ರಾತ್ರೊರಾತ್ರಿ ನನ್ನ ಹೆಸರು ಸಚಿವ ಪಟ್ಟಿಯಿಂದ ಔಟ್‌ : ಸಿ.ಎಸ್‌.ನಾಡಗೌಡ

KannadaprabhaNewsNetwork |  
Published : Oct 26, 2025, 02:00 AM ISTUpdated : Oct 26, 2025, 05:46 AM IST
CS Nadagouda

ಸಾರಾಂಶ

ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಕಾಂಗ್ರೆಸ್‌ನಲ್ಲಿ ನನ್ನ ನಿಷ್ಠೆ, ಪ್ರಾಮಾಣಿಕತೆಗೆ ಬೆಲೆ ಇದೆ ಎನ್ನುವುದಾದರೆ ಸಚಿವ ಸಂಪುಟ ಪುನಾರಚನೆ ವೇಳೆ ಹೈಕಮಾಂಡ್‌ ನಾಯಕರು ನನ್ನ ಹೆಸರನ್ನೂ ಪರಿಗಣಿಸುತ್ತಾರೆ ಎಂದು ಶಾಸಕ ಸಿ.ಎಸ್‌.ನಾಡಗೌಡ ಹೇಳಿದ್ದಾರೆ.

 ಬೆಂಗಳೂರು :  ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಕಾಂಗ್ರೆಸ್‌ನಲ್ಲಿ ನನ್ನ ನಿಷ್ಠೆ, ಪ್ರಾಮಾಣಿಕತೆಗೆ ಬೆಲೆ ಇದೆ ಎನ್ನುವುದಾದರೆ ಸಚಿವ ಸಂಪುಟ ಪುನಾರಚನೆ ವೇಳೆ ಹೈಕಮಾಂಡ್‌ ನಾಯಕರು ನನ್ನ ಹೆಸರನ್ನೂ ಪರಿಗಣಿಸುತ್ತಾರೆ ಎಂದು ಕೆಎಸ್‌ಡಿಎಲ್‌ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್‌.ನಾಡಗೌಡ ಹೇಳಿದ್ದಾರೆ.

ಶನಿವಾರ ಸಂಸ್ಥೆಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವಾಗಲೂ ಸಚಿವ ಸ್ಥಾನದ ಆಕಾಂಕ್ಷಿಯೇ. ಅದಕ್ಕಾಗಿ ಹೈಕಮಾಂಡ್‌ ನಾಯಕರ ಬಳಿ ಹೋಗಿ ನನ್ನ ಬಗ್ಗೆ ಹೇಳಿಕೊಳ್ಳುವುದಿಲ್ಲ. ಅಪ್ಪಾಜಿ ನಾಡಗೌಡ ಯಾರು, ಪಕ್ಷ ನಿಷ್ಠೆ ಏನೆಂದು ಹೈಕಮಾಂಡ್‌ ನಾಯಕರಿಗೆ ಗೊತ್ತಿಲ್ಲದಿದ್ದರೆ ಹೋಗಿ ಮಾತನಾಡಬೇಕಿತ್ತು. ಹಾಗೇನಾದರೂ ಹೋದರೆ ಸಚಿವ ಸ್ಥಾನ ನೀಡದ ವ್ಯಥೆ ಹೇಳಿಕೊಳ್ಳಬೇಕಾಗುತ್ತದೆ. 30-40 ವರ್ಷಗಳಿಂದ ರಾಜಕೀಯ ಮಾಡಿ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನ್ನ ಪ್ರಾಮಾಣಿಕತೆಗೆ ಬೆಲೆ ಇದ್ದರೆ, ದುಡಿಮೆಯನ್ನು ಗೌರವಿಸಬೇಕೆಂದಿದ್ದರೆ ಖಂಡಿತವಾಗಿ ನಾನು ಸಚಿವನಾಗುತ್ತೇನೆ ಎಂದರು.

ದೆಹಲಿ ಪಟ್ಟಿಯಲ್ಲಿ ನನ್ನ ಹೆಸರಿತ್ತು:

ಸರ್ಕಾರ ರಚನೆಯಾದ ಸಮಯದಲ್ಲಿ ದೆಹಲಿಯಿಂದ ಬಂದ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಇಂಧನ ಇಲಾಖೆಯನ್ನು ನೀಡಲೂ ನಿರ್ಧರಿಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ನನ್ನನ್ನು ಕೈಬಿಡಲಾಗಿದೆ. ನನಗೆ ಸಚಿವ ಸ್ಥಾನ ತಪ್ಪುವಲ್ಲಿ ಕೈವಾಡವಿತ್ತು. ಅದು ರಾಜಕಾರಣದಲ್ಲಿ ಸಹಜ. ಅಪ್ಪಾಜಿ ನಾಡಗೌಡರನ್ನು ಸಣ್ಣವನನ್ನಾಗಿ ಮಾಡಿದರೆ ಪಕ್ಷಕ್ಕೆ ಒಳ್ಳೆಯದಲ್ಲ. ಪಕ್ಷದ ನಿಷ್ಠಾವತರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎಂದರೆ ಕಾರ್ಯಕರ್ತರು ಕೂಡ ದೂರವಾಗುತ್ತಾರೆ. ಈ ಬಾರಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಮುಂದೆ ಅಧಿಕಾರದಿಂದ ದೂರವಾಗಬಹುದು. ಇದೇ ರೀತಿಯಾದರೆ ಮುಂದೆ ಅಧಿಕಾರಕ್ಕೆ ಬರುತ್ತೇವೋ, ಇಲ್ಲವೋ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ ಎಂದು ಹೇಳಿದರು.

ನಾಯಕತ್ವ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಯತೀಂದ್ರ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಭಾವನಾತ್ಮಕವಾಗಿ ಸತೀಶ್‌ ಜಾರಕಿಹೊಳಿ ಅವರನ್ನು ಹಾಡಿ ಹೊಗಳಿರಬಹುದು. ಆದರೆ, ಅದು ಹೈಕಮಾಂಡ್‌ ನಾಯಕರು, ಸಿದ್ದರಾಮಯ್ಯ ಅವರ ಅಭಿಪ್ರಾಯ ಎಂದು ತಿಳಿಯಬಾರದು ಎಂದರು.

ಸಚಿವರಾಗದಿದ್ದರೆ ಕ್ಷೇತ್ರದ ಕೆಲಸವೂ ಆಗಲ್ಲ: ನಾಡಗೌಡ

ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಸಚಿವ ಸ್ಥಾನ ಇಲ್ಲದಿದ್ದರೆ ಕ್ಷೇತ್ರದಲ್ಲೂ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿದೆ ಎಂದು ಇದೇ ವೇಳೆ ನಾಡಗೌಡ ಬೇಸರ ತೋಡಿಕೊಂಡರು.

ಸಚಿವರು ಸರ್ಕಾರದ ಹೊಸ ಯೋಜನೆ ಮತ್ತು ಅನುದಾನದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತಿಳಿದುಕೊಳ್ಳುತ್ತಾರೆ. ನಂತರ ಒಬ್ಬ ಸಚಿವ ಮತ್ತೊಬ್ಬ ಸಚಿವರಿಗೆ ಪತ್ರ ಬರೆದು ತಮ್ಮ ಕ್ಷೇತ್ರಕ್ಕೆ ಬೇಕಾದ ಯೋಜನೆ ಹಾಕಿಸಿಕೊಳ್ಳುತ್ತಾರೆ. ಸಚಿವ ಸಂಪುಟದಲ್ಲೇ ಎಲ್ಲ ಅನುದಾನ ಮತ್ತು ಯೋಜನೆ ಹಂಚಿಕೊಳ್ಳುತ್ತಾರೆ. ಶಾಸಕರಿಗೆ ಅದು ತಲುಪುವುದಿಲ್ಲ. ಇದರಿಂದ ಆಡಳಿತ ಪಕ್ಷದಲ್ಲಿ ಇದ್ದರೂ ಕ್ಷೇತ್ರದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಚಿವರು ಶಾಸಕರಿಗೆ ಮೊದಲು ಅನುದಾನ ಕೊಡಬೇಕು ಎಂದು ಆಗ್ರಹಿಸಿದರು.

30-40 ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಪ್ರಾಮಾಣಿಕತೆಗೆ ಬೆಲೆ ಇದ್ದರೆ, ಖಂಡಿತವಾಗಿ ನಾನು ಸಚಿವನಾಗುವೆ

ನಾನು ಯಾವಾಗಲೂ ಸಚಿವ ಸ್ಥಾನದ ಆಕಾಂಕ್ಷಿಯೇ. ಅದಕ್ಕಾಗಿ ಹೈಕಮಾಂಡ್‌ ನಾಯಕರ ಬಳಿ ಹೋಗಿ ನನ್ನ ಬಗ್ಗೆ ಹೇಳಿಕೊಳ್ಳುವುದಿಲ್ಲಕ

ಸರ್ಕಾರ ರಚನೆ ವೇಳೆ ದಿಲ್ಲಿಯಿಂದ ಬಂದ ಪಟ್ಟೀಲಿ ನನ್ನ ಹೆಸರಿತ್ತು. ಆದರೆ ಕೊನೆ ಕ್ಷಣ ನನ್ನ ಕೈಬಿಡಲಾಗಿತ್ತು. ರಾಜಕಾರಣದಲ್ಲಿ ಇದು ಸಹಜ

ಪಕ್ಷದಲ್ಲಿ ಹಿರಿಯರ ಕಡೆಗಣಿಸಲಾಗುತ್ತಿದೆ. ಸಚಿವ ಸ್ಥಾನ ಇಲ್ಲದಿದ್ದರೆ ಕ್ಷೇತ್ರದಲ್ಲೂ ಸರಿಯಾಗಿ ಕೆಲಸ ಮಾಡಲಾಗದ ಪರಿಸ್ಥಿತಿಯಿದೆ: ನಾಡಗೌಡ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌