ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಮತ್ತಷ್ಟು ಪ್ರದೇಶ ಸೇರ್ಪಡೆ : ಡಿ.ಕೆ. ಶಿವಕುಮಾರ್‌

KannadaprabhaNewsNetwork |  
Published : Oct 25, 2025, 01:00 AM ISTUpdated : Oct 25, 2025, 07:38 AM IST
DK Shivakumar

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಗೆ ಬೆಂಗಳೂರು ಹೊರ ವಲಯದ ಮತ್ತಷ್ಟು ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದು, ಈ ಸಂಬಂಧ ಹೊರವಲಯದ ಪ್ರದೇಶಗಳ ಸಮೀಕ್ಷೆ ನಡೆಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದ್ದಾರೆ.

  ಬೆಂಗಳೂರು :  ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಗೆ ಬೆಂಗಳೂರು ಹೊರ ವಲಯದ ಮತ್ತಷ್ಟು ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದು, ಈ ಸಂಬಂಧ ಹೊರವಲಯದ ಪ್ರದೇಶಗಳ ಸಮೀಕ್ಷೆ ನಡೆಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದ್ದಾರೆ.

ಜತೆಗೆ, ಹೊರ ವಲಯದಲ್ಲಿರುವ ಪ್ರದೇಶಗಳಲ್ಲಿನ ಬಿ ಖಾತಾ ಆಸ್ತಿಗಳಿಗೂ ಎ ಖಾತಾ ನೀಡುವ ಸಂಬಂಧ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಶುಕ್ರವಾರ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಡಿ.ಕೆ. ಶಿವಕುಮಾರ್‌ ಅವರು, ಜಿಬಿಎ ವ್ಯಾಪ್ತಿಗೆ ಸೇರಿಸಬಹುದಾದ ಪ್ರದೇಶಗಳ ನಕ್ಷೆಗಳನ್ನು ಪರಿಶೀಲನೆ ನಡೆಸಿ ಸಮೀಕ್ಷೆಗೆ ಸೂಚಿಸಿದರು ಎಂದು ತಿಳಿದುಬಂದಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯ 12 ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿದ್ದು, ಭವಿಷ್ಯದಲ್ಲಿ ಬೆಂಗಳೂರು ಬೆಳೆಯಲಿದೆ. ಹೀಗಾಗಿ ಬಿಎಂಆರ್‌ಡಿಎ ವ್ಯಾಪ್ತಿಯ ಪ್ರದೇಶಗಳು ಇಂದಲ್ಲ ನಾಳೆ ಬೆಂಗಳೂರು ನಗರದ ಭಾಗವಾಗಲಿವೆ. ಈ ಸಂಬಂಧ ಸಮೀಕ್ಷೆ ನಡೆಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಸೌಕರ್ಯ ಅಭಿವೃದ್ಧಿ ಅಗತ್ಯ:

ಬೆಳೆಯಲಿರುವ ಬೆಂಗಳೂರಿನ ಭವಿಷ್ಯಕ್ಕಾಗಿ ಈಗಿನಿಂದಲೇ ರಸ್ತೆ ಅಗಲೀಕರಣ‌ ಮತ್ತಿತರ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಬೇಕಿದೆ. ಇದಕ್ಕೆ ಸೂಕ್ತ ಯೋಜನೆ ಮಾಡಬೇಕಿದೆ. ಸಿಎಂಸಿ, ಪಟ್ಟಣ ಪಂಚಾಯತಿ ಸೇರಿದಂತೆ ಒಂದಷ್ಟು ‌ಪ್ರದೇಶಗಳಲ್ಲಿ ರಸ್ತೆಗಳು ಕಿರಿದಾಗಿವೆ. ಭವಿಷ್ಯದಲ್ಲಿ ಕಷ್ಟಪಡುವ ಬದಲು ಈಗಲೇ ಲೋಕೋಪಯೋಗಿ, ನಗರ ಯೋಜನೆ ಇಲಾಖೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಎಂದು ಸೂಚನೆ ನೀಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.

ಡಿಜಿಟಲೀಕರಣ: ರಾಜಕಾಲುವೆ ಒತ್ತುವರಿ, ಸರ್ಕಾರಿ ಆಸ್ತಿ ಒತ್ತುವರಿ ಸಮಸ್ಯೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ಬೆಂಗಳೂರು ನಗರ ಮಾದರಿಯಲ್ಲಿಯೇ ಇಲ್ಲಿಯೂ ಎಲ್ಲ ಆಸ್ತಿ ದಾಖಲೆಗಳನ್ನು ಈಗಿನಿಂದಲೇ ಡಿಜಿಟಲೀಕರಣ ಮಾಡಲಾಗುವುದು. 110 ಹಳ್ಳಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಸೇರ್ಪಡೆಯಾಗುವ ಪ್ರದೇಶಗಳಲ್ಲಿ ನಾಗರಿಕ ಪ್ರಜ್ಞೆ ಮೂಡಿಸಬೇಕಿದೆ.

ನಗರ ವ್ಯಾಪ್ತಿಯಲ್ಲಿ ಬದುಕಲು ಬೇಕಾದ ರೀತಿ-ನೀತಿಗಳ ಬಗ್ಗೆ ಮಾನಸಿಕವಾಗಿ ತಯಾರು ಮಾಡಲಾಗುತ್ತದೆ ಎಂದರು.

ಹೊರ ವಲಯದಲ್ಲೂ ಖಾತಾ ಪರಿವರ್ತನೆ

ಹೊರವಲಯ ಗಡಿಭಾಗದ ಒಂದಷ್ಟು ಪಂಚಾಯತಿಗಳು, ಮುನ್ಸಿಪಾಲಿಟಿಗಳು ಭವಿಷ್ಯದಲ್ಲಿ ಬೆಂಗಳೂರು ನಗರದ ಒಳಗೆ ಸೇರುತ್ತವೆಯಾದ್ದರಿಂದ ಈಗಿನಿಂದಲೇ ಮಾನಸಿಕವಾಗಿ ತಯಾರು ಮಾಡಲಾಗುತ್ತಿದೆ. ಈ ಪ್ರದೇಶಗಳಲ್ಲಿಯೂ ಸಹ ಬಿ ಖಾತೆಯಿಂದ ಎ ಖಾತೆ ಪರಿವರ್ತನೆ ವ್ಯವಸ್ಥೆಗೆ ತಯಾರಿ ನಡೆಸಲು ಸೂಚನೆ ನೀಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.ಬೆಂಗಳೂರು ನಗರದಲ್ಲಿ ಆಸ್ತಿ ಮೌಲ್ಯ ಆಧಾರಿತ ತೆರಿಗೆ ಸಂಗ್ರಹದಂತೆ ಈ ಭಾಗದಲ್ಲಿಯೂ ಸಹ ತೆರಿಗೆ ಸಂಗ್ರಹದಲ್ಲಿ ಏಕರೂಪತೆ ತರಲು ಸೂಚಿಸಿದ್ದೇನೆ. ಈಗಿನಿಂದಲೇ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು ಎಂದೂ ಸೂಚನೆ ನೀಡಿದ್ದೇನೆ. ಏಕೆಂದರೆ ಮುಂದೆ ನಾವೇ ನೀರು ಮತ್ತಿತರ ಮೂಲಸೌಕರ್ಯಗಳನ್ನು ನೀಡಬೇಕಾಗುತ್ತದೆ. ಆದ ಕಾರಣ ಅಕ್ರಮ ಕಟ್ಟಡ, ಬಡಾವಣೆ ನಿರ್ಮಾಣ ಯೋಜನೆಗಳಿಗೆ ಕಡಿವಾಣ ಹಾಕಬೇಕಿದೆ. ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು

PREV
Read more Articles on

Recommended Stories

ನಿತೀಶ್‌ ನೇತೃತ್ವದಲ್ಲಿ ಈ ಸಲ ದಾಖಲೆಯ ಜಯ : ಮೋದಿ
ಎಲೆಕ್ಟ್ರಿಕ್‌ ಬಸ್‌ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ : ರಾಮಲಿಂಗಾರೆಡ್ಡಿ