ಸಿಎಂ ವಿರುದ್ಧ ಬಿಜೆಪಿಗರ ವಾರ್ ! ಯುದ್ಧ ಬೇಡ ಎಂದ ಸಿದ್ದರಾಮಯ್ಯ ಕ್ಷಮೆ ಕೇಳಲಿ

ಸಾರಾಂಶ

ಪಹಲ್ಗಾಂ ಉಗ್ರರ ದಾಳಿಗೆ ಪ್ರತೀಕಾರವಾಗಿ ಯುದ್ಧ ಸಾರುವುದು ಅನಗತ್ಯ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ನಾಯಕರು ಯುದ್ಧವನ್ನೇ ಸಾರಿದ್ದಾರೆ.

  ಬೆಂಗಳೂರು : ಪಹಲ್ಗಾಂ ಉಗ್ರರ ದಾಳಿಗೆ ಪ್ರತೀಕಾರವಾಗಿ ಯುದ್ಧ ಸಾರುವುದು ಅನಗತ್ಯ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ನಾಯಕರು ಯುದ್ಧವನ್ನೇ ಸಾರಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್‌, ಕೇಂದ್ರ ಸಚಿವ ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಅನೇಕ ನಾಯಕರು ಭಾನುವಾರ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ, ಮುಸ್ಲಿಂ ಸಮುದಾಯ ಸಂತೃಪ್ತಿ ಪಡಿಸಲು ಸಿದ್ದರಾಮಯ್ಯ ಪಾಕ್‌ ಪರ ಹೇಳಿಕೆ ನೀಡಿದ್ದಾರೆಂದು ಟೀಕಿಸಿದ್ದಾರೆ.

ದೇಶದ ಕ್ಷಮೆ ಕೇಳಲಿ:

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿದ್ದರಾಮಯ್ಯ ದೃಷ್ಟಿಕೋನ ಸರಿಯಲ್ಲ, ಅವರು ದೇಶದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯಗೆ ಅಲ್ಪಸಂಖ್ಯಾತರೆಂದರೆ ಎಷ್ಟು ಪ್ರೀತಿ, ಅವರ ವಿಚಾರ ಬಂದಾಗ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆಂಬ ಸತ್ಯ ಜನರಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ಹೇಳಿಕೆ ಅಕ್ಷಮ್ಯ ಅಪರಾಧ ಎಂದರು.

ಈ ನಡುವೆ, ಪಹಲ್ಗಾಂ ಉಗ್ರ ದಾಳಿ ವಿಚಾರವಾಗಿ ಇಡೀ ದೇಶ ಒಗ್ಗಟ್ಟಾಗಿ ನಿಲ್ಲಬೇಕಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಅತ್ಯಂತ ಬಾಲಿಶವಾದದ್ದು. ಅವರು ದೇಶದ ಕ್ಷಮೆ ಕೇಳಬೇಕು ಎಂದು ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದರು. ಮುಖ್ಯಮಂತ್ರಿಯಾದವರಿಗೆ ಇಂಥ ಹೇಳಿಕೆ ಶೋಭೆ ತರುವುದಿಲ್ಲ. ಅವರು ನಡವಳಿಕೆ ಸರಿಪಡಿಸಿಕೊಳ್ಳಬೇಕು ಎಂದರು.

ತುಮಕೂರಿನಲ್ಲಿ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿ, ಪಹಲ್ಗಾಂ ಭಯೋತ್ಪಾದಕರ ಕೃತ್ಯವನ್ನು ಜಗತ್ತೇ ಖಂಡಿಸುತ್ತಿದೆ. ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಲು ಭಾರತ ಸರ್ಕಾರ ಸಮರ್ಥವಾಗಿದೆ. ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಮೇಲೆ ಯುದ್ಧ ಬೇಡ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೇಶವಾಸಿಗಳೇ ತಕ್ಕಉತ್ತರ ನೀಡುತ್ತಾರೆ ಎಂದು ಕುಟುಕಿದರು. ಸಿದ್ದರಾಮಯ್ಯ ಆಡಿದ ಮಾತಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ. ಮಾತಿನ ಮೇಲೆ ನಿಗಾ ಇಡಬೇಕು, ನಾಲಿಗೆ ಹರಿಬಿಡುವುದು ಸರಿಯಲ್ಲ ಎಂದು ತಾಕೀತು ಮಾಡಿದರು.

ಬೆಳಗಾವಿಯಲ್ಲಿ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್‌ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಜನಪ್ರಿಯ ಆಗಲು ಹೊರಟಿದ್ದಾರೆ. ಅವರು ಪಾಕಿಸ್ತಾನಕ್ಕೆ ಹೋದರೆ ಒಳ್ಳೆಯದು ಎಂದು ಕಿಡಿಕಾರಿದರು. ಇಷ್ಟು ಸಣ್ಣ ವಿಚಾರ ಅರ್ಥ ಮಾಡಿಕೊಳ್ಳದ ಸಿಎಂ ಇದ್ದಾರೆ ಎಂದರೆ ನಮಗೆಲ್ಲ ನಾಚಿಕೆ ಬರುತ್ತದೆ. ಎಐಸಿಸಿ ಅಧ್ಯಕ್ಷರು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ‌. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಸಿಎಂ ಕೇಳಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಪಹಲ್ಗಾಂನಲ್ಲಿ ಅಮಾಯಕರು ಉಗ್ರರ ಗುಂಡಿಗೆ ಬಲಿಯಾಗಿರುವ ಈ ನೋವಿನ ಘಳಿಗೆಯಲ್ಲಿ ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ದಾಳಿ ಸಮರ್ಥಿಸುವ ಅಥವಾ ದಾಳಿಕೋರರ ಅಜೆಂಡಾ ಮರೆಮಾಚುವಂತಹ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಧಾರವಾಡದಲ್ಲಿ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದರು. ಸಂತ್ರಸ್ತರಿಗೂ ಹಾಗೂ ಅವರ ಕುಟುಂಬಸ್ಥರಿಗೂ ನ್ಯಾಯ ಸಿಗಬೇಕಿದೆ. ದೇಶದ ಹೊರಗಿನ ಶತ್ರುಗಳಿಗಿಂತ, ನಮ್ಮ ನಡುವೆಯೇ ಇರುವ ದ್ರೋಹಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಮಂಗಳೂರಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವೇದನೆ ರಹಿತರಂತೆ, ಬೇಜವಾಬ್ದಾರಿಯುತ, ಬಾಲಿಶ ಮತ್ತು ರಾಜಕೀಯ ಅಭದ್ರತೆಯಿಂದ ಕೂಡಿದ ಹೇಳಿಕೆ ನೀಡಿರುವುದು ವಿಷಾದನೀಯ ಎಂದರು.

ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯಿಂದ ಜನತೆ ತಲೆತಗ್ಗಿಸುವ ಪರಿಸ್ಥಿತಿ ಬಂದಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಜರಿದಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನ ಪರ ಹೇಳಿಕೆ ಮೂರ್ಖತನ ಎಂದರು. ಸಿದ್ದರಾಮಯ್ಯ ಹೇಳಿಕೆ ಉಲ್ಲೇಖಿಸಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿರುವುದಕ್ಕೆ ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿ, ಶತ್ರು ರಾಷ್ಟ್ರ ಪಾಕಿಸ್ತಾನದ ಹೃದಯ ಗೆದ್ದ ಸಿದ್ದರಾಮಯ್ಯ. ಇದು ಓಲೈಕೆ ರಾಜಕಾರಣಕ್ಕೆ ಸಿಕ್ಕ ಗೌರವ ಎಂದು ಕಾಲೆಳೆದಿದ್ದಾರೆ. ಪಾಕಿಸ್ತಾನದ ಹೊಗಳಿಕೆಗೆ ಪಾತ್ರವಾದ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ತಿವಿದಿದ್ದಾರೆ.

ಯತ್ನಾಳ್‌ ಕಿಡಿ

ಸಿದ್ದರಾಮಯ್ಯ ಹೇಳಿಕೆಗೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಕೆಂಡಾಮಂಡಲರಾಗಿದ್ದು, ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯಗೆ ಮಾನ ಮಾರ್ಯಾದೆ ಏನಾದರೂ ಇದೆಯಾ? ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು. ಸಿದ್ದರಾಮಯ್ಯ ಅವರಿಗೆ ಹಿಂದೂಗಳು ವೋಟ್ ಹಾಕಿಲ್ಲವಾ? ಕೇವಲ ಮುಸ್ಲಿಂಮರೇ ವೋಟ್ ಹಾಕಿದ್ದಾರ? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಕರ್ನಾಟಕ ಸಿಎಂ ಅಷ್ಟೇ, ಯುದ್ಧದ ಬಗ್ಗೆ ನಿರ್ಣಯ ತೆಗೆದುಕೊಳ್ಳೊದು ಕೇಂದ್ರ ಸರ್ಕಾರ ಹಾಗೂ ಸೇನೆ. ಇವರ ಹೇಳಿಕೆಗೆ ಅದ್ಯಾರು ಗಮನ ಕೊಡುತ್ತಾರೆ ಬಿಡಿ ಎಂದರು.

Share this article