ಮತಾಧಿಕಾರ ಆಂದೋಲನ ಇನ್ನು ದೇಶವ್ಯಾಪಿ: ರಾಗಾ

KannadaprabhaNewsNetwork |  
Published : Aug 31, 2025, 01:08 AM ISTUpdated : Aug 31, 2025, 07:37 AM IST
ರಾಗಾ | Kannada Prabha

ಸಾರಾಂಶ

  ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ್ದು, ‘ಬಿಜೆಪಿ, ಆರ್‌ಎಸ್‌ಎಸ್‌, ಆಯೋಗ ವೋಟ್‌ ಚೋರಿ ನಡೆಸಿವೆ. ಜನರ ಮತಹಕ್ಕು ಕಸಿದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಹಾರದಲ್ಲಿ ಆ ರೀತಿ ಮಾಡಲು ಬಿಡಲ್ಲ. ಇಡೀ ದೇಶಕ್ಕೆ ನಮ್ಮ ಆಂದೋಲನ ವ್ಯಾಪಿಸಲಿದೆ  

 ಆರಾ (ಬಿಹಾರ) :  ಎನ್‌ಡಿಎ, ಚುನಾವಣಾ ಆಯೋಗದ ವಿರುದ್ಧದ ಮತಗಳ್ಳತನ ಆರೋಪವನ್ನು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ್ದು, ‘ಬಿಜೆಪಿ, ಆರ್‌ಎಸ್‌ಎಸ್‌, ಆಯೋಗ ವೋಟ್‌ ಚೋರಿ ನಡೆಸಿವೆ. ಜನರ ಮತಹಕ್ಕು ಕಸಿದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಹಾರದಲ್ಲಿ ಆ ರೀತಿ ಮಾಡಲು ಬಿಡಲ್ಲ. ಇಡೀ ದೇಶಕ್ಕೆ ನಮ್ಮ ಆಂದೋಲನ ವ್ಯಾಪಿಸಲಿದೆ ಎಂದು ಗುಡುಗಿದ್ದಾರೆ. ಭೋಜಪುರ ಜಿಲ್ಲೆಯಲ್ಲಿ ನಡೆದ ಮತ ಅಧಿಕಾರ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಬಿಹಾರದಲ್ಲಿ ನಡೆಯುತ್ತಿರುವ ಮತಪಟ್ಟಿ ಪರಿಷ್ಕರಣೆಯು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿ. ಬಿಜೆಪಿ. ಆರ್‌ಎಸ್‌ಎಸ್‌, ಚುನಾವಣಾ ಆಯೋಗ ಮತಗಳ್ಳತನದಲ್ಲಿ ತೊಡಗಿವೆ. ಎನ್‌ಡಿಎ ಮಹಾರಾಷ್ಟ್ರ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ವೋಟ್‌ಚೋರಿಯಲ್ಲಿ ಯಶಸ್ಸು ಪಡೆದಿದೆ. ಆದರೆ ಬಿಹಾರದಲ್ಲಿ ಆ ರೀತಿ ಮಾಡಲು ಬಿಡಲ್ಲ’ ಎಂದರು.

‘ದಲಿತರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ಮತದಾನ ಹಕ್ಕು, ಆದರೆ ನರೇಂದ್ರ ಮೋದಿ ಸರ್ಕಾರ ಚುನಾವಣೆ ಗೆಲ್ಲಲು ಆ ಹಕ್ಕು ಕಸಿಯುತ್ತಿದೆ. ಇನ್ನು ಮುಂದೆ ಆ ರೀತಿ ಮಾಡಲು ಬಿಡುವುದಿಲ್ಲ. ಜನರು ಈಗ ಅವರನ್ನು ಮತಗಳ್ಳರು ಎಂದು ಕರೆಯಲು ಆರಂಭಿಸಿದ್ದಾರೆ’ ಎಂದು ಹರಿಹಾಯ್ಡರು.

ಅಖಿಲೇಶ್‌ ಭಾಗಿ:

ಈ ನಡುವೆ, ಶನಿವಾರ ಮತ ಅಧಿಕಾರ ಯಾತ್ರೆಯಲ್ಲಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್ ಕೂಡ ಭಾಗಿಯಾಗಿದ್ದರು.

ಡೋರ್‌ಮ್ಯಾಟ್‌ ಮೇಲೆ ರಾಹುಲ್‌ ಚಿತ್ರ ಇಟ್ಟು ಬಿಜೆಪಿ ಆಕ್ರೋಶ

ಪ್ರಯಾಗ್‌ರಾಜ್‌: ಕಾಂಗ್ರೆಸ್‌ನ ನಾಯಕ ರಾಹುಲ್‌ ಗಾಂಧಿ ಅವರ ಭಾವಚಿತ್ರವನ್ನು ಕಾಲೊರೆಸುವ ಮ್ಯಾಟ್‌ ಮೇಲೆ ಇರಿಸಿ ಬಿಜೆಪಿಗರು ಇಲ್ಲಿ ಪ್ರತಿಭಟಿಸಿದ್ದಾರೆ.

ಬಿಹಾರದ ದರ್ಭಂಗಾದಲ್ಲಿ ನಡೆದ ಕಾಂಗ್ರೆಸ್‌ ಮೆರವಣಿಗೆ ವೇಳೆ ರಾಹುಲ್‌ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ನುಡಿ ಬಳಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಸುರೇಂದ್ರ ಚೌಧರಿ, ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಈ ವೇಳೆ, ‘ರಾಹುಲ್‌ ಗಾಂಧಿ ಇಂತಹ ಕೆಲಸ ಮುಂದುವರಿಸಿದರೆ ಅವರ ಚಿತ್ರವನ್ನು ಟಿಶ್ಯೂ ಪೇಪರ್ ಮೇಲೆ ಮುದ್ರಿಸಿ ಕೈ ಒರೆಸುತ್ತೇವೆ’ ಎಂದರು. 

‘ಯುಗಪುರುಷ ಪ್ರಧಾನಿ ಮೋದಿ ಮತ್ತು ಅವರ ತಾಯಿ ವಿರುದ್ಧ ಕಾಂಗ್ರೆಸ್ಸಿಗರು ಆಕ್ಷೇಪಾರ್ಹ ನುಡಿ ಬಳಸಿದ್ದಾರೆ. ರಾಹುಲ್‌ಗೆ ತಾನು ಯಾವ ಕುಟುಂಬಕ್ಕೆ ಸೇರಿದವನು, ಯಾರ ಮಗು ಎಂದು ತಿಳಿದಿಲ್ಲ. ಅವರು ಮೊದಲು ತಮ್ಮನ್ನು ನೋಡಿಕೊಂಡು ಬಳಿಕ ಇತರರ ಬಗ್ಗೆ ಚಿಂತಿಸಲಿ’ ಎಂದು ಕುಟುಕಿದರು.

ನಾನೇ ಸಿಎಂ ಅಭ್ಯರ್ಥಿ: ರಾಗಾ ಸಮ್ಮುಖದಲ್ಲೇ ತೇಜಸ್ವಿ ಘೋಷಣೆ

ಪಟನಾ: ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ‘ನಾನೇ ಇಂಡಿಯಾ ಕೂಟದ ಸಿಎಂ ಅಭ್ಯರ್ಥಿ’ ಎಂದು ರಾಹುಲ್ ಸಮ್ಮುಖದಲ್ಲೇ ಘೋಷಿಸಿದ್ದಾರೆ.ಇಂಡಿಯಾ ಕೂಟದ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದು ಇನ್ನೂ ಕಗ್ಗಂಟಾಗಿದೆ. ಈ ಹಂತದಲ್ಲೇ ತೇಜಸ್ವಿ ಘೋಷಣೆ ಮಹತ್ವ ಪಡೆದಿದೆ.

ಆರಾದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಮತ ಅಧಿಕಾರ ಯಾತ್ರೆಯಲ್ಲಿ ಮಾತನಾಡಿದ ತೇಜಸ್ವಿ, ‘ಬಿಹಾರ ಸಿಎಂ ನಿತೀಶ್‌ ಕುಮಾರ್ ನಕಲಿ ಮುಖ್ಯಮಂತ್ರಿ. ನನ್ನದೇ ನೀತಿಗಳನ್ನು ಅವರು ಕಾಪಿ ಮಾಡುತ್ತಾರೆ. ನಿಮಗೆ ಒರಿಜಿನಲ್‌ ಮುಖ್ಯಮಂತ್ರಿ ಬೇಕಾ ಅಥವಾ ನಕಲಿ ಮುಖ್ಯಮಂತ್ರಿ ಬೇಕಾ? ಇಲ್ಲಿ ನಾನೇ ಒರಿಜಿನಲ್‌ ಮುಖ್ಯಮಂತ್ರಿ ಅಭ್ಯರ್ಥಿ’ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌