ಯಾದಗಿರಿ : ಕಲಬುರಗಿ ಜಿಲ್ಲೆ ಚಿತ್ತಾಪುರದ ಬಳಿಕ ಈಗ ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಲ್ಲೂ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಬ್ರೇಕ್ ಹಾಕಲಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಗುರುಮಠಕಲ್ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶನಿವಾರ ಪಥಸಂಚಲನ ನಡೆಸಲು ಸಂಘ ಸಿದ್ಧತೆ ನಡೆಸಿತ್ತು. ಆದರೆ, ಸರ್ಕಾರಿ ಆಸ್ತಿಗಳನ್ನು ಮತ್ತು ಸರ್ಕಾರಿ ಆವರಣಗಳನ್ನು ಬಳಸಲು ಮೂರು ದಿನಗಳ ಮೊದಲು ಅನುಮತಿ ಕೋರಿ ಅರ್ಜಿ ಸಲ್ಲಿಸಿಲ್ಲ. ಬದಲಿಗೆ 2 ದಿನ ಮುನ್ನ ಮಂಡಿಸಲಾಗಿದೆ ಎಂದು ಆರ್‌ಎಸ್‌ಎಸ್ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿರಸ್ಕರಿಸಿ, ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದರು.
ಮತ್ತೆ ಅರ್ಜಿ ಸಲ್ಲಿಸಲು ತೀರ್ಮಾನ:ಶನಿವಾರ ಮಧ್ಯಾಹ್ನ 3 ಗಂಟೆಗೆ ಆರ್‌ಎಸ್‌ಎಸ್ ಪಥಸಂಚಲನ ಹಮ್ಮಿಕೊಂಡಿತ್ತು. ಪಥ ಸಂಚಲನಕ್ಕೆ ಅನುಮತಿ ಕೋರಿ ಗುರುಮಠಕಲ್ ತಹಸೀಲ್ದಾರರಿಗೆ ಸಂಘದ ಜಿಲ್ಲಾ ಪ್ರಚಾರ ಪ್ರಮುಖರು ಅ.21ರಂದು ಪತ್ರಮುಖೇನ ಮನವಿ ಮಾಡಿದ್ದರು. ಇದಕ್ಕೆ ಅ.23ರಂದು ಹಿಂಬರಹ ನೀಡಿದ್ದ ತಹಸೀಲ್ದಾರರು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವಂತೆ ತಿಳಿಸಿದ್ದರು. ಅದರಂತೆ, ಸ್ವಯಂ ಸೇವಕರು ಅ.23 ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದು, ಅನುಮತಿ ಕೋರಿದ್ದರು.ಆದರೆ, ಕಾರ್ಯಕ್ರಮ ನಡೆಯುವ 3 ದಿನಗಳ ಮೊದಲು ಅರ್ಜಿ ಸಲ್ಲಿಸದೆ ಇರುವುದರಿಂದ ಪಥಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹಿಂಬರಹ ನೀಡಿ, ಅರ್ಜಿ ತಿರಸ್ಕರಿಸಿದ್ದಾರೆ.
ಈ ಮಧ್ಯೆ, ಮತ್ತೆ ಹೊಸ ದಿನಾಂಕ ಗೊತ್ತು ಮಾಡಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಆರ್‌ಎಸ್‌ಎಸ್ ಪ್ರಮುಖರು ನಿರ್ಧರಿಸಿದ್ದಾರೆ.
ಡೀಸಿ ಅನುಮತಿ ಸಿಕ್ಕ ಬಳಿಕ ಆಯೋಜನೆಗುರುಮಠಕಲ್‌ನಲ್ಲಿ ಜಿಲ್ಲಾಧಿಕಾರಿಯವರು ಅನುಮತಿ ನೀಡದ ಕಾರಣ ಶನಿವಾರ ನಡೆಯಬೇಕಿದ್ದ ಪಥ ಸಂಚಲನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಜಿಲ್ಲಾಧಿಕಾರಿಯಿಂದ ಅನುಮತಿ ಸಿಕ್ಕಿದ ಕೂಡಲೇ ಮುಂದಿನ ದಿನಾಂಕ ನಿಗದಿಪಡಿಸಿ ಪಥ ಸಂಚಲನ ಆಯೋಜಿಸಲಾಗುವುದು. - ಬಸಪ್ಪ ಸಂಜನೋಳ, ಆರ್‌ಎಸ್‌ಎಸ್, ಜಿಲ್ಲಾ ಪ್ರಚಾರ ಪ್ರಮುಖರು, ಯಾದಗಿರಿ.
ಆರೆಸ್ಸೆಸ್ ಯಾವುದೇ ಧರ್ಮದ ವಿರುದ್ಧ ಕೆಲಸ ಮಾಡಿಲ್ಲ. ಆದರೂ ಗುರುಮಠಕಲ್‌ನಲ್ಲಿ ಅನುಮತಿ ನಿರಾಕರಿಸಿರುವುದು ದುರುದ್ದೇಶದಿಂದ ಕೂಡಿರುವ ಅನುಮಾನ ಕಾಡುತ್ತಿದೆ. ಅಗತ್ಯಬಿದ್ದರೆ ಕಾನೂನು ಹೋರಾಟದ ಮೂಲಕ ಪಥ ಸಂಚಲನ ನಡೆಸುತ್ತೇವೆ.
- ರವೀಂದ್ರ ರೆಡ್ಡಿ ಪೋತುಲ್, ಹಿಂದೂ ಸಂಘಟನೆಯ ಮುಖಂಡರು, ಗುರುಮಠಕಲ್.
- ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದು ಕೋರ್ಟ್ ಕಟಕಟೆಗೆ
- ಇದರ ಬೆನ್ನಲ್ಲೇ ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಲ್ಲೂ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ
- ಶನಿವಾರ ಪಥ ಸಂಚಲನ ನಡೆಸಲು ಅ.21ರಂದೇ ಅನುಮತಿಗಾಗಿ ಪತ್ರ ಮುಖೇನ ಮನವಿ ಮಾಡಿದ್ದ ಸಂಘ
- ಸಕ್ಷಮ ಪ್ರಾಧಿಕಾರದ ಮೊರೆ ಹೋಗಲು ಅ.23ರಂದು ತಿಳಿಸಿದ್ದ ತಹಶೀಲ್ದಾರ್. ಕೂಡಲೇ ಡೀಸಿಗೆ ಸಂಘ ಮೊರೆ
- ಅ.25ರ ಕಾರ್ಯಕ್ರಮಕ್ಕೆ 3 ದಿನದ ಬದಲು 2 ದಿನ ಮುನ್ನ ಅರ್ಜಿ ಸಲ್ಲಿಸಲಾಗಿದೆ ಎಂದು ಅನುಮತಿಗೆ ಡೀಸಿ ನಕಾರ