ನಾಗಮಂಗಲ : ನನ್ನ ಮತ್ತು ನನ್ನ ಬೆಂಬಲಿಗರನ್ನು ಕರೆದು ಸಚಿವ ಚಲುವರಾಯಸ್ವಾಮಿ ಮಾತನಾಡುತ್ತಾರೆ ಅಂದುಕೊಂಡಿದ್ದೆ. ಆದರೆ, ನಮ್ಮನ್ನು ಹತ್ತಿರಕ್ಕೂ ಸೇರಿಸುತ್ತಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಬೆಂಬಲಿಗರು ಮತ್ತು ಕಾರ್ಯಕರ್ತರ ಕುಂದುಕೊರತೆ ಆಲಿಸಿ ಮಾತನಾಡಿ, ಕ್ಷೇತ್ರದಲ್ಲಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್‌ಗೌಡ ಅವರೇ ಎಲ್ಲವನ್ನೂ ಬಗೆಹರಿಸಲು ಸಾಧ್ಯವಿಲ್ಲ. ಎಲ್ಲರೂ ಸೇರಿದರೆ ಮಾತ್ರ ತಾಲೂಕಿನ ಅಭಿವೃದ್ಧಿ ಸಾಧ್ಯ. ನನ್ನನ್ನು ಹೊತ್ತು ಮೆರೆಸಿರುವ ಹಲವು ಮಂದಿ ಬೆಂಬಲಿಗರು ಅವರ ಬಳಿ ಹೋಗುವುದಿಲ್ಲ ಎಂದರು.
ತಾಲೂಕಿನಲ್ಲಿ ನನ್ನ ಬೆಂಬಲಿಗ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಯಾವುದೇ ಸಮಸ್ಯೆ ಕುಂದುಕೊರತೆಗಳ ಪರಿಹಾರಕ್ಕಾಗಿ ಇನ್ನೊಬ್ಬರ ಮನೆ ಮುಂದೆ ಕೈಕಟ್ಟಿ ನಿಲ್ಲುವ ಅಗತ್ಯವಿಲ್ಲ. ಮಾಜಿ ಎಂಬ ಹೆಸರಿನಲ್ಲಿಯೇ ಛಡಿ ಹಿಡಿದು ಅಧಿಕಾರಿಗಳಿಂದ ಕೆಲಸ ಮಾಡಿಸುತ್ತೇನೆ. ಆ ಶಕ್ತಿ ತಾಕತ್ತು ಇರುವುದು ನನ್ನೊಬ್ಬನಿಗೆ ಮಾತ್ರ ಎಂದರು.
ತಾಲೂಕಿನಲ್ಲಿ ನಾನು 10 ಚುನಾವಣೆಗಳನ್ನು ಎದುರಿಸಿ ನಾಲ್ಕು ಬಾರಿ ಗೆದ್ದು ಎಂಎಲ್‌ಎ, ಎಂಎಲ್‌ಸಿ, ಎಂಪಿ ಆಗಿ ಕೆಲಸ ಮಾಡಿದ್ದೇನೆ. ನಾನು ಈಗಲೂ ರಾಜ್ಯದೆಲ್ಲೆಡೆ ಪ್ರವಾಸ ಮಾಡಿದರೂ ಕೂಡ ಶಿವರಾಮೇಗೌಡ ಸೆಲೆಬ್ರೆಟಿ ಇದ್ದಂತೆ ಎನ್ನುತ್ತಾರೆ. ಇದೆಲ್ಲಾ ತಾಲೂಕಿನ ಜನರು ಕೊಟ್ಟಿರುವ ಕೊಡುಗೆ ಎಂದರು.
ಚಲುವರಾಯಸ್ವಾಮಿ ಮಂತ್ರಿಯಾಗಿರುವುದರಿಂದ ಯಾವ ಅಧಿಕಾರಿಗಳಿಗಾದರೂ ಹೇಳಿ ಕೆಲಸ ಮಾಡಿಸುತ್ತಾರೆ. ನಾನೂ ಕೂಡ ಮಾಜಿ ಶಾಸಕ, ಮಾಜಿ ಸಂಸದನಿದ್ದೇನೆ. ಹಾಗಾಗಿ ನನ್ನ ಬೆಂಬಲಿಗರಿಗೆ ನಾನೇ ಸಹಾಯ ಮಾಡುತ್ತೇನೆ. ವಾರಕ್ಕೊಮ್ಮೆ ಪಟ್ಟಣಕ್ಕೆ ಬರುತ್ತೇನೆ. ಕೊಪ್ಪ ಹೋಬಳಿಗೂ ಭೇಟಿ ಕೊಟ್ಟು ಕಾರ್ಯಕರ್ತರ ಸಮಸ್ಯೆ ಆಲಿಸುತ್ತೇನೆ. ಯಾವ ಕೆಲಸವಾಗಬೇಕೋ ಅದೆಲ್ಲವನ್ನು ಛಡಿ ಹಿಡಿದು ಅಧಿಕಾರಿಗಳಿಂದ ಕೆಲಸ ಮಾಡಿಸುವ ಹಕ್ಕು ನನಗಿದೆ ಎಂದರು.
ಸಹಕಾರ ಸಂಘಗಳ ಚುನಾವಣೆ ಯಾವುದೇ ರಾಜಕೀಯ ಪಕ್ಷದ ಚಿಹ್ನೆಯೊಂದಿಗೆ ನಡೆಯುವುದಿಲ್ಲ. ಪಕ್ಷದ ಚಿಹ್ನೆಯೊಂದಿಗೆ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ ಎಂದರು.
ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆಂದಿದ್ದರೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಬೇಡ ಎನ್ನುತ್ತಿರಲಿಲ್ಲ. ನನ್ನ ಬೆಂಬಲಿಗರೂ ಸಹ ಬಹಳಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ಆದರೆ ಸಹಕಾರ ಸಂಘ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಚಿವರ ಜೊತೆಗಿದ್ದು ಬೆಂಬಲಿಸಬೇಕೆಂದು ನಿರ್ಧರಿಸಿದ್ದೇನೆ. ಸಚಿವರ ಪುತ್ರ ಸಚ್ಚಿನ್ ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದುಬರಲೆಂದು ಶುಭ ಹಾರೈಸುತ್ತೇನೆ ಎಂದರು.
ಮದ್ದೂರು: ಸರ್ಕಾರ ಮತ್ತು ಪಕ್ಷದಲ್ಲಿ ಯಾವುದೇ ಬದಲಾವಣೆಗಳಾದರೂ ಅದನ್ನು ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಹಾಗೂ ಪಕ್ಷದ ವರಿಷ್ಠರೇ ತೀರ್ಮಾನ ಮಾಡುತ್ತಾರೆ. ಇದರಲ್ಲಿ ನಾವು ಭಾಗಿಯಾವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಸೇರಿದಂತೆ ಸರ್ಕಾರ ಮಟ್ಟದಲ್ಲಿ ಯಾವುದೇ ಬೆಳವಣಿಗೆಗಳು ನಡೆದರೂ ಅದನ್ನು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ವರಿಷ್ಠರೇ ತೀರ್ಮಾನ ಮಾಡುತ್ತಾರೆ. ಸಚಿವನಾಗಿ ನಮ್ಮ ಕೆಲಸ ಏನಿದೆಯೇ ಅಷ್ಟು ಮಾತ್ರ ಮಾಡುತ್ತೇವೆ ಎಂದರು.
ಸರ್ಕಾರದಲ್ಲಿ ಕೆಲವು ಸಚಿವ ಸ್ಥಾನಗಳು ಬದಲಾವಣೆಯಾಗಬಹುದು. ಕೆಲ ಸಚಿವರನ್ನು ಕೈಬಿಡಬಹುದು, ಹೊಸಬರಿಗೆ ಅವಕಾಶ ಸಿಗಬಹುದು. ಈಗ ಇರುವ ಸಚಿವ ಸ್ಥಾನಗಳ ಖಾತೆಗಳು ಕೂಡ ಅದಲು ಬದಲಾಗುತ್ತದೆ. ಇದು ಆಗಲ್ಲ ಅಂತ ನಾನು ಹೇಳುವುದಿಲ್ಲ ಎಂದರು
ಸಿದ್ದರಾಮಯ್ಯ ಉತ್ತರಾಧಿಕಾರಿ ವಿಚಾರವಾಗಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಯಾವ ಸಂದರ್ಭಕ್ಕೆ ಏನು, ಯಾಕೆ ಹೇಳಿದರೂ ಗೊತ್ತಿಲ್ಲ. ಆ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.