯತ್ನಕ್ಕೆ ಚಾಲನೆ ಸಿಗಲಿದೆ.

ಇದೇ ವೇಳೆ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಬೇಕೇ ಅಥವಾ ಸಹಮತದ ಆಧಾರದ ಮೇಲೆ ಕೇವಲ ಸಾಂಕೇತಿಕವಾಗಿ ಚುನಾವಣಾ ಪ್ರಕ್ರಿಯೆ ನಡೆದರಷ್ಟೇ ಸಾಕಾಗಬಹುದೇ ಎಂಬುದರ ಬಗ್ಗೆ ಸ್ಪಷ್ಟತೆ ಲಭಿಸುವ ನಿರೀಕ್ಷೆಯೂ ಇದೆ.

ಸಹಮತದ ಮೂಲಕ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಬೇಕು ಎಂದು ವಿಜಯೇಂದ್ರ ಬಣ ಆಗ್ರಹಿಸುತ್ತಿದ್ದರೆ, ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಯತ್ನಾಳ ಬಣ ಚುನಾವಣೆ ನಡೆಯಲಿ ಎಂದು ಪಟ್ಟು ಹಿಡಿದಿದೆ. ಜತೆಗೆ ತಮ್ಮ ಬಣದಿಂದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಹೀಗಾಗಿ, ಮಂಗಳವಾರದ ಸಭೆ ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಮಧ್ಯಾಹ್ನ 3ಕ್ಕೆ ಸಭೆ: ಮಧ್ಯಾಹ್ನ 3 ಗಂಟೆಗೆ ಸಂಸದರು ಹಾಗೂ ಶಾಸಕರ ಸಭೆ ನಡೆಯಲಿದೆ. ನಂತರ ಸಂಜೆ 4ಗಂಟೆ ಸುಮಾರಿಗೆ ಸಂಘಟನಾ ಪರ್ವ, ಜಿಲ್ಲಾ ಅಧ್ಯಕ್ಷರ ಚುನಾವಣೆ ಬಗ್ಗೆ ಸಭೆ ನಿಗದಿಯಾಗಿದೆ. ಬಳಿಕ 7ಗಂಟೆಗೆ ರಾಜ್ಯದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ನಡೆಯಲಿದೆ.

ಈ ಸಭೆಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಕಲೆ ಹಾಕಿ ದೆಹಲಿಗೆ ವಾಪಸಾದ ಬಳಿಕ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ವರಿಷ್ಠರಿಗೆ ವರದಿ ನೀಡಲಿದ್ದಾರೆ. ಅದರ ಆಧಾರದ ಮೇಲೆ ಮುಂದಿನ ನಿರ್ಣಯಗಳನ್ನು ವರಿಷ್ಠರು ಕೈಗೊಳ್ಳಲಿದ್ದಾರೆ. ಜತೆಗೆ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಂದುವರೆಯುತ್ತಾರೋ ಅಥವಾ ಇಲ್ಲವೋ ಎಂಬುದರ ಬಗ್ಗೆಯೂ ವರಿಷ್ಠರು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂಸದರು ಹಾಗೂ ಶಾಸಕರ ಸಭೆಯಲ್ಲಿ ಪ್ರಸಕ್ತ ವಿದ್ಯಮಾನಗಳ ಜತೆಗೆ ಪಕ್ಷದಲ್ಲಿ ತಾರಕ್ಕೇರಿರುವ ಭಿನ್ನಮತದ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಯಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೇರಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಸಭೆಗೆ ಆಗಮಿಸುವ ಬಗ್ಗೆ ಅನುಮಾನವಿದೆ. ಹಾಗೊಂದು ವೇಳೆ ಆಗಮಿಸಿದಲ್ಲಿ ನೇರಾನೇರ ವಾಕ್ಸಮರ ನಡೆಯುವ ಸಂಭವ ತ‍ಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.

ನಂತರ ನಡೆಯುವ ಸಂಘಟನಾ ಪರ್ವ, ಜಿಲ್ಲಾ ಅಧ್ಯಕ್ಷರ ಚುನಾವಣೆ ಕುರಿತ ಸಭೆಯಲ್ಲಿ ಪಕ್ಷದ ಚುನಾವಣಾ ವೀಕ್ಷಕರು ಪಾಲ್ಗೊಳ್ಳಲಿದ್ದಾರೆ. ಈವರೆಗೆ ನಡೆದಿರುವ ಪ್ರಕ್ರಿಯೆ ಬಗ್ಗೆ ಅವಲೋಕನ ನಡೆಸಲಿರುವ ನಾಯಕರು, ಯಾವುದಾದರೂ ಜಿಲ್ಲಾ ಮತ್ತು ಮಂಡಲಗಳ ಚುನಾವಣಾ ಪ್ರಕ್ರಿಯೆಗಳಲ್ಲಿ ಅಡಚಣೆ ಎದುರಾಗಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಲಿದ್ದಾರೆ. ಅದಕ್ಕೆ ಸಂಬಂಧಿಸಿ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ.

ಅಂತಿಮವಾಗಿ ರಾಜ್ಯದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಲಿದೆ.

ಅಭಿಪ್ರಾಯ ಪಡೀತಾರೆ:ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ವಿಜಯೇಂದ್ರ, ಮಂಗಳವಾರ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್, ಪೊನ್ನು ರಾಧಾ ಕೃಷ್ಣ, ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಬರುತ್ತಿದ್ದಾರೆ. ಬಿಜೆಪಿ ಕಚೇರಿಯಲ್ಲಿ 3 ಗಂಟೆಗೆ ಚುನಾಯಿತ ಸದಸ್ಯರು, ಸಂಸದರು, ಶಾಸಕರ ಜೊತೆ ಸಭೆ ಕರೆದಿದ್ದಾರೆ. ಅಲ್ಲಿ ಎಲ್ಲರ ಅಭಿಪ್ರಾಯ ಪಡೆಯುತ್ತಾರೆ. 4 ಗಂಟೆಗೆ ಸಂಘಟನಾ ಪರ್ವ, ಜಿಲ್ಲಾಧ್ಯಕ್ಷರ ಚುನಾವಣೆ ಬಗ್ಗೆ ಸಭೆ ಇದೆ. ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆಯೂ ಚರ್ಚೆ ಆಗುತ್ತದೆ. ನಂತರ 7 ಗಂಟೆಗೆ ಕೋರ್ ಕಮಿಟಿ ಸಭೆ ನಡೆಯುತ್ತೆ. ಸಭೆಯಲ್ಲಿ ರಾಜ್ಯದ ಪರಿಸ್ಥಿತಿ ಬಗ್ಗೆ, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ