ಕನ್ನಡಪ್ರಭ ವಾರ್ತೆ ವಿಜಯಪುರ
ಬಿ.ಎಲ್.ಡಿ.ಇ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಸಮರ್ಪಣೆ, ಪರಿಶ್ರಮ ಮತ್ತು ನಿಷ್ಠೆ ಶ್ಲಾಘನೀಯವಾಗಿದೆ ಎಂದು ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅಶೋಕ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಸಬಲಾ ಮಹಿಳಾ ಸಬಲೀಕರಣ ಘಟಕ ವತಿಯಿಂದ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೃತ್ತಿಪರ ಜವಾಬ್ದಾರಿಗಳ ಜೊತೆಗೆ ವೈಯಕ್ತಿಕ ಬದುಕಿನ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತ ಸಂಸ್ಥೆಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಬಣ್ಣಿಸಿದರು.
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಮತ್ತು ಅಂಜುಮನ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಸರನಾಡಗೌಡ ಮಾತನಾಡಿ, ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಅವರ ಯಶಸ್ಸಿಗೆ ಸಹಾಯ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಅನುಸಂಧಾನ-2026 ರಾಷ್ಟ್ರೀಯ ಸಮ್ಮೇಳನದ ಮಾಹಿತಿ ಪರ್ತಿಕೆಯ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಮಹಿಳಾ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಬೋಧಕರ ಹೊರತಾದ ಮಹಿಳಾ ಸಿಬ್ಬಂದಿಯವರ ವರ್ಷದಪೂರ್ತಿ ಸಲ್ಲಿಸಿದ ಸೇವೆ ಮತ್ತು ಸಮರ್ಪಣೆ ಗೌರವಿಸುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆಯ ಮಂಟೂರಿಗೆ ಮನರಂಜನಾ ಪ್ರವಾಸವನ್ನು ಕೂಡ ಆಯೋಜಿಸಲಾಗಿತ್ತು.ಸಬಲಾ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಡಾ.ವಿಜಯಲಕ್ಷ್ಮೀ ಬೆನಕಟ್ಟಿ ಸ್ವಾಗತಿಸಿದರು. ಶಲ್ಯ ತಂತ್ರ ವಿಭಾಗದ ಪ್ರಾಧ್ಯಾಪಕ ಡಾ.ಪ್ರಸಾದಶಕ್ತಿ ಗನ್ನೂರ ಮಹಿಳಾ ಸಬಲೀಕರಣ ಘಟಕದ ವಾರ್ಷಿಕ ವರದಿ ಮಂಡಿಸಿದರು. ಸಬಲಾ ಸದಸ್ಯ ಕಾರ್ಯದರ್ಶಿ ಡಾ.ಅಶ್ವಿನಿ ನಿಂಬಾಳ ವಂದಿಸಿದರು. ಸಂಸ್ಥೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.