ಇಂದು ಬಿಜೆಪಿ ಬಳ್ಳಾರಿ ಕಹಳೆ - 10 ದಿನಗಳ ಪಾದಯಾತ್ರೆಗೆ ತೆರೆ

Published : Sep 10, 2026, 06:51 AM IST
BJP Padayatre

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕಳೆದ 10 ದಿನಗಳಿಂದ ನಡೆದ, 175 ಕಿ.ಮೀ. ದೂರ ಕ್ರಮಿಸಿದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಗುರುವಾರ ನಡೆಯಲಿದೆ. ಬುಧವಾರ ಸಂಜೆ ಯಾತ್ರೆ ಬಳ್ಳಾರಿ ನಗರವನ್ನು ಪ್ರವೇಶಿಸಿತು

ಬಳ್ಳಾರಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರ 100 ದಿನ ಪೂರೈಸುವ ದಿನದಂದೇ ಬಳ್ಳಾರಿಯಲ್ಲಿ ಸರ್ಕಾರದ ವಿರುದ್ಧ ಬೃಹತ್‌ ಶಕ್ತಿ ಪ್ರದರ್ಶನಕ್ಕೆ ಪ್ರತಿಪಕ್ಷ ಬಿಜೆಪಿ ಸಜ್ಜಾಗಿದೆ. ವಾಲ್ಮೀಕಿ ನಿಗಮದ ಹಣ ವಾಪಸ್‌ಗೆ ಆಗ್ರಹಿಸಿ, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕಳೆದ 10 ದಿನಗಳಿಂದ ನಡೆದ, 175 ಕಿ.ಮೀ. ದೂರ ಕ್ರಮಿಸಿದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಗುರುವಾರ ನಡೆಯಲಿದೆ. ಬುಧವಾರ ಸಂಜೆ ಯಾತ್ರೆ ಬಳ್ಳಾರಿ ನಗರವನ್ನು ಪ್ರವೇಶಿಸಿತು. ವಿಜಯೇಂದ್ರ ಅವರು ನೆಲಕ್ಕೆ ಹಣೆ ಸ್ಪರ್ಶಿಸಿ ಬಳ್ಳಾರಿಗೆ ಗೌರವ ಸಲ್ಲಿಸಿದರು.

ನಗರದ ಐತಿಹಾಸಿಕ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಗುರುವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಇದಕ್ಕಾಗಿ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. ಸಮಾರಂಭಕ್ಕೆ 50 ಸಾವಿರಕ್ಕೂ ಅಧಿಕ ಜನ ಸೇರುವ ಸಾಧ್ಯತೆಯಿದ್ದು, ಸುಮಾರು 20 ಸಾವಿರ ಆಸನಗಳನ್ನು ಅಳವಡಿಸಲಾಗುತ್ತಿದೆ. ಉಳಿದ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಮೈದಾನದ ಇತರ ಭಾಗಗಳಲ್ಲಿ ನಿಂತು ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಪಾದಯಾತ್ರೆಯ ಸಮಾರೋಪವನ್ನು ಅದ್ಧೂರಿ

ಪಾದಯಾತ್ರೆಯ ಸಮಾರೋಪವನ್ನು ಅದ್ಧೂರಿಯಾಗಿ ನಡೆಸಲು ಪಕ್ಷದ ಮುಖಂಡರು ಸಿದ್ಧತೆ ಕೈಗೊಂಡಿದ್ದಾರೆ. ಸಮಾರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಇಡೀ ನಗರ ಕೇಸರೀಮಯವಾಗಿದೆ. ಎಲ್ಲೆಡೆ ವಿಜಯೇಂದ್ರ ಹಾಗೂ ಬಿಜೆಪಿ ನಾಯಕರಿಗೆ ಶುಭ ಕೋರುವ ಪ್ಲೆಕ್ಸ್‌ಗಳು, ಬ್ಯಾನರ್‌ಗಳು ರಾರಾಜಿಸುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಸಮಾರೋಪದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಕೇಂದ್ರದ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ಅಗರ್‌ವಾಲ್ ಸೇರಿದಂತೆ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಹಲವು ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

ಬಳ್ಳಾರಿಯ ನೆಲದಲ್ಲಿ ನಡೆಯಲಿರುವ ಈ ಬೃಹತ್ ಸಮಾರೋಪ ಸಮಾರಂಭ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಗಮನ ಸೆಳೆಯುವ ನಿರೀಕ್ಷೆಯಿದೆ. ಪಾದಯಾತ್ರೆಯುದ್ದಕ್ಕೂ ಬಿಜೆಪಿ ಪ್ರಸ್ತಾಪಿಸಿದ ವಿಚಾರಗಳಿಗೆ ಸಮಾರೋಪ ಸಮಾರಂಭದಲ್ಲಿ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಯಾವ ರೀತಿಯ ರಾಜಕೀಯ ದಿಕ್ಕು ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಗಣಿನಗರಿ ಬಳ್ಳಾರಿಯ ಐತಿಹಾಸಿಕ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶ, ಪಕ್ಷದ ಸಂಘಟನಾ ಶಕ್ತಿ ಹಾಗೂ ರಾಜಕೀಯ ಸಂದೇಶಕ್ಕೆ ವೇದಿಕೆಯಾಗಲಿದೆ.

ಬಳ್ಳಾರಿ ನಗರದಲ್ಲಿ ಅದ್ಧೂರಿ ಸ್ವಾಗತ

ಸೆ.1ರಂದು ರಾಯಚೂರಿನ ಲಿಂಗಸುಗೂರಿನಿಂದ ಆರಂಭವಾದ ಪಾದಯಾತ್ರೆ 175 ಕಿಮೀ. ದೂರ ಕ್ರಮಿಸಿ ಬುಧವಾರ ಸಂಜೆ ಬಳ್ಳಾರಿ ನಗರ ಪ್ರವೇಶಿಸಿತು. ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 9 ವಿಧಾನಸಭಾ ಕ್ಷೇತ್ರಗಳ ಮೂಲಕ 10 ದಿನಗಳ ಯಾತ್ರೆ ಸಾಗಿ ಬಂದಿದೆ. ಲಿಂಗಸುಗೂರು, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ, ಸಿರಗುಪ್ಪ, ಸಂಡೂರು, ಬಳ್ಳಾರಿ ಗ್ರಾಮಾಂತರ ಮೂಲಕ ಬುಧವಾರ ಸಂಜೆ ಬಳ್ಳಾರಿ ನಗರಕ್ಕೆ ಯಾತ್ರೆ ಪ್ರವೇಶಿಸುತ್ತಿದ್ದಂತೆ ವಿಜಯೇಂದ್ರ ಅವರು ಬಳ್ಳಾರಿ ನೆಲಕ್ಕೆ ಶಿರಬಾಗಿ ನಮಿಸಿದರು. ಈ ವೇಳೆ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಡಿಕೆ ಸರ್ಕಾರಕ್ಕಿಂದು 100 ದಿನ - ಕೇಂದ್ರದ ಜತೆ ಸಂಘರ್ಷ ಬದಲು ಸಹಕಾರ
ಸತೀಶ್‌ ಜಾರಕಿಹೊಳಿ, ಮಗಳು, ಪುತ್ರ, ಭಾವನಿಗೆ ಇ.ಡಿ. ಶಾಕ್‌