ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದಡಿ ಜಾರಿ ನಿರ್ದೇಶನಾಲಯವು (ಇ.ಡಿ.) ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬ ಸದಸ್ಯರು, ಆಪ್ತರ ಮನೆಗಳು, ಕಚೇರಿಗಳು ಸೇರಿ ಬೆಂಗಳೂರು, ಬೆಳಗಾವಿ, ಗೋಕಾಕ್, ನೆರೆಯ ಗೋವಾ ಸೇರಿ ಒಟ್ಟು 18 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ
ಬೆಂಗಳೂರು : ವಿದೇಶದಲ್ಲಿ ಅಕ್ರಮ ಹೂಡಿಕೆ ಸಂಬಂಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಡಿ ಜಾರಿ ನಿರ್ದೇಶನಾಲಯವು (ಇ.ಡಿ.) ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬ ಸದಸ್ಯರು, ಆಪ್ತರ ಮನೆಗಳು, ಕಚೇರಿಗಳು ಸೇರಿ ಬೆಂಗಳೂರು, ಬೆಳಗಾವಿ, ಗೋಕಾಕ್, ನೆರೆಯ ಗೋವಾ ಸೇರಿ ಒಟ್ಟು 18 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ.
ಬುಧವಾರ ಬೆಳ್ಳಂಬೆಳಗ್ಗೆ ಸುಮಾರು 6 ಗಂಟೆಗೆ ಇ.ಡಿ. ಅಧಿಕಾರಿಗಳ ತಂಡಗಳು ಶಸ್ತ್ರಸಜ್ಜಿತ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಭದ್ರತೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸ, ಕ್ರೆಸೆಂಟ್ ರಸ್ತೆಯ ಸರ್ಕಾರಿ ನಿವಾಸ, ಸಚಿವರ ಪುತ್ರಿ ಹಾಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ, ಸಹೋದರಿಯ ಪತಿ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಮಂಜುನಾಥ್ ಅವರ ಬೆಂಗಳೂರಿನ ನಿವಾಸ ಸೇರಿ ಬೆಳಗಾವಿ, ಗೋಕಾಕ್, ನೆರೆಯ ಗೋವಾ ಸೇರಿ ವಿವಿಧೆಡೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಶೋಧದ ವೇಳೆ ನಗದು, ಚಿನ್ನಾಭರಣಗಳು, ಆಸ್ತಿ ದಾಖಲೆ ಪತ್ರಗಳು, ಹೂಡಿಕೆ, ಹಣಕಾಸು ವ್ಯವಹಾರ, ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿ ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ಮಂಜುನಾಥ್ ಸೇರಿ ಕೆಲವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿದ್ದಾರೆ.
ಜೂನ್‌ನಲ್ಲಿ ಸಹೋದರಿ ಪತಿ ಮೇಲೆ ದಾಳಿ:
ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಸಂಪತ್ತು ಸಂಗ್ರಹಣೆ ಆರೋಪದಡಿ ಇ.ಡಿ. ಅಧಿಕಾರಿಗಳು ಕಳೆದ ಜೂ.24ರಂದು ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಮಂಜುನಾಥ್ ಸೇರಿ ಕೆಲ ಅಧಿಕಾರಿಗಳ ಕುಟುಂಬದ ಸದಸ್ಯರು, ವ್ಯವಹಾರದ ಪಾಲುದಾರರು ಹಾಗೂ ಸಹಚರರಿಗೆ ಸೇರಿದ ನಿವಾಸಗಳು, ಕಚೇರಿಗಳು ಸೇರಿ ರಾಜ್ಯದ 14 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ 5.5 ಕೋಟಿ ರು. ನಗದು, ಸುಮಾರು 7.8 ಕೋಟಿ ರು. ಮೌಲ್ಯದ ಚಿನ್ನಾಭರಣಗಳು, 3.3 ಲಕ್ಷ ರು. ಮೌಲ್ಯದ ವಿದೇಶಿ ಕರೆನ್ಸಿಗಳು ಸೇರಿ ಒಟ್ಟು 13.3 ಕೋಟಿ ರು. ಮೌಲ್ಯದ ಅಪರಾಧದ ಆದಾಯ ಪತ್ತೆಯಾಗಿತ್ತು.
ತನಿಖೆ ವೇಳೆ ವಿದೇಶಿ ಹೂಡಿಕೆ ಬೆಳಕಿಗೆ:
ಈ ಪ್ರಕರಣದ ತನಿಖೆ ವೇಳೆ ಸಚಿವ ಸತೀಶ್ ಜಾರಕಿಹೊಳಿ ಕುಟುಂಬದ ವಿದೇಶಿ ಹೂಡಿಕೆ ಹಾಗೂ ಹಣಕಾಸು ವ್ಯವಹಾರದ ಮಾಹಿತಿ ಲಭಿಸಿತ್ತು. ಹೀಗಾಗಿ ಫೆಮಾ ಕಾಯ್ದೆ ಉಲ್ಲಂಘಿಸಿ ವಿದೇಶದಲ್ಲಿ ನೂರಾರು ಕೋಟಿ ರು. ಹೂಡಿಕೆ ಆರೋಪದಡಿ ಸಚಿವ ಸತೀಶ್ ಜಾರಕಿಹೊಳಿ, ಅವರ ಪುತ್ರಿ ಹಾಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಸಹೋದರಿಯ ಪತಿ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಮಂಜುನಾಥ್ ವಿರುದ್ಧ ಪ್ರತ್ಯೇಕ ಇಸಿಐಆರ್ ದಾಖಲಿಸಿದೆ. ಈ ಸಂಬಂಧ ಇ.ಡಿ. ಇದೀಗ ದಾಳಿ ನಡೆಸಿ ಶೋಧ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸಚಿವರ ಸುದೀರ್ಘ ವಿಚಾರಣೆ:
ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ರಾತ್ರಿ ಕ್ರೆಸೆಂಟ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಉಳಿದಿದ್ದರು. ಇ.ಡಿ. ಅಧಿಕಾರಿಗಳ ಒಂದು ತಂಡ ಬೆಳಗ್ಗೆ ದಾಳಿ ನಡೆಸಿದ ವೇಳೆ ಸಚಿವರು ಸರ್ಕಾರಿ ನಿವಾಸದಲ್ಲೇ ಇದ್ದರು. ಈ ವೇಳೆ ಕೆಲ ದಾಖಲೆಗಳನ್ನು ಮುಂದಿಟ್ಟು ವಿಚಾರಣೆ ನಡೆಸಿದ್ದಾರೆ. ಸರ್ಕಾರಿ ನಿವಾಸ ಸಂಪೂರ್ಣ ಜಾಲಾಡಿದ ಅಧಿಕಾರಿಗಳು, ನಿವಾಸದ ಒಳ ಆವರಣದಲ್ಲಿ ನಿಲುಗಡೆ ಮಾಡಿದ್ದ ಕಾರುಗಳನ್ನೂ ತಪಾಸಣೆ ನಡೆಸಿದರು.
ಮನೆಗೆಲಸಗಾರರ ಹೇಳಿಕೆ ದಾಖಲು:
ಸಚಿವ ಸತೀಶ್ ಜಾರಕಿಹೊಳಿ ಅವರ ಡಾಲರ್ಸ್ ಕಾಲೋನಿ ನಿವಾಸದ ಮೇಲೆ ಇ.ಡಿ.ಅಧಿಕಾರಿಗಳು ದಾಳಿ ಮಾಡಿದಾಗ ಇಬ್ಬರು ಕೆಲಸಗಾರರು ಮಾತ್ರ ಇದ್ದರು. ಶೋಧ ಕಾರ್ಯದ ವೇಳೆ ಕೆಲ ದಾಖಲೆಗಳು ಪತ್ತೆಯಾಗಿದ್ದು, ಜಪ್ತಿ ಮಾಡಿದ್ದಾರೆ. ಬಳಿಕ ಆ ಇಬ್ಬರು ಕೆಲಸಗಾರರ ಹೇಳಿಕೆ ದಾಖಲಿಸಿದ್ದಾರೆ. ಸಚಿವರ ಮನೆಯಲ್ಲಿ ನಾವು ಕೆಲಸ ಮಾಡಿಕೊಂಡಿದ್ದೇವೆ. ಸಚಿವರು ತಿಂಗಳಲ್ಲಿ ಒಂದೆರೆಡು ಬಾರಿ ಮಾತ್ರ ಈ ಮನೆಗೆ ಬರುತ್ತಿದ್ದರು ಎಂದು ಕೆಲಸಗಾರರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವಿದೇಶಿ ಮೈನಿಂಗ್ ಕಂಪನಿಯಲ್ಲಿ ಹೂಡಿಕೆ?
ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಮಂಜುನಾಥ್ ಅವರು ತಮ್ಮ ಪತ್ನಿ, ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯೂ ಆಗಿರುವ ಲಕ್ಷ್ಮೀ ಮಹಾದೇವಿ ಅವರ ಹೆಸರಿನಲ್ಲಿ ವಿದೇಶಿ ಮೈನಿಂಗ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹಣ ಹೂಡಿಕೆ ಮಾಡಿದ್ದಾರೆ. ಈ ಕಂಪನಿಗೆ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ನಿರ್ದೇಶಕರಾಗಿದ್ದಾರೆ. ಈ ವಿದೇಶಿ ಹೂಡಿಕೆಯಲ್ಲಿ ಫೆಮಾ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಸಿಐಆರ್ ದಾಖಲಿಸಿ ಈ ಹೂಡಿಕೆ ಹಣದ ಮೂಲ ಪತ್ತೆ ತನಿಖೆಯ ಭಾಗವಾಗಿ ಇ.ಡಿ. ದಾಳಿ ನಡೆಸಿದೆ ಎನ್ನಲಾಗಿದೆ.
ಸಚಿವ ನಿವಾಸದ ಎದುರು ಬೆಂಬಲಿಗರ ಪ್ರತಿಭಟನೆ
ಸಚಿವ ಸತೀಶ್ ಜಾರಕಿಹೊಳಿ ಅವರ ಕ್ರೆಸೆಂಟ್ ರಸ್ತೆಯ ಸರ್ಕಾರಿ ನಿವಾಸದ ಮೇಲೆ ಇ.ಡಿ. ದಾಳಿ ವಿಚಾರ ತಿಳಿದು ಬೆಂಬಲಿಗರು ಹಾಗೂ ಆಪ್ತರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸಚಿವರು ಯಾವುದೇ ತಪ್ಪು ಮಾಡಿಲ್ಲ. ಕೇಂದ್ರದ ಕೈಗೊಂಬೆಯಾಗಿ ಇ.ಡಿ. ದಾಳಿ ನಡೆಸಿದೆ ಎಂದು ಭಿತ್ತಿಪತ್ರ ಹಿಡಿದು ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಸಚಿವರು ಎರಡು ನಿಮಿಷ ಸಚಿವರು ಬಂದು ಮುಖ ತೋರಿಸಿ ಹೋಗಲಿ ಎಂದು ಆಗ್ರಹಿಸಿದರು. ಆದರೆ, ಪೊಲೀಸರು ಸಚಿವರ ಭೇಟಿಗೆ ಅವಕಾಶ ನೀಡಲಿಲ್ಲ.
ಜಾರಕಿಹೊಳಿಗೆ 15 ತಾಸು ಇ.ಡಿ. ಗ್ರಿಲ್
ಇ.ಡಿ.ಅಧಿಕಾರಿಗಳು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸತತ 15 ತಾಸು ವಿಚಾರಣೆ ನಡೆಸಿದ್ದಾರೆ. ಬೆಳಗ್ಗೆ ಸುಮಾರು 7 ಗಂಟೆಯಿಂದ ವಿಚಾರಣೆ ಆರಂಭಿಸಿ ರಾತ್ರಿ 10 ನಂತರವೂ ವಿಚಾರಣೆ ಮುಂದುವರೆಸಿದ್ದರು. ವಿದೇಶಿ ಹೂಡಿಕೆ ಮಾತ್ರವಲ್ಲದೆ, ಅವರ ಇತರೆ ಉದ್ಯಮಗಳು ಹಾಗೂ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಇನ್ನೂ ಹಲವರ ಮೇಲೆ ದಾಳಿ ನಡೆವ ಸಾಧ್ಯತೆ
ಇ.ಡಿ. ದಾಳಿ ರಾಜಕೀಯ ಪ್ರೇರಿತ. ಮುಂದೆ ಇನ್ನೂ ಹಲವು ಕಾಂಗ್ರೆಸ್ಸಿಗರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಪಕ್ಷದ ಎಲ್ಲ ಶಾಸಕರು ಮತ್ತು ಸಚಿವರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದೇನೆ. ಶೇ.100 ರಷ್ಟು ನಾವು ಸತೀಶ್ ಜಾರಕಿಹೊಳಿ ಪರ ನಿಲ್ಲುತ್ತೇವೆ.
- ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ

