ನವದೆಹಲಿ: ಕಾಂಗ್ರೆಸ್ ತಮ್ಮಿಷ್ಟದಂತೆ ಬದಲಾಯಿಸಿರುವ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಈ ಬಾರಿ ಬಿಜೆಪಿ 400 ಸ್ಥಾನ ಗೆಲ್ಲುವುದು ಅಗತ್ಯ ಎಂಬ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಮತ್ತೋರ್ವ ಬಿಜೆಪಿ ಮತ್ತೋರ್ವ ಲೋಕಸಭಾ ಅಭ್ಯರ್ಥಿ ಜ್ಯೋತಿ ಮಿರ್ಧಾ ಇಂಥದ್ದೇ ಅರ್ಥದ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಮಿರ್ಧಾ ಹೇಳಿಕೆ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಬಿಜೆಪಿಯ ಉದ್ದೇಶವೇ ಸಂವಿಧಾನ ಬದಲಾವಣೆ ಎಂದಿದೆ.
ಈ ವಿಡಿಯೋ ತುಣಕನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ‘ಈ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದಾಗ, ಇದೇ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿತು. ಈಗ ಮತ್ತೋರ್ವ ಬಿಜೆಪಿ ಅಭ್ಯರ್ಥಿ ಇದೇ ಹೇಳಿಕೆ ನೀಡಿದ್ದಾರೆ. ಇನ್ನೆಷ್ಟು ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಿದೆ’ ಎಂದು ಪ್ರಶ್ನಿಸಿದರು.ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಇದೆಲ್ಲಾ ಬಿಜೆಪಿಯ ‘ಮಹಾಸೂತ್ರಧಾರ (ಪ್ರಧಾನಿ ಮೋದಿ)’ ಅವರಿಂದ ಸಂಘಟಿತವಾಗಿದ್ದು, ಇದು ಬಿಜೆಪಿಯ ಉದ್ದೇಶಪೂರ್ವಕ ತಂತ್ರ’ ಎಂದು ಆರೋಪಿಸಿದರು.