ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು

Published : Jan 09, 2026, 07:20 AM IST
hubli

ಸಾರಾಂಶ

ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ಪೊಲೀಸರು ವಿವಸ್ತ್ರಗೊಳಿಸಿದ ಘಟನೆಗೆ ಸಂಬಂಧಪಟ್ಟ ಪೊಲೀಸರನ್ನು ಶುಕ್ರವಾರ ಬೆಳಗ್ಗೆ ಒಂಬತ್ತು ಗಂಟೆಯೊಳಗಾಗಿ ಅಮಾನತು ಮಾಡಬೇಕು ಎಂದು ಗಡುವು ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌

  ಬೆಂಗಳೂರು :  ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ಪೊಲೀಸರು ವಿವಸ್ತ್ರಗೊಳಿಸಿದ ಘಟನೆಗೆ ಸಂಬಂಧಪಟ್ಟ ಪೊಲೀಸರನ್ನು ಶುಕ್ರವಾರ ಬೆಳಗ್ಗೆ ಒಂಬತ್ತು ಗಂಟೆಯೊಳಗಾಗಿ ಅಮಾನತು ಮಾಡಬೇಕು ಎಂದು ಗಡುವು ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌, ಇಲ್ಲದಿದ್ದರೆ ನಾನೇ ಹುಬ್ಬ‍ಳ್ಳಿಗೆ ತೆರಳಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಘಟನೆ ಮೂಲಕ ಪೊಲೀಸರೇ ದುಶ್ಶಾಸನರಾಗಿದ್ದಾರೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಹಿಳಾ ಆಯೋಗ ಈಗಾಗಲೇ ಛೀಮಾರಿ ಹಾಕಿದೆ. ನಾನು ಮಾನವ ಹಕ್ಕು ಆಯೋಗ ಹಾಗೂ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದೇನೆ. ದೌರ್ಜನ್ಯಕ್ಕೊಳಗಾದ ಮಹಿಳೆ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಬದುಕುವ ಗ್ಯಾರಂಟಿ ಇಲ್ಲ:

ಕಾಂಗ್ರೆಸ್‌ ಸರ್ಕಾರದಲ್ಲಿ ಮಹಿಳೆಯರಿಗೆ ಬದುಕುವ ಗ್ಯಾರಂಟಿ ಇಲ್ಲ. ಈ ಹಿಂದೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ಬಾಲಕಿಯ ಅತ್ಯಾಚಾರವಾಗಿತ್ತು. ಈಗ ಹುಬ್ಬಳ್ಳಿಯಲ್ಲಿ ಪೊಲೀಸರೇ ಮಹಿಳೆಯನ್ನು ವಿವಸ್ತ್ರ ಮಾಡಿ ಹಲ್ಲೆ ಮಾಡಿದ್ದಾರೆ. ಮಹಾಭಾರತದಲ್ಲಿ ಧೃತರಾಷ್ಟ್ರ ಕುರುಡಾಗಿದ್ದರೆ, ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಳು. ಹಾಗೆಯೇ ಇಲ್ಲಿ ಸಿಎಂ ಸಿದ್ದರಾಮಯ್ಯ ಕುರುಡಾಗಿದ್ದರೆ, ಡಿಸಿಎಂ ಡಿ.ಕೆ.ಶಿವಕುಮಾರ್‌ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾರೆ. ಪೊಲೀಸರು ದುಶ್ಶಾಸನನಂತೆ ವಿವಸ್ತ್ರ ಮಾಡಿದ್ದಾರೆ. ಇದು ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರು.

ಅವರೇ ಬಟ್ಟೆ ಬಿಚ್ಚಿಕೊಂಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಧೀಶರಂತೆ ತೀರ್ಪು ನೀಡಿದ್ದಾರೆ. ಬಳ್ಳಾರಿಯಲ್ಲಿ ಗುಂಡೇಟಿನ ಪ್ರಕರಣ ನಡೆದಾಗ, ತನಿಖೆ ಪ್ರಗತಿಯಲ್ಲಿದೆ ಎಂದು ಸಿಎಂ ಹೇಳಿದ್ದರು. ಬಳಿಕ ಕಾಂಗ್ರೆಸ್‌ ಕಾರ್ಯಕರ್ತನ ಗನ್‌ನಿಂದ ಹಾರಿದೆ ಎಂದರು. ಈ ಪ್ರಕರಣದಲ್ಲಿ ಅವರೇ ಬಟ್ಟೆ ಬಿಚ್ಚಿದ್ದಾರೆ ಎಂದು ಹೇಳಿಕೆ ನೀಡುವ ಮುನ್ನ ತನಿಖಾ ವರದಿ ಬರಬೇಕಿತ್ತು. ವರದಿ ಬರುವ ಮುನ್ನವೇ ಮುಖ್ಯಮಂತ್ರಿ ತೀರ್ಪು ನೀಡುತ್ತಾರೆ ಎಂದರೆ ಪೊಲೀಸರು ಅದೇ ರೀತಿ ವರದಿ ಬರೆಯಬೇಕಾಗುತ್ತದೆ. ಈ ಪ್ರಕರಣ ಮುಚ್ಚಿ ಹಾಕಲು ಷಡ್ಯಂತ್ರ ನಡೆದಿದೆ ಎಂದು ಅಶೋಕ್‌ ಆಪಾದಿಸಿದರು.

ಮಹಿಳೆಯರ ಮೇಲೆ ದೌರ್ಜನ್ಯ:

ವ್ಯಾನ್‌ನಲ್ಲಿ 20 ಪೊಲೀಸರಿರುವಾಗ ಮಹಿಳೆ ಬಟ್ಟೆ ಬಿಚ್ಚಿಕೊಳ್ಳಲು ಸಾಧ್ಯವಿಲ್ಲ. ಸ್ಥಳೀಯ ಕಾಂಗ್ರೆಸ್‌ ಕಾರ್ಪೊರೇಟರ್‌ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅಡ್ಡಿ ಮಾಡಿದ್ದಾರೆ. ಕಾರ್ಪೊರೇಟರ್‌ ಮಾತು ಕೇಳಿಕೊಂಡು ಪೊಲೀಸರು ಕ್ರಮ ವಹಿಸಿದ್ದಾರೆ. ಬಾಂಗ್ಲಾದೇಶಿಯರನ್ನು ಬಂಧಿಸಲು, 7 ಕೋಟಿ ರು. ಬ್ಯಾಂಕ್‌ ಹಣ ಕದ್ದ ದರೋಡೆಕೋರರನ್ನು ಬಂಧಿಸಲು ಇಷ್ಟು ಉತ್ಸಾಹ ತೋರಿಲ್ಲ. ಕಾಂಗ್ರೆಸ್‌ ಅವಧಿಯಲ್ಲಿ 43,053 ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಸಂಪೂರ್ಣ ಅವಧಿಯಲ್ಲಿ ಇಷ್ಟು ಪ್ರಕರಣಗಳು ನಡೆದಿರಲಿಲ್ಲ. ಆದರೂ ಸಿದ್ದರಾಮಯ್ಯ ಹೋಲಿಕೆ ಮಾಡಿಕೊಳ್ಳುತ್ತಾರೆ ಎಂದು ಹರಿಹಾಯ್ದರು.

ಇನ್‌ಸ್ಪೆಕ್ಟರ್‌ ಎತ್ತಂಗಡಿ

ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಕೇಶ್ವಾಪುರ ಠಾಣೆಯ ಇನ್‌ಸ್ಪೆಕ್ಟರ್‌ ಅವರನ್ನು ವರ್ಗಾಯಿಸಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪಿಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್.ಕೆ.ಹಟ್ಟಿ ಅವರನ್ನು ಕಮಿಷನರ್‌ ಕಚೇರಿಯ ಕಂಟ್ರೋಲ್‌ ರೂಮಿಗೆ ವರ್ಗಾವಣೆಗೊಳಿಸಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬೇರೆ ಮಂತ್ರಿ ಖಾತೆ ಒತ್ತುವರೀಲೂ ಡಿಕೆಶಿ ನಿಸ್ಸೀಮ : ಎಚ್‌ಡಿಕೆ ಟಾಂಗ್‌
ನಂಬಿಕೆಗಿಂತ ದೊಡ್ಡ ಗುಣ ಬೇರೆ ಇಲ್ಲ, ತಾಳ್ಮೆ ಇದ್ದರೆ ಜಗತ್ತೇ ಗೆಲ್ಲಬಹುದು : ಡಿಕೆ