ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ ದುರುದ್ದೇಶಪೂರಿತ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಮುಖಂಡರಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ ದುರುದ್ದೇಶಪೂರಿತ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಮುಖಂಡರಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸಲಹೆ ನೀಡಿದರು.ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ತಿಮ್ಮಾಪುರ ಅವರ ವಿರುದ್ಧ ಆರೋಪ ಮಾಡುವ ಮುನ್ನ ವಿಪಕ್ಷ ನಾಯಕ ಆರ್.ಅಶೋಕ ಒಂದು ಸಲ ತಿರುಗಿ ನೋಡಿಕೊಳ್ಳಬೇಕು. ತಮ್ಮ ಮೇಲೆ ಅನೇಕ ಆರೋಪಗಳು ಬಂದಾಗ ರಾಜೀನಾಮೆ ಕೊಟ್ಟಿದ್ದರಾ? ಈಗ ಯಾರೋ ಒಬ್ಬ ಅಧಿಕಾರಿ ತಾನು ಲಂಚ ಪಡೆದು ಇನ್ಯಾರೋ ಹೆಸರು ಹೇಳಿದರೆ ಅದಕ್ಕೆ ಸಚಿವರು ಹೇಗೆ ಕಾರಣರಾಗುತ್ತಾರೆ ಎಂದು ಪ್ರಶ್ನಿಸಿದರು.
ಆರ್.ಬಿ. ತಿಮ್ಮಾಪುರ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ ದಲಿತ ವ್ಯಕ್ತಿ. ಪಕ್ಷದ ಬಲ ಮತ್ತು ಜನರ ಬೆಂಬಲದಿಂದ ಶಾಸಕರು, ಸಚಿವರು, ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇದೀಗ ಬಿಜೆಪಿ ಅವರ ವಿರುದ್ಧ ದಮನಕಾರಿ ದೃಷ್ಟಿ ಹರಿಸಿ ಸುಳ್ಳು ಆರೋಪ ಮಾಡಿ, ರಾಜೀನಾಮೆ ಕೇಳುತ್ತಿರುವುದು ಸರಿಯಲ್ಲ. ಬಿಜೆಪಿ ಇದೇ ಪ್ರವೃತ್ತಿ ಮುಂದುವರಿಸಿದರೆ ಅವರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ ಮಾತನಾಡಿ, ಲಕ್ಷ್ಮೀನಾರಾಯಣ ಎನ್ನುವ ರೌಡಿ ಶೀಟರ್ ಮುಂದಿಟ್ಟುಕೊಂಡು ಸಚಿವ ತಿಮ್ಮಾಪುರ ವಿರುದ್ಧ ಸುಳ್ಳು ಆರೋಪ ಮಾಡಿ ಅವರ ತೇಜೋವಧೆ ಮಾಡುತ್ತಿದ್ದಾರೆ. ಮೂರು ದಶಕದ ರಾಜಕಾರಣದಲ್ಲಿ ಅವರು ಎಂದೂ ಹೆಸರು ಕೆಡಿಸಿಕೊಂಡಿಲ್ಲ. ಈ ಹಿಂದೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಮ್ಮಾಪುರ ವಿರುದ್ಧ ಸುಳ್ಳು ಆರೋಪ ಮಾಡಿದ್ದರು. ಆರೋಪವನ್ನು ಸಾಬೀತು ಪಡಿಸಲಾಗದೇ ಸುಮ್ಮನಾದರು. ಈಗಲೂ ಸಹ ಯಾರೋ ಒಬ್ಬ ಅಧಿಕಾರಿ ಹೆಸರು ಹೇಳಿದ್ದಾನೆಂದು ಅವರ ಮೇಲೆ ಆರೋಪ ಎಷ್ಟು ಸರಿ? ಸಚಿವರೇನಾದರೂ ಮಾತನಾಡಿದ್ದಾರಾ? ಈ ಬಗ್ಗೆ ದಾಖಲೆಗಳು ಇವೆಯಾ? ಮತ್ತೇಕೆ ಅವರು ರಾಜೀನಾಮೆ ನೀಡಬೇಕು? ಬಿಜೆಪಿಗರ ಆರೋಪ ಸತ್ಯಕ್ಕೆ ದೂರವಾಗಿದೆ. ಆರಂಭದಿಂದಲೂ ಸಚಿವ ತಿಮ್ಮಾಪುರ ವಿರುದ್ಧ ಹುರುಳಿಲ್ಲದ ಆರೋಪ ಮಾಡಿಕೊಂಡು ಬಂದಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಉದಯಸಿಂಗ್ ಪಡತಾರೆ ಮಾತನಾಡಿ, ರಾಜಕಾರಣದಲ್ಲಿ ಟೀಕೆಗಳು ಆರೋಗ್ಯಕರವಾಗಿಬೇಕು. ಅಭಿವೃದ್ಧಿ ವಿಚಾರವಾಗಿ ಸಲಹೆ ನೀಡಿದರೆ ಯಾರಾದರೂ ಸ್ವೀಕರಿಸುತ್ತಾರೆ. ಆದರೆ, ವ್ಯಕ್ತಿಯ ಹೆಸರಿಗೆ ಕಳಂಕ ತರುವಂತೆ ಟೀಕೆಗಳು ಇರಬಾರದು. ತಿಮ್ಮಾಪುರ ಮೇಲೆ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳು ಬಿಜೆಪಿ ಮುಖಂಡರ ಬಳಿ ಇಲ್ಲ ಎಂದು ಹೇಳಿದರು.ಮುಖಂಡರಾದ ಎಸ್.ಪಿ.ದಾನಪ್ಪಗೋಳ, ಸಂಗಪ್ಪ ಇಮ್ಮಣ್ಣವರ, ಲಕ್ಷ್ಮಣ ಮಾಲಗಿ ಇದ್ದರು.