ಕ್ಷೇತ್ರದ ಜನರು ಪ್ರೀತಿ, ವಿಶ್ವಾಸದಿಂದ ಅಭಿಮಾನ ವ್ಯಕ್ತಪಡಿಸಿ ಎಲ್ಲದಕ್ಕೂ ಸಹಕಾರ, ಮಾರ್ಗದರ್ಶನ ನೀಡುತ್ತ ನಮ್ಮ ಕುಟುಂಬಕ್ಕೆ ಪ್ರೋತ್ಸಾಹ ನೀಡಿದ್ದೀರಿ. ಇದನ್ನು ನಾವು ಎಂದಿಗೂ ಮರೆಯಲು, ಋಣ ತೀರಿಸಲು ಸಾಧ್ಯವಿಲ್ಲ. ತಂದೆ ಆರ್.ಬಿ. ತಿಮ್ಮಾಪುರ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು, ನಾನೂ ಸಹ ಅವರಂತೆ ಅಭಿವೃದ್ಧಿ ಕೆಲಸ ಮಾಡಬೇಕೆಂಬ ಕನಸು ಕಂಡಿದ್ದೇನೆ. ಅದಕ್ಕೆ ಜನರ ಆಶೀರ್ವಾದ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಆರ್. ತಿಮ್ಮಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಕ್ಷೇತ್ರದ ಜನರು ಪ್ರೀತಿ,ವಿಶ್ವಾಸದಿಂದ ಅಭಿಮಾನ ವ್ಯಕ್ತಪಡಿಸಿ ಎಲ್ಲದಕ್ಕೂ ಸಹಕಾರ, ಮಾರ್ಗದರ್ಶನ ನೀಡುತ್ತ ನಮ್ಮ ಕುಟುಂಬಕ್ಕೆ ಪ್ರೋತ್ಸಾಹ ನೀಡಿದ್ದೀರಿ. ಇದನ್ನು ನಾವು ಎಂದಿಗೂ ಮರೆಯಲು, ಋಣ ತೀರಿಸಲು ಸಾಧ್ಯವಿಲ್ಲ. ತಂದೆ ಆರ್.ಬಿ. ತಿಮ್ಮಾಪುರ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು, ನಾನೂ ಸಹ ಅವರಂತೆ ಅಭಿವೃದ್ಧಿ ಕೆಲಸ ಮಾಡಬೇಕೆಂಬ ಕನಸು ಕಂಡಿದ್ದೇನೆ. ಅದಕ್ಕೆ ಜನರ ಆಶೀರ್ವಾದ ಮಾಡಬೇಕು ಎಂದು ಸಚಿವ ಆರ್.ಬಿ. ತಿಮ್ಮಾಪುರ ಅವರ ಪುತ್ರ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಸ್ತುವಾರಿ ವಿನಯ ಆರ್. ತಿಮ್ಮಾಪುರ ಹೇಳಿದರು.

ಮುಧೋಳ ತಾಲೂಕು ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು, ಅಭಿಮಾನಿಗಳು ಮಂಗಳವಾರ ನಗರದ ಶ್ರೀ ದಾನಮ್ಮದೇವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 31ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಹುಟ್ಟುಹಬ್ಬವನ್ನು ಸಂತೋಷಕ್ಕಾಗಿ ಆಚರಿಸುವ ಬದಲು ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಆಚರಿಸುವುದು ನನ್ನ ಮುಖ್ಯ ಉದ್ದೇಶ ಮತ್ತು ಆಸೆಯಾಗಿತ್ತು. ಕಾರ್ಯಕರ್ತರು, ಅಭಿಮಾನಿಗಳು ನನ್ನ ಹುಟ್ಟುಹಬ್ಬದ ನಿಮಿತ್ತ ಹಲವಾರು ವಿಧಾಯಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಖಷಿ ನೀಡಿದೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಐ.ಎಚ್. ಅಂಬಿ, ಮಹೇಶ ಬಿಳ್ಳೂರ, ಉದಯಸಿಂಗ್ ಪಡತಾರೆ ಮಾತನಾಡಿ, ಕ್ಷೇತ್ರದಲ್ಲಿ ಕಷ್ಟದಲ್ಲಿದ್ದವರ ಪರ ಸ್ಪಂದಿಸುವ ಗುಣ ಬೆಳೆಸಿಕೊಂಡಿರುವ ವಿನಯಶೀಲ ರಾಜಕಾರಣಿಯಾಗಿದ್ದಾರೆ. ವಿನಯ ಹೆಸರಿಗೆ ತಕ್ಕಂತೆ ವಿನಯವಂತರಾಗಿ ಉದ್ಯೋಗಿಗಳಿಗೆ ನೆರವು ನೀಡುವ ಸಲುವಾಗಿ ಬಂದಿದ್ದಾರೆ ಎಂದು ಹೇಳಿದರು.

ಬುಧವಾರ ನಡೆಯುವ ಉದ್ಯೋಗ ಮೇಳದಲ್ಲಿ ಕನಿಷ್ಠ 100ಕ್ಕೂ ಅಧಿಕ ಖಾಸಗಿ ಕಂಪನಿಗಳು ಭಾಗವಹಿಸಲಿದ್ದಾರೆ. ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದ್ದು, ತಾಲೂಕಿನ ಯುವಕರು ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿ ಸದುಪಯೋಗ ಪಡೆದು ಕೊಳ್ಳಬೇಕೆಂದು ವಿನಯ ತಿಮ್ಮಾಪುರ ವಿನಂತಿಸಿದರು.

ಶಂಕರ ತಿಮ್ಮಾಪುರ, ಹನುಮಂತ ತಿಮ್ಮಾಪುರ, ಹೆಬ್ಬಾಳಪ್ಪ ತಿಮ್ಮಾಪುರ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ವಿವಿಧ ಮಠಾಧೀಶರು ಮತ್ತು ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಸಂಜಯ ಎಲ್. ತಡೆವಾಡ, ಚಿನ್ನು ಅಂಬಿ ಸೇರಿ ಲೋಕಾಪುರ, ಮುಧೋಳ ಬ್ಲಾಕ್‌ಗಳ ಯುವ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಸ್ಥಳೀಯ ನಾಗರಿಕರು ಹಾಗೂ ವೈದ್ಯಕೀಯ ತಂಡದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಜನ್ಮದಿನದ ಶುಭಾಶಯ ಕೋರಿದರು.

ದೇವಸ್ಥಾನಗಳಲ್ಲಿ ಪೂಜೆ: ಕಾರ್ಯಕ್ರಮಕ್ಕೂ ಮುಂಚೆ ನಗರದ ಗಣಪತಿ ದೇವಸ್ಥಾನ, ಬಬಲಾದಿ ಸದಾಶಿವ ಮುತ್ಯಾನ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದರು. ಉದ್ಯೋಗ ಮೇಳ, ಕ್ವಿಜ್ ಸ್ಪರ್ಧೆ, ಆರೋಗ್ಯ ತಪಾಸಣೆ ಶಿಬಿರಗಳಿಗೆ ವಿನಯ ತಿಮ್ಮಾಪುರ ಚಾಲನೆ ನೀಡಿದರು.

ಕಾರ್ಯಕರ್ತರು, ಅಭಿಮಾನಿಗಳು ನನ್ನ ಹುಟ್ಟುಹಬ್ಬದ ನಿಮಿತ್ತ ಹಲವಾರು ವಿಧಾಯಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಖುಷಿ ತಂದಿದೆ. ರಕ್ತದಾನ ಮೂಲಕ ಜೀವ ಉಳಿಸುವುದು, ವೈದ್ಯಕೀಯ ಉಚಿತ ಸೇವೆಯ ಮೂಲಕ ಆರೋಗ್ಯ ರಕ್ಷಣೆ, ಹೆಲ್ಮೆಟ್ ವಿತರಣೆ ಮೂಲಕ ರಸ್ತೆ ಸುರಕ್ಷತೆಗೆ ಉತ್ತೇಜನ ಮತ್ತು ಕ್ವಿಜ್ ಮೂಲಕ ಜ್ಞಾನ ಹಂಚುವುದು ಇವೆಲ್ಲವೂ ಯುವ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಪ್ರಯತ್ನಗಳಾಗಿವೆ.

- ವಿನಯ ತಿಮ್ಮಾಪುರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ