ಅಸ್ಸಾಂನಲ್ಲಿ ಕಮಲದ ಹ್ಯಾಟ್ರಿಕ್‌ ಕಮಾಲ್‌ - ಶತಕ ಸಮೀಪಿಸಿದ ಬಿಜೆಪಿ ಮೈತ್ರಿಕೂಟದಿಂದ ದಾಖಲೆ

Published : May 05, 2026, 12:57 PM IST
india election

ಸಾರಾಂಶ

ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಸತತ ಮೂರನೇ ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. ಈ ಮೂಲಕ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಇತಿಹಾಸದಲ್ಲಿ ಬಿಜೆಪಿ ಹೊಸ ಇತಿಹಾಸ ಬರೆದಿದೆ

 ನವದೆಹಲಿ: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಸತತ ಮೂರನೇ ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. ಈ ಮೂಲಕ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಇತಿಹಾಸದಲ್ಲಿ ಬಿಜೆಪಿ ಹೊಸ ಇತಿಹಾಸ ಬರೆದಿದೆ. ಈ ಬಾರಿ ಬಿಜೆಪಿಗೆ ಸೋಲುಣಿಸಿಯೇ ಸಿದ್ಧ ಎಂಬ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ ಹೀನಾಯ ಸಾಧನೆ ತೋರುವ ಮೂಲಕ ತೀವ್ರ ಮುಖಭಂಗಕ್ಕೊಳಗಾಗಿದೆ.

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಅಸ್ಸಾಂನಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಗೆಲುವು ಪಕ್ಕಾ ಆಗಿತ್ತು. ಆ್ಯಕ್ಸಿಸ್‌ ಮೈ ಇಂಡಿಯಾ ಸೇರಿ ಹಲವು ಸಮೀಕ್ಷೆಗಳು ಅಸ್ಸಾಂನಲ್ಲಿ ಬಿಜೆಪಿ ಭಾರೀ ಗೆಲುವಿನ ಭವಿಷ್ಯ ನುಡಿದಿದ್ದವು. ಆ ಸಮೀಕ್ಷೆಗಳೆಲ್ಲ ಈಗ ನಿಜವಾಗಿದೆ. ಮುಖ್ಯಮಂತ್ರಿ ಹೇಮಂತ್‌ ಬಿಸ್ವಾ ಶರ್ಮಾ ಅವರ ವರ್ಚಸ್ಸು ಮತ್ತು ಮೋದಿ ಅಲೆ ಎದುರು ಗೌರವ್‌ ಗಗೋಯ್‌ ನೇತೃತ್ವದ ಕಾಂಗ್ರೆಸ್‌ ಭಾರೀ ಪ್ರಚಾರದ ಹೊರತಾಗಿಯೂ ಹೆಚ್ಚಿನ ಸ್ಥಾನಗಳಿಸುವಲ್ಲಿ ವಿಫಲವಾಯಿತು. ಸ್ವತಃ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾದ ಗೌರವ್‌ ಗಗೋಯ್‌ ಅವರೇ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬೇಕಾಯಿತು.

ಒಟ್ಟು 126 ಸ್ಥಾನ ಬಲದ ಅಸ್ಸಾಂನಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 75 ಸ್ಥಾನ ಗಳಿಸಿತ್ತು. ಆದರೆ ಈ ಬಾರಿ 90ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಆಡಳಿತ ವಿರೋಧಿ ಅಲೆ ಮೆಟ್ಟಿನಿಂತು ಉತ್ತಮ ಸಾಧನೆ ತೋರಿದೆ. ಇದು ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟದ ಈವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ.

2016ರ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ 86 ಸ್ಥಾನ ಗೆದ್ದಿದ್ದೇ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಕಳೆದ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಸ್ಥಾನಪಡೆದಿದ್ದ ಮೈತ್ರಿಕೂಟ ಗೆದ್ದ ಈ ಬಾರಿ 30 ಗಡಿದಾಟಲು ಪರದಾಡಿದೆ. ಕಾಂಗ್ರೆಸ್‌ನ ಗೌರವ್‌ ಗಗೋಯ್‌, ರಾಯ್‌ಜೋರ್‌ ದಳದ ಅಖಿಲ್‌ ಗಗೋಯ್‌ ಮತ್ತು ಎಜೆಪಿಯ ಲುರಿಂಜ್ಯೋತಿ ಗಗೋಯ್‌ ಅವರ 3ಜಿ ಮೈತ್ರಿಕೂಟ ಈ ಬಾರಿ ಕಮಾಲ್‌ ಮಾಡಲು ವಿಫಲವಾಗಿದೆ.

2ನೇ ಬಾರಿ ಸಿಎಂ ಆಗಲಿರುವ ಹಿಮಂತ ಬಿಸ್ವ ಶರ್ಮಾ

ಅಸ್ಸಾಂನಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಹಿಂದೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ನಾಯಕತ್ವ ಪ್ರಮುಖ ಪಾತ್ರವಹಿಸಿರುವ ಹಿನ್ನೆಲೆಯಲ್ಲಿ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಪಕ್ಕಾ ಆಗಿದೆ. 2021ರಲ್ಲಿ ಹಿಮಂತ ಬಿಸ್ವ ಶರ್ಮಾ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮೂಲತಃ ಕಾಂಗ್ರೆಸ್ಸಿಗರಾದ ಬಿಸ್ವಾ ಅವರು 2015ರಲ್ಲಿ ಬಿಜೆಪಿ ಸೇರಿದ್ದು, 2016ರ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಆ ಬಳಿಕ ಪಕ್ಷದ ಪ್ರಮುಖ ನಾಯಕನಾಗಿ ಬೆಳೆದ ನೇರಾನೇರ ಮಾತಿಗೆ ಹೆಸರುವಾಸಿ.

ಬಿಜೆಪಿ ಗೆದ್ದಿದ್ದು ಹೇಗೆ?

ಸಿಎಂ ಹಿಮಂತ ಉತ್ತಮ ನಾಯಕತ್ವ, ಉತ್ತಮ ಆಡಳಿತ ಪಕ್ಷಕ್ಕೆ ಹೆಚ್ಚಿನ ಮತ ತಂದುಕೊಟ್ಟಿದೆ

ಕಳೆದ 15 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸ ಜನರಿಗೆ ತಲುಪಿಸುವಲ್ಲಿ ಬಿಜೆಪಿ ಯಶಸ್ವಿ

ತನ್ನ ಮತದಾರರನ್ನು ಮತಗಟ್ಟೆಗೆ ಕರೆತರುವಲ್ಲಿ ಬಿಜೆಪಿ ಕಾರ್ಯಕರ್ತರು ಯಶಸ್ವಿಯಾದರು

ಅಕ್ರಮ ಒಳನುಸುಳುವಿಕೆ, ಲ್ಯಾಂಡ್‌- ಲವ್‌ ಜಿಹಾದ್‌ ತಡೆಯ ಬಿಜೆಪಿ ಭರವಸೆ ಫಲ ಕೊಟ್ಟಿದೆ

ಗೃಹಲಕ್ಷ್ಮೀ, ಲಖಪತಿ ದೀದಿ ಸೇರಿ ಹಲವು ಮಹಿಳಾ ಕೇಂದ್ರೀಯ ಭರವಸೆಗಳಿಂದ ಲಾಭ

ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿನ ಒಳಜಗಳ ಪಕ್ಷಕ್ಕೆ ದೊಡ್ಡಮಟ್ಟದಲ್ಲಿ ಮುಳುವಾಯಿತು

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಟೀಕಿಸಲು ಕಾಂಗ್ರೆಸ್‌ ನಾಯಕರಿಗೆ ದೊಡ್ಡ ಅಸ್ತ್ರಗಳೇ ಸಿಕ್ಕಲಿಲ್ಲ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಎಡರಂಗ ಮಣಿಸಿ ಕೇರಳದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ
ಬಂಗಾಳದಲ್ಲಿ ಬದಲಾದದ್ದು ಸರ್ಕಾರವಷ್ಟೇ ಅಲ್ಲ - ದೀದಿ ರಾಜ್ಯದಲ್ಲಿ ಭಯ ಈಗ ಮಾಯ