ಬೆಲೆ ಏರಿಕೆ, 18 ಶಾಸಕ ಸಸ್ಪೆಂಡ್ ಖಂಡಿಸಿ ನಾಳೆಯಿಂದ ಬಿಜೆಪಿ ಬೀದಿಗೆ - ಅಹೋರಾತ್ರಿ ಧರಣಿ, ಜನಾಕ್ರೋಶ ಯಾತ್ರೆ

Published : Apr 01, 2025, 06:44 AM IST
bjp flag

ಸಾರಾಂಶ

ವಿವಿಧ ಅಗತ್ಯ ಸೇವೆಗಳು, ಪದಾರ್ಥಗಳ ಬೆಲೆ ಏರಿಕೆ ಹಾಗೂ ತನ್ನ 18 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಿದ ಸ್ಪೀಕರ್‌ ಕ್ರಮ ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಬುಧವಾರದಿಂದ ರಾಜ್ಯ ಸರ್ಕಾರದ ವಿರುದ್ಧ ಸರಣಿ ಹೋರಾಟ ಆರಂಭಿಸಲಿದೆ.

 ಬೆಂಗಳೂರು :  ವಿವಿಧ ಅಗತ್ಯ ಸೇವೆಗಳು, ಪದಾರ್ಥಗಳ ಬೆಲೆ ಏರಿಕೆ ಹಾಗೂ ತನ್ನ 18 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಿದ ಸ್ಪೀಕರ್‌ ಕ್ರಮ ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಬುಧವಾರದಿಂದ ರಾಜ್ಯ ಸರ್ಕಾರದ ವಿರುದ್ಧ ಸರಣಿ ಹೋರಾಟ ಆರಂಭಿಸಲಿದೆ.

ಇದರ ಅಂಗವಾಗಿ ಏ.2ರಂದು ಬುಧವಾರ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೆಳಗ್ಗೆ 11ಗಂಟೆಯಿಂದ ಅಹೋರಾತ್ರಿ ಧರಣಿ ಆರಂಭಿಸಲಿದೆ. ಏ.7ರಿಂದ ರಾಜ್ಯಾದ್ಯಂತ ಜನಜಾಗೃತಿ ಸಲುವಾಗಿ ‘ಜನಾಕ್ರೋಶ ಯಾತ್ರೆ’ಯನ್ನು ಹಮ್ಮಿಕೊಳ್ಳಲೂ ಬಿಜೆಪಿ ತೀರ್ಮಾನಿಸಿದೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬೆಲೆ ಏರಿಕೆ ಮೂಲಕ ಬಡವರಿಗೆ ಬರೆ ಎಳೆಯುವ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ, ಪ್ರತಿಭಟನೆ ನಡೆಸಲಿದೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಕೆಲಸವನ್ನು ಹೋರಾಟದ ಮೂಲಕ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ನಿರಂತರವಾಗಿದೆ. ಪೆಟ್ರೋಲ್, ಡೀಸೆಲ್, ಸ್ಟಾಂಪ್ ಶುಲ್ಕ, ಹಾಲಿನ ದರ, ಮೆಟ್ರೊ ದರ ಏರಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನಸಾಮಾನ್ಯರ ಮೇಲೆ ಬರೆ ಹಾಕುತ್ತಿದೆ ಎಂದು ಆಕ್ಷೇಪಿಸಿದರು.

ದೇಶದಲ್ಲೇ ಅತ್ಯಂತ ದುಬಾರಿ ಜೀವನವನ್ನು ಈ ನಾಡಿನ ಜನ ನಡೆಸಬೇಕಾದ ದುಃಸ್ಥಿತಿಗೆ ಕಾಂಗ್ರೆಸ್ ಕಾರಣವಾಗಿದೆ. ಸೇವಿಸುವ ಗಾಳಿಯೊಂದನ್ನು ಬಿಟ್ಟರೆ ಉಳಿದೆಲ್ಲವುಗಳ ದರ ಏರಿಸಲಾಗಿದೆ. ಸಾಮಾನ್ಯ ಜನರು, ರೈತರ ಸಂಕಷ್ಟ ಅರ್ಥ ಮಾಡಿಕೊಳ್ಳದ ಸರ್ಕಾರ ಇದು. ಮತದಾರರಿಗೆ ಶಾಪಗ್ರಸ್ತ ಸರ್ಕಾರ ಇದಾಗಿದೆ ಎಂದು ಟೀಕಿಸಿದರು.

ಏಪ್ರಿಲ್ 2ರಂದು (ಬುಧವಾರ) ಬೆಳಗ್ಗೆ 11 ಗಂಟೆಯಿಂದ ಅಹೋರಾತ್ರಿ ಧರಣಿ ಪ್ರಾರಂಭಿಸಲಿದ್ದೇವೆ. ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಪಕ್ಷದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಕಾರ್ಯಕರ್ತರು ಈ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ಈ ಧರಣಿ ಮುಂದುವರಿಸುವ ಕುರಿತು ಅದೇ ದಿನ ನಿರ್ಧರಿಸುತ್ತೇವೆ ಎಂದು ಹೇಳಿದರು.

ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಕ್ರಮವನ್ನು ಆಕ್ಷೇಪಿಸಿ ಬುಧವಾರ ವಿಧಾನಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

ಏ.5ರಂದು ರಾಜ್ಯಾದ್ಯಂತ ಪ್ರತಿಭಟನೆ, 7ರಿಂದ ಜನಾಕ್ರೋಶ ಯಾತ್ರೆ:

ಬೆಲೆ ಏರಿಕೆ ವಿರುದ್ಧ ಏ.5ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ತಾಲೂಕುಗಳಲ್ಲಿ, ಮಂಡಲದಲ್ಲಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಇದೇ ವೇಳೆ ವಿಜಯೇಂದ್ರ ತಿಳಿಸಿದರು.

ಏ.7ರಿಂದ ರಾಜ್ಯದಾದ್ಯಂತ ಜನಜಾಗೃತಿ ಸಲುವಾಗಿ ‘ಜನಾಕ್ರೋಶ ಯಾತ್ರೆ’ ಆರಂಭಿಸಲಾಗುವುದು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಇದು ಸಂಚರಿಸಲಿದೆ. ಪ್ರತಿ ಜಿಲ್ಲೆಯಲ್ಲಿ ನಗರದಲ್ಲಿ 2ರಿಂದ 3 ಕಿ.ಮೀ. ಪಾದಯಾತ್ರೆ, ಬಳಿಕ ಸಭೆ ನಡೆಯಲಿದೆ. ಪಕ್ಷದ ಎಲ್ಲ ಪ್ರಮುಖ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಅಂದು 7ರಂದು ಮಧ್ಯಾಹ್ನ 3ಗಂಟೆಗೆ ಮೈಸೂರಿನಿಂದ ಜನಜಾಗೃತಿ ಹೋರಾಟ ಆರಂಭವಾಗಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೋರಾಟಕ್ಕೆ ಚಾಲನೆ ಕೊಡಲಿದ್ದಾರೆ. ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಅವರ ಜೊತೆ ಈ ಬಗ್ಗೆ ಚರ್ಚಿಸಿದ್ದೇನೆ. 7ರಂದು ಮೈಸೂರು, ಚಾಮರಾಜನಗರ ಜಿಲ್ಲೆ, 8ರಂದು ಬೆಳಗ್ಗೆ ಮಂಡ್ಯ, ಮಧ್ಯಾಹ್ನ ಹಾಸನದಲ್ಲಿ ಹೋರಾಟ ಇದೆ. 9ರಂದು ಕೊಡಗು-ಮಂಗಳೂರಿನಲ್ಲಿ ಹೋರಾಟ, 10ರಂದು ಉಡುಪಿ, ಚಿಕ್ಕಮಗಳೂರಿನಲ್ಲಿ ಮೊದಲ ಹಂತದ ಹೋರಾಟ ಇದೆ. ಎರಡನೇ ಹಂತದ ಹೋರಾಟ 13ರಿಂದ ಶಿವಮೊಗ್ಗ, ಉತ್ತರ ಕನ್ನಡದಲ್ಲಿ ನಿಗದಿಯಾಗಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಹೋರಾಟ: ಯಾವಾಗ ಏನೇನು?

- ಏ.2ಕ್ಕೆ ಬೆಂಗಳೂರು ಫ್ರೀಡಂ ಪಾರ್ಕಲ್ಲಿ ಅಹೋರಾತ್ರಿ ಧರಣಿ

- ಏ.5ಕ್ಕೆ ಜಿಲ್ಲಾ ಕೇಂದ್ರ, ತಾಲೂಕು, ಮಂಡಲದಲ್ಲಿ ಪ್ರತಿಭಟನೆ

- ಏ.3ಕ್ಕೆ 18 ಬಿಜೆಪಿ ಶಾಸಕರ ಅಮಾನತು ವಿರುದ್ಧ ಸೌಧದಲ್ಲಿ ಧರಣಿ

- ಏ.7ರಿಂದ 13ರವರೆಗೆ ವಿವಿಧ ತಂಡಗಳ ‘ಜನಾಕ್ರೋಶ ಯಾತ್ರೆ’

- ಯಾತ್ರೆ ವೇಳೆ ಪ್ರತಿ ಜಿಲ್ಲೆಗಳಲ್ಲಿ ಬಿಜೆಪಿ ನಾಯಕರಿಂದ ಸಂಚಾರ

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬೆಲೆ ಏರಿಕೆ ನಿರಂತರವಾಗಿದೆ. ಪೆಟ್ರೋಲ್, ಡೀಸೆಲ್, ಸ್ಟಾಂಪ್ ಶುಲ್ಕ, ಹಾಲಿನ ದರ, ಮೆಟ್ರೊ ದರ ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ಬರೆ ಹಾಕುತ್ತಿದೆ. ಸೇವಿಸುವ ಗಾಳಿಯೊಂದನ್ನು ಬಿಟ್ಟರೆ ಉಳಿದೆಲ್ಲವುಗಳ ದರ ಏರಿಸಲಾಗಿದೆ.

- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ : ಸಚಿವೆ ಶೋಭಾ ಕರಂದ್ಲಾಜೆ
ಬಿಜೆಪಿ ವಿರುದ್ಧ ‘ಚಿಲುಮೆ’ ಅಸ್ತ್ರಕ್ಕೆ ಸರ್ಕಾರ ಸಜ್ಜು