ಚಿಲ್ಲರೆ ಹೇಳಿಕೆ ನಿಲ್ಲಿಸಿ : ಚಿತ್ರರಂಗಕ್ಕೆ ಡಿ.ಕೆ. ಶಿವಕುಮಾರ್‌

KannadaprabhaNewsNetwork | Updated : Apr 28 2025, 04:20 AM IST

ಸಾರಾಂಶ

‘ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಗೌರವ ಬಂದಿದೆ. ಅದನ್ನು ಕಾಪಾಡಿಕೊಂಡು ಹೋಗಿ. ಅದನ್ನು ಬಿಟ್ಟು ಚಿತ್ರರಂಗದಿಂದ ನಿವೃತ್ತರಾದವರೆಲ್ಲ ಸಣ್ಣಪುಟ್ಟ ಚಿಲ್ರೆ ಸ್ಟೇಟ್‌ಮೆಂಟ್‌ ಕೊಡಬೇಡಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗುಡುಗಿದ್ದಾರೆ.

 ಬೆಂಗಳೂರು : ‘ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಗೌರವ ಬಂದಿದೆ. ಅದನ್ನು ಕಾಪಾಡಿಕೊಂಡು ಹೋಗಿ. ಅದನ್ನು ಬಿಟ್ಟು ಚಿತ್ರರಂಗದಿಂದ ನಿವೃತ್ತರಾದವರೆಲ್ಲ ಸಣ್ಣಪುಟ್ಟ ಚಿಲ್ರೆ ಸ್ಟೇಟ್‌ಮೆಂಟ್‌ ಕೊಡಬೇಡಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗುಡುಗಿದ್ದಾರೆ.

ಈ ಹಿಂದೆ ‘ಚಿತ್ರರಂಗದವರ ನಟ್ಟು-ಬೋಲ್ಟ್‌ ಹೇಗೆ ಟೈಟ್‌ ಮಾಡ್ಬೇಕು ಅಂತ ಗೊತ್ತಿದೆ’ ಎನ್ನುವ ಮೂಲಕ ಸ್ಯಾಂಡಲ್‌ವುಡ್‌ನ ಹಲವರ ವಿರೋಧಕ್ಕೆ ಡಿ.ಕೆ.ಶಿವಕುಮಾರ್‌ ಕಾರಣವಾಗಿದ್ದರು. ಆಗ ಇವರ ನಿಲುವನ್ನು ವಿರೋಧಿಸಿ ಅನೇಕರು ಹೇಳಿಕೆಗಳನ್ನು ನೀಡಿದ್ದರು. ಇದೀಗ ಅವರಿಗೆ ಡಿ.ಕೆ.ಶಿವಕುಮಾರ್‌ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಡಾ.ರಾಜ್‌ಕುಮಾರ್‌ ಜನ್ಮದಿನಾಚರಣೆ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಆಯೋಜಿಸಿದ್ದ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ‘ಚಿತ್ರರಂಗದಲ್ಲಿ ಇಲ್ಲದೇ ಇರುವವರು, ಇಲ್ಲಿದ್ದು ನಿವೃತ್ತರಾಗಿರುವವರು ಇತ್ತೀಚೆಗೆ ಚಿಲ್ರೆ ಸ್ಟೇಟ್‌ಮೆಂಟ್‌ ಕೊಡುತ್ತಿದ್ದಾರೆ. ಇಂಥದ್ದನ್ನೆಲ್ಲ ಬಿಟ್ಟು ಚಿತ್ರರಂಗ ಉಳಿಸಿ. ಥೇಟರ್‌ ಕಟ್ಟಿ, ಹೊಸ ಸಿನಿಮಾ ತೆಗೀರಿ, ಡೈರೆಕ್ಷನ್‌ ಮಾಡಿ, ನಿರ್ಮಾಣ ಮಾಡಿ. ಆಗ ಸಿನಿಮಾ ಮಾಡುವವರ ಬೆಲೆ ಗೊತ್ತಾಗುತ್ತದೆ. ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ವ್ಯತ್ಯಾಸ ಇದೆ’ ಎಂದು ಕಟಕಿಯಾಡಿದರು.

‘ಡಿಸೆಂಬರ್‌ ಅಥವಾ ಜನವರಿಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡುವ ಚಿಂತನೆ ಇದೆ. ಆ ಬಗ್ಗೆ ಚರ್ಚೆ ಶುರುವಾಗಿದೆ. ನಾವೆಲ್ಲ ಸೇರಿ ಸ್ಯಾಂಡಲ್‌ವುಡ್‌ಗೆ ಹೊಸ ಕಿರೀಟ ಕೊಡಬೇಕು. ಸರ್ಕಾರದ ಸಂಪೂರ್ಣ ಬೆಂಬಲ ಚಿತ್ರರಂಗದ ಮೇಲಿದೆ. ಚಿತ್ರರಂಗಕ್ಕೆ ಹೊಸರೂಪ ನೀಡುವ ಪ್ರಯತ್ನ ಮಾಡೋಣ’ ಎಂದರು.

ಈ ವೇಳೆ ವರನಟ ಡಾ ರಾಜ್‌ಕುಮಾರ್‌ ಅವರು ಚಿತ್ರರಂಗ ನೀಡಿರುವ ಕೊಡುಗೆಯನ್ನೂ ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಿವರಾಜ್‌ಕುಮಾರ್‌, ‘ಚಿತ್ರರಂಗದ ಮುಂದೆ ಅನೇಕ ಸವಾಲುಗಳಿವೆ. ಇದನ್ನು ಇತ್ಯರ್ಥಗೊಳಿಸುವಲ್ಲಿ ತಪ್ಪು ಹೆಜ್ಜೆ ಇಡುವುದು ಬೇಡ. ಎಲ್ಲ ಭಾಷೆಯವರನ್ನೂ ಒಗ್ಗೂಡಿಸಿಕೊಂಡು ಮುಂದಡಿ ಇಡಬೇಕು. ಇದರಲ್ಲಿ ನಾಯಕತ್ವದ ಪ್ರಶ್ನೆ ಬರುವುದಿಲ್ಲ. ಎಲ್ಲರೂ ಇದರಲ್ಲಿ ಭಾಗವಹಿಸಬೇಕು. ಮುಖ್ಯವಾಗಿ ಯುವಕರು ಮುಂದೆ ಬರಬೇಕು. ಅಪ್ಪಾಜಿ ಡಾ.ರಾಜ್‌ಕುಮಾರ್‌ ಅವರು ಸಿನಿಮಾದ ಮಹತ್ವ ಸಾರುವ ಜೊತೆಗೆ ಆರೋಗ್ಯ ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟರು, ನೇತ್ರದಾನದ ಅರಿವು ಮೂಡಿಸಿದರು. ಅಂಥ ಅಂಶಗಳನ್ನು ಮರೆಯದಿರೋಣ’ ಎಂದರು.

ನಿರ್ಮಾಪಕ ಸಾ.ರಾ.ಗೋವಿಂದು ಮಾತನಾಡಿ, ‘ಸ್ಯಾಂಡಲ್‌ವುಡ್‌ನ ಮಾತೃಸಂಸ್ಥೆ ಈ ವಾಣಿಜ್ಯಮಂಡಳಿ. ಇತ್ತೀಚೆಗೆ ಬೇರೆ ಬೇರೆ ಸಂಸ್ಥೆಗಳು ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಹುಟ್ಟಿಕೊಂಡು ಈ ಸಂಸ್ಥೆಯ ಘನತೆಗೆ ಕುಂದು ತರುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇವೆ’ ಎಂದರು.

ಈ ಸಂದರ್ಭ ಶ್ರೀ ಮುರಳಿ, ರಾಗಿಣಿ ದ್ವಿವೇದಿ ಪೆಹಲ್ಗಾಂ ದಾಳಿಯನ್ನು ಖಂಡಿಸಿದರು.

Share this article