ಕುತೂಹಲ ಘಟ್ಟ ತಲುಪಿದ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೇಮಕ ಪ್ರಕ್ರಿಯೆ

Published : Jul 03, 2025, 11:00 AM IST
bjp flag

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಪ್ರಕ್ರಿಯೆ ತಾರ್ಕಿಕ ಹಂತ ತಲುಪಿದ್ದು, ಪಕ್ಷದ ಹೈಕಮಾಂಡ್‌ ಯಾವ ಹೆಜ್ಜೆ ಇಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

 ಬೆಂಗಳೂರು :  ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಪ್ರಕ್ರಿಯೆ ತಾರ್ಕಿಕ ಹಂತ ತಲುಪಿದ್ದು, ಪಕ್ಷದ ಹೈಕಮಾಂಡ್‌ ಯಾವ ಹೆಜ್ಜೆ ಇಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಬೇಕಾಗಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷರ ನೇಮಕವೂ ಆಗಲಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ.

ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದ್ದರೂ ರಾಜ್ಯ ಘಟಕದ ಹಲವು ಹಿರಿಯ ನಾಯಕರ ವಿರೋಧದ ಹಿನ್ನೆಲೆಯಲ್ಲಿ ಬೇರೊಬ್ಬರನ್ನು ನೇಮಿಸುವರೇ ಎಂಬ ಚರ್ಚೆಯೂ ಬಲವಾಗಿ ನಡೆದಿದೆ.

ಬಿಎಸ್‌ವೈ ಕಡೆಗಣಿಸಿದರೆ ಧಕ್ಕೆ?:

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮತ್ತೆ ಸಂಘಟನೆಯಲ್ಲಿ ಸಕ್ರಿಯರಾಗಿರುವ ಬೆನ್ನಲ್ಲೇ ಅವರ ಪುತ್ರ ವಿಜಯೇಂದ್ರ ಅವರನ್ನೇ ಮುಂದುವರೆಸುವ ಸಂಭ‍ವ ಇದೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಕಡೆಗಣಿಸಿ ಭಿನ್ನ ನಿರ್ಧಾರ ಕೈಗೊಂಡಲ್ಲಿ ಪಕ್ಷದ ಸಂಘಟನೆಗೆ ಧಕ್ಕೆ ಉಂಟಾಗಬಹುದು ಎಂಬ ಆತಂಕವೂ ವರಿಷ್ಠರಿಗಿದೆ.

ಇದೇ ಕಾರಣಕ್ಕಾಗಿ ವಿಜಯೇಂದ್ರ ವಿರುದ್ಧ ಹರಿಹಾಯುತ್ತಿದ್ದ ಹಾಗೂ ಅವರ ಕಾರ್ಯವೈಖರಿಯಿಂದ ಬೇಸತ್ತಿದ್ದ ಪಕ್ಷದ ನಾಯಕರನ್ನು ಮಾತುಕತೆ ಮೂಲಕ ಸಮಾಧಾನಪಡಿಸುವ ಕೆಲಸ ಆರಂಭವಾಗಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ರಾಜ್ಯದ ಇತರ ಕೆಲ ನಾಯಕರು ಅತೃಪ್ತ ಮುಖಂಡರನ್ನು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದೇ ವೇಳೆ ಅತೃಪ್ತ ಮುಖಂಡರ ಬಣದ ನೇತೃತ್ವ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಬಳಿಕವೂ ಆ ಬಣದ ಮುಖಂಡರ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ವಿಜಯೇಂದ್ರ ಅವರನ್ನು ಮುಂದುವರೆಸುವುದನ್ನು ನಾವು ಒಪ್ಪುವುದಿಲ್ಲ ಎಂದೇ ಪ್ರತಿಪಾದಿಸುತ್ತಿದ್ದಾರೆ. ಅತ್ತ ವರಿಷ್ಠರು ಯಾವುದೇ ನಿರ್ದಿಷ್ಟ ನಿಲುವನ್ನೂ ತೋರದೆ ಇರುವುದು ಕುತೂಹಲ ಮತ್ತಷ್ಟು ಹೆಚ್ಚುವಂತೆ ಆಗಿದೆ.

ಎಷ್ಟು ವರ್ಷ ಅಧಿಕಾರಾವಧಿ?:

ವಿಜಯೇಂದ್ರ ಅವರನ್ನು ಮುಂದುವರೆಸುವುದೇ ಆದಲ್ಲಿ ಅವರನ್ನು ಮತ್ತೆ ಮೂರು ವರ್ಷಗಳಿಗೆ ಹೊಸದಾಗಿ ನೇಮಕ ಮಾಡಲಾಗುತ್ತದೆಯೋ ಅಥವಾ ಈಗಾಗಲೇ ಒಂದೂವರೆ ವರ್ಷ ಪೂರೈಸಿರುವುದನ್ನು ಪರಿಗಣಿಸಿ ಇನ್ನುಳಿದ ಒಂದೂವರೆ ವರ್ಷದ ಅವಧಿಗೆ ಮುಂದುವರೆಸಲಾಗುತ್ತದೆಯೋ ಎಂಬುದು ಬಿಜೆಪಿ ಪಾಳೆಯದಲ್ಲಿ ಹೆಚ್ಚು ಚರ್ಚೆ ಹುಟ್ಟು ಹಾಕಿದೆ.

PREV
Read more Articles on

Recommended Stories

ಧರ್ಮಸ್ಥಳ ಪರವಾಗಿ ರಾಜ್ಯಾದ್ಯಂತ ಹಿಂದೂಗಳು ಪ್ರತಿಭಟನೆ
ಆರ್‌ಸಿಬಿ ಕಾಲ್ತುಳಿತ ಆಕಸ್ಮಿಕ, ಆದರೂ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌