ಕನ್ನಡಪ್ರಭ ವಾರ್ತೆ ವಿಜಯಪುರ
ನೀರಾವರಿಗಾಗಿ ಭೂಮಿ ಕಳೆದುಕೊಂಡ ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ಹೊಳೆಜೈನಾಪುರ ಗ್ರಾಮದಲ್ಲಿ ಲಕ್ಷ್ಮೀದೇವಿ, ಈಶ್ವರ, ನಂದಿ ಮತ್ತು ಮಾರುತೇಶ್ವರ ದೇವರ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಾಗೂ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಯುಕೆಪಿ 3ನೇ ಹಂತದ ಭೂಸ್ವಾಧೀನವಾಗಲಿರುವ ಜಮೀನುಗಳ ರೈತರಿಗೆ ಒಪ್ಪಂದದಂತೆ ಪರಿಹಾರ ಚೆಕ್ ವಿತರಣೆ ಕಾರ್ಯಕ್ಕೆ ಬಾಗಲಕೋಟೆಯಲ್ಲಿ ಚಾಲನೆ ನೀಡಲಾಗಿದೆ. ಈ ಮೂಲಕ ನಿರಾಶ್ರೀತರ ಕಣ್ಣೀರು ಒರೆಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ಜೈನಾಪುರ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜೊತೆಯಲ್ಲಿಯೇ ಸರ್ಕಾರ ಬಡವರು, ರೈತರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಮಮದಾಪುರ ಹೋಬಳಿಗೆ ಅಭಿವೃದ್ಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ವೈವಿದ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಸಂಸ್ಕೃತಿ, ಪ್ರಕೃತಿ ಮತ್ತು ದೈವಾರಾಧನೆಗಳು ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಹೊಳೆಜೈನಾಪುರದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಗ್ರಾಮಸ್ಥರ ದೈವಭಕ್ತಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.ಇದೇ ವೇಳೆ ಗ್ರಾಮಸ್ಥರು ಸಚಿವ ಎಂ.ಬಿ.ಪಾಟೀಲ ಅವರನ್ನು ಬಾಳೆಹಣ್ಣುಗಳಿಂದ ತುಲಾಭಾರ ನಡೆಸುವ ಮೂಲಕ ಧನ್ಯತೆ ಅರ್ಪಿಸಿದರು. ಈ ವೇಳೆ ಜಿ.ಪಂ.ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಮುಖಂಡರಾದ ಪ್ರಶಾಂತ ಹಿರೇದೇಸಾಯಿ, ಜಗನ್ನಾಥ ಹಿರೇದೇಸಾಯಿ, ಭೀಮಶಿ ನಾಗರಾಳ, ಬಸಪ್ಪ ಕೊಡೆಕಲ, ಶ್ರೀನಿವಾಸ ನಿಡೋಣಿ, ಅಮೀನ ಬಿದರಿ, ಲಕ್ಕಪ್ಪ ಅಂಬಿಗೇರ, ಮುತ್ತಪ್ಪ ಮಂಟೂರ, ದೇವಸ್ಥಾನದ ಪ್ರಮುಖರು, ಗ್ರಾಮಸ್ಥರು, ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.