ನಿತೀಶ್‌ ನೇತೃತ್ವದಲ್ಲಿ ಈ ಸಲ ದಾಖಲೆಯ ಜಯ : ಮೋದಿ

Published : Oct 25, 2025, 01:25 PM IST
Narendra Modi

ಸಾರಾಂಶ

ಬಿಹಾರದಲ್ಲಿ ಚುನಾವಣೆಯ ಕಾವು ದಿನೇ ದಿನೇ ತೀವ್ರವಾಗುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಸಮಷ್ಟಿಪುರ ಮತ್ತು ಬೇಗುಸರೈನಲ್ಲಿ ಒಂದರ ಹಿಂದೆ ಒಂದರಂತೆ ರ್‍ಯಾಲಿಗಳನ್ನು ನಡೆಸಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

 ಸಮಷ್ಠಿಪುರ/ಬೇಗೂಸರಾಯ್‌ :  ಬಿಹಾರದಲ್ಲಿ ಚುನಾವಣೆಯ ಕಾವು ದಿನೇ ದಿನೇ ತೀವ್ರವಾಗುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಸಮಷ್ಟಿಪುರ ಮತ್ತು ಬೇಗುಸರೈನಲ್ಲಿ ಒಂದರ ಹಿಂದೆ ಒಂದರಂತೆ ರ್‍ಯಾಲಿಗಳನ್ನು ನಡೆಸಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಅಲ್ಲದೆ, ‘ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ಎನ್‌ಡಿಎ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲಿದ್ದು, ದಾಖಲೆಯ ಅಂತರದಲ್ಲಿ ಗೆಲ್ಲಲಿದೆ. ರಾಜ್ಯದಲ್ಲಿ ಸುಶಾಸನ ಸರ್ಕಾರ ಪುನಃ ಬರಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ.

ನಿತೀಶ್‌ ಕುಮಾರ್‌ ‘ಸುಶಾಸನ ಬಾಬು’ ಎಂದೇ ಪ್ರಸಿದ್ಧರಾಗಿದ್ದಾರೆ. ಹೀಗಿರುವಾಗ ಮೋದಿ ಅವರು, ‘ಪುನಃ ಸುಶಾಸನ ಸರ್ಕಾರ’ ಎಂಬ ಪದ ಬಳಸಿರುವ ಕಾರಣ ಪುನಃ ಅವರೇ ಸಿಎಂ ಆಗಬಹುದೆ ಎಂಬ ವಿಶ್ಲೇಷಣೆ ಆರಂಭವಾಗಿದೆ. ಎನ್‌ಡಿಎ ಈವರೆಗೂ ಅಧಿಕೃತವಾಗಿ ಸಿಎಂ ಅಭ್ಯರ್ಥಿಯನ್ನು ಘೋಷಿಸಿಲ್ಲ.

ಸಮಷ್ಟಿಪುರ ರ್‍ಯಾಲಿಯಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಸಮಷ್ಟಿಪುರ ರ್‍ಯಾಲಿಯಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ‘ಇಂಡಿಯಾ ಕೂಟದ್ದು ಮಹಾಘಟಬಂಧನವಲ್ಲ, ಬದಲಾಗಿ ಮಹಾಲಠಬಂಧನ (ಬಿರುಕಿನ ಒಕ್ಕೂಟ). ಆರ್‌ಜೆಡಿ ಮತ್ತು ಕಾಂಗ್ರೆಸ್‌ ನಾಯಕರು ಅತಿ ಭ್ರಷ್ಟರು. ಅವರೆಲ್ಲ ಜಾಮೀನಿನ ಮೇಲೆ ಹೊರಗಿದ್ದಾರೆ. ದಶಕಗಳಿಂದ ಅಧಿಕಾರದಿಂದ ಹೊರಗಿದ್ದರೂ, ಜೆಎಂಎಂನಂತಹ ಮಿತ್ರಪಕ್ಷಗಳನ್ನು ಕಡೆಗಣಿಸುವಷ್ಟು ದುರಹಂಕಾರ ಹೊಂದಿದ್ದಾರೆ. ವಿಕಾಸಶೀಲ ಇನ್ಸಾನ್ ಪಕ್ಷದ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ನಿತೀಶ್‌ ಕುಮಾರ್‌ ಪರವಾಗಿ ಬ್ಯಾಟಿಂಗ್‌

ಬೇಗೂಸರಾಯ್‌ನಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪರವಾಗಿ ಬ್ಯಾಟಿಂಗ್‌ ಮಾಡಿದ ಮೋದಿ, ‘ನಿತೀಶ್‌ ಕುಮಾರ್‌ 2005ರಲ್ಲಿ ಅಧಿಕಾರಕ್ಕೆ ಬಂದರು. ಆದರೆ ಅವರ ಅಧಿಕಾರಾವಧಿಯ ಸುಮಾರು ಒಂದು ದಶಕದ ಕಾಲ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪ್ರತಿಕೂಲ ಪರಿಸ್ಥಿತಿಯಲ್ಲಿತ್ತು. ಬಿಹಾರದ ಎನ್‌ಡಿಎ ಸರ್ಕಾರಕ್ಕೆ ಸಹಕಾರ ನೀಡಿದರೆ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಆರ್‌ಜೆಡಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿತ್ತು’ ಎಂದು ಆರೋಪಿಸಿದರು.

ಎರಡೂ ರ್‍ಯಾಲಿಗಳಲ್ಲಿ ತಮ್ಮ ಮೊಬೈಲ್‌ ಬೆಳಕನ್ನು ಆನ್‌ ಮಾಡುವಂತೆ ಜನರಿಗೆ ಕೋರಿದ ಮೋದಿ, ‘ಯಾವಾಗ ಸುತ್ತಲೂ ಸಾಕಷ್ಟು ಬೆಳಕು ಇರುತ್ತದೆಯೋ ಆಗ ಲಾಟೀನಿನ ಅಗತ್ಯವಿರುವುದಿಲ್ಲ’ ಎಂದು ಲಾಟೀನು ಗುರತಿನ ಆರ್‌ಜೆಡಿಯನ್ನು ಮಾರ್ಮಿಕವಾಗಿ ಟೀಕಿಸಿದರು.

PREV
Read more Articles on

Recommended Stories

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಮತ್ತಷ್ಟು ಪ್ರದೇಶ ಸೇರ್ಪಡೆ : ಡಿ.ಕೆ. ಶಿವಕುಮಾರ್‌
ಎಲೆಕ್ಟ್ರಿಕ್‌ ಬಸ್‌ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ : ರಾಮಲಿಂಗಾರೆಡ್ಡಿ