ಅಬಕಾರಿ ಇಲಾಖೆಯ ಅಕ್ರಮ ಹಿನ್ನೆಲೆ ಮಂಗಳವಾರ ವಿಧಾನಸಭೆಯಲ್ಲಿ ಪುನಃ ಪ್ರತಿಧ್ವನಿಸಿದ್ದು, ಈ ಖಾತೆಯ ಸಚಿವ ಆರ್‌.ಬಿ. ತಿಮ್ಮಾಪುರ ರಾಜೀನಾಮೆಗೆ ಪ್ರತಿಪಕ್ಷದ ಬಿಗಿಪಟ್ಟು ಹಿಡಿದಿದೆ. ಆದರೆ ಸಮರ್ಪಕ ದಾಖಲೆ ನೀಡದೇ ಆರೋಪಿಸಲಾಗುತ್ತಿದೆ ಎಂದು ತಿಮ್ಮಾಪುರ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

 ವಿಧಾನಸಭೆ : ಅಬಕಾರಿ ಇಲಾಖೆಯ ಅಕ್ರಮ ಹಿನ್ನೆಲೆ ಮಂಗಳವಾರ ವಿಧಾನಸಭೆಯಲ್ಲಿ ಪುನಃ ಪ್ರತಿಧ್ವನಿಸಿದ್ದು, ಈ ಖಾತೆಯ ಸಚಿವ ಆರ್‌.ಬಿ. ತಿಮ್ಮಾಪುರ ರಾಜೀನಾಮೆಗೆ ಪ್ರತಿಪಕ್ಷದ ಬಿಗಿಪಟ್ಟು ಹಿಡಿದಿದೆ. ಆದರೆ ಸಮರ್ಪಕ ದಾಖಲೆ ನೀಡದೇ ಆರೋಪಿಸಲಾಗುತ್ತಿದೆ ಎಂದು ತಿಮ್ಮಾಪುರ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಪ್ರತಿಪಕ್ಷ ಶಾಸಕರು, ‘ಸದನದ ಮುಂದಿಟ್ಟಿರುವ ದಾಖಲೆ ಆಧಾರ ಮೇಲೆ ರಾಜೀನಾಮೆ ನೀಡಬೇಕು’ ಎಂದು ಪಟ್ಟು ಹಿಡಿದು ಮಂಗಳವಾರ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಮಂಗಳವಾರ ಕಲಾಪದ ಬಹುಪಾಲು ಅಬಕಾರಿ ಇಲಾಖೆ ಅಕ್ರಮದ ಕುರಿತ ಚರ್ಚೆಗೆ ಸಮಯ ಮೀಸಲಿಡಲಾಗಿತ್ತು. ಕಲಾಪ ಆರಂಭದಲ್ಲಿಯೇ ಅಬಕಾರಿ ಅಕ್ರಮದ ಕುರಿತಂತೆ ಚರ್ಚೆಗೆ ವಿರೋಧ ಪಕ್ಷದ ಶಾಸಕರು ಆಗ್ರಹಿಸಿದರು. ಅದಕ್ಕೆ ಒಪ್ಪಿ ಚರ್ಚೆಗೆ ಸೂಚಿಸಿದ ಸ್ಪೀಕರ್‌ ಯು.ಟಿ. ಖಾದರ್‌ ಅವರು ನಿಯಮ 69 ಅಡಿಯಲ್ಲಿ ಅರ್ಧ ಗಂಟೆಯ ಚರ್ಚೆಗೆ ರೂಲಿಂಗ್‌ ನೀಡಿದರು.

ವಿಕ್ಷದ ನಾಯಕ ಆರ್‌.ಅಶೋಕ್‌ ಸೇರಿದಂತೆ ಬಿಜೆಪಿ, ಜೆಡಿಎಸ್‌ನ ಸದಸ್ಯರು ಅಬಕಾರಿ ಇಲಾಖೆಯು ಮದ್ಯದಂಗಡಿಗೆ ಪರವಾನಗಿ ನೀಡುವುದು, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಅಲ್ಲದೆ, ಅಧಿಕಾರಿಗಳ ಮೂಲಕ ಸಚಿವ ತಿಮ್ಮಾಪುರ ಮತ್ತು ಅವರ ಪುತ್ರ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ವರ್ಗಾವಣೆಯಲ್ಲಿ ಪ್ರತಿ ಹುದ್ದೆಗೆ ದರ ನಿಗದಿ ಮಾಡಲಾಗಿದೆ ಹಾಗೂ ಲಂಚ ಪಡೆದು ಬೇಕಾಬಿಟ್ಟಿಯಾಗಿ ಮದ್ಯ ಮಾರಾಟ ಸನ್ನದ್ಧುಗಳನ್ನು ನೀಡಲಾಗಿದೆ. ಇಲಾಖೆಯ ಪ್ರತಿ ಅಕ್ರಮದಲ್ಲಿ ಸಚಿವರ ಪಾತ್ರವಿದ್ದು, ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಚರ್ಚೆ ವೇಳೆ ವಿಪಕ್ಷ ಶಾಸಕರ ಆರೋಪಕ್ಕೆ ಕಾಂಗ್ರೆಸ್‌ ಶಾಸಕರು ತಿರುಗೇಟು ನೀಡಿ, ಬಿಜೆಪಿಯ ವಿ. ಸುನೀಲ್‌ಕುಮಾರ್‌ ಅವರ ಕ್ಷೇತ್ರ ಕಾರ್ಕಳದಲ್ಲಿ ನಡೆದ ಪರಶುರಾಮ ಪ್ರತಿಮೆ ಸ್ಥಾಪನೆ ಅಕ್ರಮ, ಪಿಎಸ್‌ಐ ನೇಮಕಾತಿ ಅಕ್ರಮ ಸೇರಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿಬಂದ ಹಲವು ಅಕ್ರಮಗಳನ್ನು ಪ್ರಸ್ತಾಪಿಸಿ ವಿಪಕ್ಷ ಶಾಸಕರನ್ನು ಕಟ್ಟಿ ಹಾಕುವ ಪ್ರಯತ್ನ ನಡೆಸಿದರು. ಅದಕ್ಕೆ ಪ್ರತಿಯಾಗಿ ವಿಪಕ್ಷ ಶಾಸಕರೂ, ಹಾಲಿ ಸರ್ಕಾರಗಳ ಲೋಪವನ್ನು ಸದನಕ್ಕೆ ತಿಳಿಸುವ ಕೆಲಸ ಮಾಡಿದರು. ಇದರಿಂದಾಗಿ ಆಡಳಿತ ಮತ್ತು ವಿಪಕ್ಷ ಶಾಸಕರ ನಡುವೆ ವಾಗ್ವಾದ ನಡೆಯಿತು.

ಇದರ ನಡುವೆಯೇ ಚರ್ಚೆ ಸುಧೀರ್ಘವಾಗಿ ಸಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಯಮ 69ರ ಅಡಿಯಲ್ಲಿ ಸುಧೀರ್ಘ ಚರ್ಚೆಗೆ ಅವಕಾಶವಿಲ್ಲ. ಸದನದ ಸಮಯ ಹಾಳು ಮಾಡಲಾಗುತ್ತಿದೆ. ಕಲಾಪ ಆರಂಭಕ್ಕೂ ಮುನ್ನ ಸ್ಪೀಕರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ, ವಿರೋಧ ಪಕ್ಷಗಳು ಅರ್ಧ ಗಂಟೆಯಲ್ಲಿ ವಿಷಯ ಮಂಡಿಸುತ್ತೇವೆ ಎಂದಿದ್ದರು. ಆದರೀಗ, ಸುಧೀರ್ಘ ಚರ್ಚೆ ಮಾಡಲಾಗುತ್ತಿದೆ ಎಂದರು. ಅಲ್ಲದೆ, ಮನರೇಗಾ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧದ ರಾಜ್ಯ ಸರ್ಕಾರದ ನಿರ್ಣಯ ಮಂಡಿಸಲು ಮುಂದಾದರು.

ಅದಕ್ಕೆ ಅಡ್ಡಿಪಡಿಸಿದ ವಿರೋಧ ಪಕ್ಷದ ಶಾಸಕರು, ಅಬಕಾರಿ ಅಕ್ರಮದ ಕುರಿತಂತೆ ಮುಖ್ಯಮಂತ್ರಿ ಅವರು ಅಥವಾ ಸಚಿವರು ಮೊದಲು ಉತ್ತರ ನೀಡಬೇಕು. ಅಲ್ಲಿಯವರೆಗೆ ಬೇರೆ ಯಾವುದೇ ಕಾರ್ಯಕಲಾಪ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್‌ ಖಾದರ್‌, ಸಂಜೆ ವೇಳೆಗೆ ಅಬಕಾರಿ ಸಚಿವರಿಂದ ಉತ್ತರ ಕೊಡಿಸಲಾಗುವುದು ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.

ಕಟ್ಟುಕತೆಗೆಲ್ಲ ರಾಜೀನಾಮೆ ನೀಡಲ್ಲ: ತಿಮ್ಮಾಪುರ

ವಿರೋಧ ಪಕ್ಷಗಳ ಆರೋಪಕ್ಕೆ ಸಂಜೆ ಉತ್ತರಿಸಿದ ಆರ್‌.ಬಿ. ತಿಮ್ಮಾಪುರ, ನನ್ನ ವಿರುದ್ಧ ಅಕ್ರಮದ ಆರೋಪ ಮಾಡಿರುವ ಮದ್ಯ ಮಾರಾಗಾರರ ಸಂಘಗಳ ಒಕ್ಕೂಟವು ಅಸ್ತಿತ್ವದಲ್ಲೇ ಇಲ್ಲ. ಈ ಒಕ್ಕೂಟವು ಈ ಹಿಂದೆ ಅಬಕಾರಿ ಸಚಿವರಾಗಿದ್ದ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ವಿರುದ್ಧವೂ ಆರೋಪ ಮಾಡಿತ್ತು. ಇಂತಹ ಸಂಘ ಈಗ ನನ್ನ ಮೇಲೆ ಆರೋಪ ಮಾಡಿದೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಪಾಲಯ್ಯ, ಶಶಿಕಲಾ ಜೊಲ್ಲೆ ಸೇರಿದಂತೆ ಹಾಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರ ವಿರುದ್ಧವೂ ಆಡಿಯೋ ಆರೋಪಗಳು ಕೇಳಿಬಂದಿದ್ದವು. ಆಗೆಲ್ಲ ಅವರು ರಾಜೀನಾಮೆ ನೀಡಲಿಲ್ಲ. ಸುಳ್ಳು, ಕಟ್ಟು ಕಥೆಗೆಲ್ಲ ನಾನು ರಾಜೀನಾಮೆ ನೀಡಲಾಗದು’ ಎಂದು ಹೇಳಿದರು.

ರಾಜೀನಾಮೆ ನೀಡಿ, ತನಿಖೆಗೆ ಎಸ್‌ಐಟಿ ರಚಿಸಿ:

ಆರ್‌.ಬಿ. ತಿಮ್ಮಾಪುರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಶಾಸಕರು, ಸಚಿವರೇ ನೇರವಾಗಿ ಹಣ ಪಡೆಯುತ್ತಾರೆ ಎಂದು ಅಧಿಕಾರಿಗಳು ಹೇಳಿರುವ ಆಡಿಯೋಗಳಿವೆ. ಈ ಕುರಿತು ಲೋಕಾಯುಕ್ತದಲ್ಲಿ ಸಚಿವರ ವಿರುದ್ಧ ದೂರು ದಾಖಲಾಗಿದೆ. ಇಷ್ಟೆಲ್ಲ ಇದ್ದರೂ, ಅಕ್ರಮ ನಡೆದೇ ಇಲ್ಲ ಎಂದು ಸಚಿವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಮುಖ್ಯಮಂತ್ರಿ ಅವರು ಈ ಕೂಡಲೇ ಸಚಿವರ ರಾಜೀನಾಮೆ ಪಡೆಯಬೇಕು. ಜತೆಗೆ ಅಬಕಾರಿ ಅಕ್ರಮದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು. ಅಲ್ಲಿಯವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸ್ಪೀಕರ್‌ ಯು.ಟಿ. ಖಾದರ್‌ ಅವರು ಬುಧವಾರಕ್ಕೆ ಕಲಾಪ ಮುಂದೂಡಿದರು. ಅದಾದ ನಂತರ ತಿಮ್ಮಾಪುರ್‌ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಜಂಟಿಯಾಗಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು.

ರಾಜೀನಾಮೆ ನೀಡಲ್ಲ

ನನ್ನ ವಿರುದ್ಧ ಅಕ್ರಮದ ಆರೋಪ ಮಾಡಿರುವ ಮದ್ಯ ಮಾರಾಗಾರರ ಸಂಘಗಳ ಒಕ್ಕೂಟವು ಅಸ್ತಿತ್ವದಲ್ಲೇ ಇಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಪಾಲಯ್ಯ, ಶಶಿಕಲಾ ಜೊಲ್ಲೆ. ಅಶೋಕ್‌ ಅವರ ವಿರುದ್ಧವೂ ಆಡಿಯೋ ಆರೋಪಗಳು ಕೇಳಿಬಂದಿದ್ದವು. ಆಗೆಲ್ಲ ಅವರು ರಾಜೀನಾಮೆ ನೀಡಲಿಲ್ಲ. ಸುಳ್ಳು, ಕಟ್ಟು ಕಥೆಗೆಲ್ಲ ನಾನು ರಾಜೀನಾಮೆ ನೀಡಲಾಗದು.

- ಆರ್‌.ಬಿ. ತಿಮ್ಮಾಪುರ, ಅಬಕಾರಿ ಸಚಿವ

ಅಬಕಾರಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಸಾಕ್ಷ್ಯ ಕೊಟ್ಟರೂ ಅಬಕಾರಿ ಸಚಿವರ ರಾಜೀನಾಮೆ ಪಡೆದಿಲ್ಲ. ಈ ಭ್ರಷ್ಟ ಅಬಕಾರಿ ಸಚಿವರ ರಾಜೀನಾಮೆ ಕೊಡುವವರೆಗೂ ಬಿಜೆಪಿ-ಜೆಡಿಎಸ್‌ ಶಾಸಕರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಮುಂದುವರೆಸುತ್ತೇವೆ

- ಆರ್‌.ಅಶೋಕ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ

ಅಬಕಾರಿ ಇಲಾಖೆ ಹಗರಣ ಜಗಜ್ಜಾಹೀರಾಗಿದೆ. ಈ ಪಾಪದ ಹಣದಿಂದ ಸರ್ಕಾರ ನಡೆಸಬೇಕಾ? ಅಬಕಾರಿ ಸಚಿವ ರಾಜೀನಾಮೆ ಕೊಡುವವರೆಗೂ ಬಿಜೆಪಿ-ಜೆಡಿಎಸ್‌ ಶಾಸಕರು ಅಹೋರಾತ್ರಿ ಧರಣಿ ಮಾಡುತ್ತೇವೆ

- ಸಿ.ಬಿ.ಸುರೇಶ್‌ ಬಾಬು, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ಸುಮಾರು ಆರು ಸಾವಿರ ಕೋಟಿ ರು. ಅಬಕಾರಿ ಹಗರಣದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಗೂ ಪಾಲು ಹೋಗಿದೆ. ಭಂಡತನದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕು

- ಬಿ.ವೈ.ವಿಜಯೇಂದ್ರ, ಶಾಸಕ