ಖಾತಾ ಪರಿವರ್ತನೆ ಬೋಗಸ್‌, ಯಾರೂ ಹಣ ಕಟ್ಟಬೇಡಿ : ಎಚ್‌.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Oct 26, 2025, 02:00 AM ISTUpdated : Oct 26, 2025, 09:24 AM IST
HD Kumaraswamy

ಸಾರಾಂಶ

‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಎನ್ನುವುದೇ ಬೋಗಸ್‌. ಖಜಾನೆ ಖಾಲಿ ಆಗಿರುವುದರಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರ ದುಡ್ಡು ಹೊಡೆಯಲು ಈ ಸುಲಿಗೆ ಕಾರ್ಯಕ್ರಮ ತಂದಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

 ಬೆಂಗಳೂರು :  ‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಎನ್ನುವುದೇ ಬೋಗಸ್‌. ಖಜಾನೆ ಖಾಲಿ ಆಗಿರುವುದರಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರ ದುಡ್ಡು ಹೊಡೆಯಲು ಈ ಸುಲಿಗೆ ಕಾರ್ಯಕ್ರಮ ತಂದಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.ಯಾರೂ ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಹಣ ಕಟ್ಟಬೇಡಿ. ಎರಡು ವರ್ಷಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಡಿಮೆ ದರದಲ್ಲಿ ನಿಮಗೆ ಖಾತೆ ಮಾಡಿಕೊಡುತ್ತೇವೆ. ಈ ಸರ್ಕಾರದ ಬೋಗಸ್ ಆಮಿಷಕ್ಕೆ ಮರುಳಾಗಬೇಡಿ ಎಂದೂ ಅವರು ಮನವಿ ಮಾಡಿದ್ದಾರೆ. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆ ಸರಕನ್ನಾಗಿ ಮಾಡಿಕೊಂಡಿದೆ. ನಿಮ್ಮನ್ನು ಉಳಿಸುವ, ನಿಮ್ಮ ಹಿತ ಕಾಯುವ ಜವಾಬ್ದಾರಿ ನಮ್ಮದು. ಎರಡು ವರ್ಷ ಕಳೆದ ಬಳಿಕ ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಅತ್ಯಂತ ಸರಳ, ಸುಲಭವಾಗಿ ಖಾತೆ ಮಾಡಿಕೊಡುತ್ತೇವೆ.  ನಿಮಗೆ ಯಾವುದೇ ಹಣಕಾಸಿನ ಹೊರೆ ಆಗುವುದಿಲ್ಲ ಎಂದು ಹೇಳಿದರು. 

ಇದು 6ನೇ ದೋಖಾ ಗ್ಯಾರಂಟಿ:

ಈಗಾಗಲೇ ಬೆಲೆ ಏರಿಕೆ ಮತ್ತು ತೆರಿಗೆ ಹೇರಿಕೆಯಿಂದ ಜನತೆ ಬಸವಳಿದಿದ್ದಾರೆ. ಈ ಹೊತ್ತಲ್ಲಿ ರಾಜ್ಯ ಸರ್ಕಾರ ‘ಎ’ ಖಾತಾ ಬಗ್ಗೆ ದೀಪಾವಳಿ ಕೊಡುಗೆ ಎಂದು ಪುಟಗಟ್ಟಲೆ ಜಾಹೀರಾತು ನೀಡಿದೆ. ‘ಎ’ ಖಾತಾ ಎನ್ನುವ ದೋಖಾ ಕಾರ್ಯಕ್ರಮವನ್ನು 6ನೇ ಗ್ಯಾರಂಟಿಯಾಗಿ ಜನರಿಗೆ ದೀಪಾವಳಿ ಉಡುಗೊರೆ ಕೊಟ್ಡಿದ್ದೇವೆ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಳಿದ್ದಾರೆ. ದೀಪಾವಳಿ ಕೊಡುಗೆ ಎಂದರೆ ಜನರಿಂದ ಲಕ್ಷ ಲಕ್ಷ ಪೀಕುವುದೇ ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನಿಸಿದರು.

ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 1995ರಿಂದಲೂ ಈ ಖಾತಾ ಸಮಸ್ಯೆ ಇದೆ. ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ನಗರ ಪಾಲಿಕೆ ವಾರ್ಡ್‌ಗಳ ಸಂಖ್ಯೆಯನ್ನು 60ರಿಂದ 90ಕ್ಕೆ ಏರಿಸಿದ್ದರು. ಈ ವೇಳೆ ಬೆಂಗಳೂರು ನಗರದ ಹೊರವಲಯ ಅಭಿವೃದ್ಧಿ ಆಗಿರಲಿಲ್ಲ. 1997ರಲ್ಲಿ ಚದರ ಮೀಟರ್‌ಗೆ 110 ರು. ನಿಗದಿ ಮಾಡಲಾಗಿತ್ತು. ಫಾರಂ 19ರ ಮುಖಾಂತರ ಖಾತೆ ವಿತರಣೆ ಮಾಡಲಾಗುತ್ತಿತ್ತು. 30/40 ಅಳತೆಯ ನಿವೇಶನಕ್ಕೆ ಅಂದು 12,263 ರು. ಆಗುತ್ತಿತ್ತು. ಭೂ ಪರಿವರ್ತನೆಗೆ 1,500 ರು. ನಿಗದಿ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.

ಮತ್ತೆ ಏಕೆ ಹಣ ಪಡೆಯಬೇಕು?:

ನಾನು ಮೊದಲ ಬಾರಿ ಸಿಎಂ ಆದಾಗ ಬೆಂಗಳೂರು ನಗರ ಪಾಲಿಕೆಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದೆ. ವಾರ್ಡ್‌ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಿದ್ದೆ. ಅದಕ್ಕೆ 110 ಹಳ್ಳಿಗಳನ್ನು ಸೇರಿಸಿದ್ದೆ. ಈ ಸಮಯದಲ್ಲಿ ನಿವೇಶನಗಳ ಖಾತೆಗೆ 60 ಮತ್ತು ಅದರೊಳಗಿನ ಪ್ರತಿ ಚದರ ಮೀಟರ್‌ಗೆ 200 ರು., 60-120 ಚದರ ಮೀಟರ್‌ಗೆ 400 ರು. 120 ಚದರ ಮೀಟರ್‌ ಮೇಲ್ಪಟ್ಟ ನಿವೇಶನಕ್ಕೆ 600 ರು. ನಿಗದಿ ಮಾಡಿದ್ದೆವು. ಇದರ ವಿರುದ್ಧ ಕೆಲವರು ಕೋರ್ಟ್‌ಗೆ ಹೋಗಿದ್ದರು. ಈ ವೇಳೆ ಕೋರ್ಟ್‌ 15 ದಿನಗಳೊಳಗೆ ಖಾತೆ ಮಾಡಿಕೊಡುವಂತೆ ಸೂಚಿಸಿತ್ತು. ಅಂದು ಖಾತೆ ಮಾಡಿಕೊಡಲು ಸರ್ಕಾರ/ ಬಿಬಿಎಂಪಿ ಜನರಿಂದ ಹಣ ಪಡೆದಿದೆ. ಈಗ ಇವರು ಮತ್ತೆ ಏಕೆ ಹಣ ಪಡೆಯಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದರು.

PREV
Read more Articles on

Recommended Stories

ಸಂಪುಟ ಪುನಾರಚನೆಗೆ 4 ತಿಂಗಳ ಹಿಂದೆಯೇ ಸೂಚನೆ ಇತ್ತು: ಸಿಎಂ
5 ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ : ಯತೀಂದ್ರ