ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ

Published : Dec 31, 2025, 06:21 AM IST
Kogilu Layout R Ashok

ಸಾರಾಂಶ

 ಕೋಗಿಲು ಬಡಾವಣೆಯ ಒತ್ತುವರಿ ಮಾಡಿದ ಅಕ್ರಮ ವಲಸಿಗರಿಗೆ ಮನೆ ನೀಡಲು ಹೊರಟಿರುವ ರಾಜ್ಯ ಸರ್ಕಾರ ನಮ್ಮದೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ, ನಗರದ ಡಿ.ಜೆ.ಹಳ್ಳಿಯಲ್ಲಿ ಮನೆ ಕಳೆದುಕೊಂಡ ದಲಿತರಿಗೆ ತಕ್ಷಣ ಯಾಕೆ ಮನೆ ನೀಡಲಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತೀವ್ರ ಆಕ್ರೋಶ 

 ಬೆಂಗಳೂರು :  ಯಲಹಂಕ ಬಳಿಯ ಕೋಗಿಲು ಬಡಾವಣೆಯ ಒತ್ತುವರಿ ಮಾಡಿದ ಅಕ್ರಮ ವಲಸಿಗರಿಗೆ ಮನೆ ನೀಡಲು ಹೊರಟಿರುವ ರಾಜ್ಯ ಸರ್ಕಾರ ನಮ್ಮದೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ, ನಗರದ ಡಿ.ಜೆ.ಹಳ್ಳಿಯಲ್ಲಿ ಮನೆ ಕಳೆದುಕೊಂಡ ದಲಿತರಿಗೆ ತಕ್ಷಣ ಯಾಕೆ ಮನೆ ನೀಡಲಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕೋಗಿಲು ಬಡಾವಣೆಯ ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆ ನೀಡಲು ಹೊರಟಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದೂ ಬಿಜೆಪಿ ನಾಯಕರು ಹೇಳಿದ್ದಾರೆ.

ಮಂಗಳವಾರ ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅಶೋಕ್ ಅವರು ಮಾತನಾಡಿ, ಭೂ ಒತ್ತುವರಿ ಮಾಡುವವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಕಾಂಗ್ರೆಸ್ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಈ ಮೂಲಕ ಭೂ ಮಾಫಿಯಾಗೆ ಪ್ರೋತ್ಸಾಹ ನೀಡಲಾಗಿದೆ ಎಂದು ಹರಿಹಾಯ್ದರು.

ಮಿನಿ ಪಾಕ್‌ ನಿರ್ಮಾಣ:

ಆಶ್ರಯ ಯೋಜನೆಯಡಿ ಮನೆ ನಿರ್ಮಿಸಲು ಪ್ರಕ್ರಿಯೆಗಳನ್ನು ಪಾಲಿಸಿಲ್ಲ. ಬೆಂಗಳೂರಿನಲ್ಲಿ 40 ಕಡೆ ಒತ್ತುವರಿ ತೆರವು ಮಾಡಿದ್ದು, ಎಲ್ಲರಿಗೂ ಮಾನವೀಯತೆ ಮೇಲೆ ಮನೆ ನಿರ್ಮಿಸಬೇಕಾಗುತ್ತದೆ. ಅಂದರೆ ಒತ್ತುವರಿ ಮಾಡುವ ಕಳ್ಳರಿಗೆ ಉತ್ತೇಜನ ನೀಡಲಾಗುತ್ತಿದೆ. ಯಾವ ಯೋಜನೆ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆ ನೀಡುತ್ತಾರೆ? ಇದರಿಂದ ಮಿನಿ ಪಾಕಿಸ್ತಾನ ನಿರ್ಮಾಣವಾಗಿ ಡ್ರಗ್‌ ಮಾಫಿಯಾ ಬೆಳೆಯಲಿದೆ. ಇವರೆಲ್ಲ ಯಾರು ಎಂದು ಮೊದಲು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದರು.

ನೆರೆ ಸಂತ್ರಸ್ತರಿಗೆ ನೆರವು ಇಲ್ಲ:

ರಾಜ್ಯದಲ್ಲಿ ಒಟ್ಟು 37.48 ಲಕ್ಷ ಜನರು ಮನೆ ಇಲ್ಲದೆ ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ. ನಮ್ಮದೇ ರಾಜ್ಯದ ನೆರೆ ಸಂತ್ರಸ್ತರಿದ್ದಾರೆ. ಮನೆ ಕಳೆದುಕೊಂಡದ ದಲಿತರಿದ್ದಾರೆ. ಆದರೆ, ಸ್ಥಳೀಯ ಬಡವರಿಗೆ ಅವಕಾಶ ನೀಡದೆ ಹೊರಗಿನಿಂದ ಬಂದು ಅಕ್ರಮವಾಗಿ ನೆಲೆಸಿರವವರಿಗೆ ಮನೆ ಕಟ್ಟಿಕೊಡುತ್ತೇನೆ ಎನ್ನುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ಇಷ್ಟು ವೇಗವಾಗಿ ಮನೆ ಯೋಜನೆ ಮಂಜೂರಾಗಿರುವುದನ್ನು ನಾನು ನೋಡಿಯೇ ಇಲ್ಲ. ಕೇರಳದಲ್ಲಿ ಆನೆಯಿಂದ ಸತ್ತರೆ, ಪ್ರವಾಹದಿಂದ ಸತ್ತರೆ ಪರಿಹಾರ ನೀಡುತ್ತಾರೆ. ಕರ್ನಾಟಕವನ್ನು ಕೇರಳ ಸರ್ಕಾರಕ್ಕೆ ಅಡಮಾನ ಇಡಲಾಗಿದೆಯೇ ಎಂದು ಪ್ರಶ್ನಿಸಿದರು.

ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಇವರು ಕನ್ನಡಿಗರೇ ಅಥವಾ ವಿದೇಶಿಯರೇ ಎಂಬುದನ್ನು ಪತ್ತೆ ಮಾಡಬೇಕು. ಅಲ್ಲಿಯವರೆಗೂ ಅವರಿಗೆ ಮನೆ ನೀಡಬಾರದು ಎಂದು ಆಗ್ರಹಿಸಿದರು.

ಅಕ್ರಮ ವಲಸಿಗರ ತನಿಖೆ ಆಗಬೇಕು:

ಶೋಭಾ ಕರಂದ್ಲಾಜೆ ಮಾತನಾಡಿ, ಕೇರಳದ ಚುನಾವಣೆಯ ಕಾವು ಕರ್ನಾಟಕದಲ್ಲಿ ಕೆಲಸ ಮಾಡುತ್ತಿದೆ. ಕರ್ನಾಟಕಕ್ಕೆ ಹೊರದೇಶಗಳಿಂದ ಅಕ್ರಮ ವಲಸೆ ಬರುತ್ತಿರುವವರ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು. ಡ್ರಗ್ ಮಾಫಿಯ ನಿರತ ಅಕ್ರಮ ವಲಸಿಗರ ವಿರುದ್ಧ ಎಲ್ಲ ಇಲಾಖೆಗಳು ಸೇರಿ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವೂ ರೋಹಿಂಗ್ಯಾಗಳನ್ನು ಪತ್ತೆ ಹಚ್ಚಿ ಹೊರಹಾಕಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ವಲಸಿಗರು ಯಾರು? ಅಲ್ಲಿದ್ದವರೆಲ್ಲ ಪಶ್ಚಿಮ ಬಂಗಾಳದಿಂದ ಬಂದವರು. ಅಲ್ಲಿಯೂ ಸಮರ್ಪಕ ವಿಳಾಸ ಇಲ್ಲದವರು. ಹೆಬ್ಬಾಳದ ಅಮೀನ್‌ಕೆರೆಯಲ್ಲಿ ವಾಸ ಮಾಡುವವರು, ಅಕ್ರಮ ಚಟುವಟಿಕೆ ಮಾಡುವವರು ಯಾರೆಂದು ಪೊಲೀಸ್ ಆಯುಕ್ತರಿಗೆ ಹಿಂದೆಯೇ ಪತ್ರ ಬರೆದಿದ್ದೆ. ಅದೇ ರೀತಿಯ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಕೋಗಿಲು ಬಡಾವಣೆಯಲ್ಲಿ ತೆರವು ಮಾಡಿದ್ದಾರೆ ಎಂದರು.

ಸರ್ಕಾರದಿಂದಲೇ ಕಾಯಂ:

ಸರ್ಕಾರವೇ ಅವರಿಗೆ ಮನೆ ಕೊಟ್ಟು, ಸರ್ಟಿಫಿಕೇಟ್ ಕೊಟ್ಟು ಅವರನ್ನು ಕಾಯಂ ಮಾಡುತ್ತಿದೆ. ಅವರ ಮತದಾರರ ಚೀಟಿ, ಆಧಾರ್ ಕಾರ್ಡನ್ನು ತಕ್ಷಣ ವಶಕ್ಕೆ ಪಡೆಯಬೇಕು. ಅವರು ಪಶ್ಚಿಮ ಬಂಗಾಳದವರೇ ಅಥವಾ ಬೇರೆ ಕಡೆಯಿಂದ ಬಂದವರೇ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

ರಾಜ್ಯಕ್ಕೆ 2 ಸಿಎಂ:

ಗೋವಿಂದ ಕಾರಜೋಳ ಮಾತನಾಡಿ, ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಅದು ಸಿದ್ದರಾಮಯ್ಯನವರು ಅಂತ ಭಾವಿಸಿದ್ದೆವು. ಕರ್ನಾಟಕ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂಬುದು ಈಗ ಗೊತ್ತಾಗಿದೆ. ಒಬ್ಬರು ದೆಹಲಿಯಲ್ಲಿ ಇದ್ದಾರೆ. ಅವರು ಕೆ.ಸಿ.ವೇಣುಗೋಪಾಲ್. ಅವರ ಆದೇಶವನ್ನು ಪಾಲಿಸಲು ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ ಎಂಬುದು ಈ ಮೂರು ದಿನದೊಳಗೆ ನಮಗೆ ಗೊತ್ತಾಯಿತು ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವರು ಕೆಲ ತಿಂಗಳ ಹಿಂದೆ ನಗರದ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಪ್ರಕರಣದ ಆರೋಪಿಗಳ ವಿರುದ್ಧ ಇದ್ದ ಪ್ರಕರಣ ವಾಪಸ್ ಪಡೆಯಲಿದ್ದಾರೆ ಎಂಬ ಸುದ್ದಿ ಕೇಳಿಬಂತು. ಕಾಂಗ್ರೆಸ್ ಶಾಸಕ, ಇಡೀ ರಾಜ್ಯದಲ್ಲಿ ಹೆಚ್ಚು ಮತಗಳನ್ನು ಪಡೆದು ಬಂದಂತ ಒಬ್ಬ ಗೌರವಾನ್ವಿತ ವ್ಯಕ್ತಿ ಅಖಂಡ ಶ್ರೀನಿವಾಸಮೂರ್ತಿ. ಅವರನ್ನು ರಾಜಕೀಯವಾಗಿ ಮುಗಿಸಿದರು. ಮನೆ ಸುಟ್ಟರು; ಮನೆನು ಕೆಡವಿ ಹಾಕಿದ್ದರು. ಆದರೆ, ಅದರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಒಬ್ಬರಿಗೂ ಕಳಕಳಿ ಹುಟ್ಟಲಿಲ್ಲ; ರಾಹುಲ್ ಗಾಂಧಿಗೂ ಹುಟ್ಟಲಿಲ್ಲ; ಸೋನಿಯಾ ಗಾಂಧಿಗೂ ಹುಟ್ಟಲಿಲ್ಲ; ಸಿದ್ದರಾಮಯ್ಯಗೂ ಇಲ್ಲ, ಡಿ.ಕೆ.ಶಿವಕುಮಾರ್ ಅವರಿಗೂ ಇಲ್ಲ. ಇದು ದಲಿತರ ಬಗ್ಗೆ ಕಾಂಗ್ರೆಸ್ಸಿನ ನೀತಿ ಎಂದು ದೂರಿದರು.

ರವಿಕುಮಾರ್ ಮಾತನಾಡಿ, ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕ ವೇಣುಗೋಪಾಲ್ ಕರ್ನಾಟಕದ ಸೂಪರ್ ಸಿಎಂ. ಅವರ ಅಣತಿಯಂತೆ ಈ ಸರ್ಕಾರ ನಡೆಯುತ್ತಿದೆ. ವೇಣುಗೋಪಾಲ್ ಅವರು ಕಣ್ಣುಬಿಟ್ಟರೆ ಸಾಕು; ಅದರ ಸೂಕ್ಷ್ಮತೆ ಅರ್ಥ ಮಾಡಿಕೊಂಡು ಈ ಸರ್ಕಾರ ಕೆಲಸ ಮಾಡುತ್ತಿದೆ ಎಂದು ವ್ಯಂಗ್ಯವಾಗಿ ಹೇಳಿದರು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ
ಪಾಕ್‌ ಜತೆ ರಾಜ್ಯ ಕಾಂಗ್ರೆಸ್‌ ಕೈಜೋಡಿಸಿದೆಯೇ? : ಬಿಜೆಪಿ