;Resize=(412,232))
ಬೆಂಗಳೂರು : ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುವ ಕುರಿತು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಒಮ್ಮತದ ಅಭಿಪ್ರಾಯವನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಇತರ ರಾಜ್ಯ ನಾಯಕರ ಮುಂದೆ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ.
ಮಂಗಳವಾರ ರಾಜ್ಯ ನಾಯಕರೊಂದಿಗೆ ಜಿಲ್ಲಾವಾರು ಮುಖಂಡರ ಸಭೆ ಬಳಿಕ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮುಖಂಡ ಇಂಡುವಾಳು ಸಚ್ಚಿದಾನಂದ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ನಾರಾಯಣಗೌಡ ಮಾತನಾಡಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯಿಂದ ಸ್ವತಂತ್ರವಾಗಿ ಚುನಾವಣೆ ಎದುರಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇಲ್ಲ. ಸ್ವತಂತ್ರವಾಗಿ ಚುನಾವಣೆ ಎದುರಿಸಲಿದ್ದೇವೆ ಎಂದಿದ್ದಾರೆ. ಹೀಗಾಗಿ ನಾವೂ ಸಹ ಮಂಡ್ಯ ಜಿಲ್ಲೆಯಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರಿಸಲು ಒಕ್ಕೊರಲ ತೀರ್ಮಾನ ಮಾಡಿದ್ದು, ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೂ ತಂದಿದ್ದೇವೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಮಗೆ ಸಿಗಬೇಕಾದ ಹಕ್ಕನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟೆವು. ಸುಮಲತಾ ಅಂಬರೀಶ್ ಅವರು ಸಂಸದರಾಗಿದ್ದರು. ಆದರೂ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟೆವು. ಗೆದ್ದ ಬಳಿಕ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿ ಸ್ಥಾನ ಪಡೆದರು. ಈಗ ದೇವೇಗೌಡರು ನಮ್ಮ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸುಮಲತಾ ಅಂಬರೀಶ್ ಅವರು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಮೈತ್ರಿಯಿಂದ ಸಂಸದರಾಗಿದ್ದರು. ನಾನು ಶಾಸಕನಾಗಿದ್ದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟಾಗ ನಾವೆಲ್ಲಾ ಹಾಲಿ ಸಂಸದೆ ಸುಮಲತಾ ಅವರ ಮನವೊಲಿಸಿದ್ದೆವು. ಜಿಲ್ಲೆಯಲ್ಲಿ ಕುಮಾರಸ್ವಾಮಿ ಅವರ ಗೆಲುವಿಗೆ ಎಲ್ಲರೂ ಒಟ್ಟಾಗಿ ಆತ್ಮಪೂರಕವಾಗಿ ಕೆಲಸ ಮಾಡಿದ್ದೆವು. ಆದರೆ, ಈಗ ಜೆಡಿಎಸ್‌ನವರು ಅದನ್ನು ಗುರುತಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಮಂಡ್ಯ ಜಿಲ್ಲೆಯಲ್ಲಿ ನಮ್ಮ ಬಿಜೆಪಿ ಪಕ್ಷಕ್ಕೂ ಶಕ್ತಿಯಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುತ್ತೇವೆ. ಶಕ್ತಿ ಮೀರಿ ಕೆಲಸ ಮಾಡಿ ಬಿಜೆಪಿ ಭದ್ರಕೋಟೆ ಮಾಡುತ್ತೇವೆ. ಈ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೂ ತರಲಾಗಿದೆ. ಆದರೆ, ಈ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ ಎಂದು ನಾರಾಯಣಗೌಡ ಹೇಳಿದರು.
ಇಂಡುವಾಳು ಸಚ್ಚಿದಾನಂದ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ತೀರ್ಮಾನ ಮಾಡಿದ್ದೇವೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾರ್ಯಕರ್ತರ ಚುನಾವಣೆ. ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ಕೊಡದಿದ್ದರೆ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ಪಕ್ಷದ ದೃಷ್ಟಿಯಿಂದ ಸ್ವತಂತ್ರವಾಗಿ ಚುನಾವಣೆ ಎದುರಿಸುವ ಕಾರ್ಯಕರ್ತರ ತೀರ್ಮಾನವನ್ನು ಪಕ್ಷದ ರಾಜ್ಯದ ನಾಯಕರ ಮುಂದಿಟ್ಟಿದ್ದೇವೆ. ಮುಂದಿನ ವಾರದಿಂದಲೇ ಸುಮಲತಾ ಅಂಬರೀಶ್ ಮತ್ತು ಕೆ.ಸಿ.ನಾರಾಯಣಗೌಡ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ಬಗ್ಗೆಯೂ ತಿಳಿಸಿದ್ದೇವೆ. ಬಿಜೆಪಿ ಪಕ್ಷದ ಅಡಿಯಲ್ಲಿ ನಾವು ಪಕ್ಷ ಸಂಘಟಿಸಲಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬೇರು ಮಟ್ಟದಿಂದ ಬಿಜೆಪಿ ಪಕ್ಷವನ್ನು ಬಲಪಡಿಸಬೇಕು. ಜಿಲ್ಲೆಯಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ. ಕಳೆದ ಚುನಾವಣೆಗಳಲ್ಲಿ ವ್ಯಕ್ತವಾದ ಬೆಂಬಲ, ಗಳಿಸಿದ ಮತಗಳನ್ನು ನೋಡಿದಾಗ ಪ್ರಗತಿ ಸಾಧಿಸಿದ್ದೇವೆ. ಸಂಘಟನೆ ಮತ್ತಷ್ಟು ಬಲಪಡಿಸಿದರೆ ನಮಗೆ ಅನುಕೂಲವಾಗುತ್ತದೆ.
-ಸುಮಲತಾ ಅಂಬರೀಶ್, ಮಾಜಿ ಸಂಸದೆ.