ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ಅತೃಪ್ತರ ಜೊತೆ ಯಡಿಯೂರಪ್ಪ ನಡೆಸಿದ ಸಂಧಾನ ಫಲಪ್ರದವಾಗಿದ್ದು, ದಾವಣಗೆರೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ.
ನಗರ ಹೊರವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಮಂಗಳವಾರ ಯಡಿಯೂರಪ್ಪ ಅವರು ಅತೃಪ್ತರ ಜೊತೆ ರಹಸ್ಯ ಸಭೆ ನಡೆಸಿದರು. ಸುಮಾರು 2 ತಾಸು ಸಂಧಾನ ಸಭೆ ನಡೆಯಿತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ ಅಗರವಾಲ್ ಕೂಡ ಸಭೆಯಲ್ಲಿ ಹಾಜರಿದ್ದರು. ಅತೃಪ್ತರ ಪರ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ, ವಿಪ ಮಾಜಿ ಸಚಿವ ಡಾ.ಎ.ಎಚ್. ಶಿವಯೋಗಿಸ್ವಾಮಿ ಹಾಜರಿದ್ದರು.
ಸಭೆ ಆರಂಭವಾಗುತ್ತಿದ್ದಂತೆ ಅತೃಪ್ತರು ತಮ್ಮ ಅಸಮಾಧಾನ ಹೊರಹಾಕಿದರು. ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಬದಲಿಸಲೇ ಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ, ರೇಣುಕಾಚಾರ್ಯ ಹಾಗೂ ಜಿ.ಎಂ.ಸಿದ್ದೇಶ್ವರ ಬಣದವರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಕೈ-ಕೈ ಮಿಲಾಯಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಯಡಿಯೂರಪ್ಪ ಅವರು ಎರಡೂ ಕಡೆಯವರನ್ನು ಸಮಾಧಾನಪಡಿಸಿ, ಅಭ್ಯರ್ಥಿ ಬದಲಾವಣೆ ಸಾಧ್ಯವಿಲ್ಲ.
ಹಿರಿಯರಾದ ಎಸ್.ಎ.ರವೀಂದ್ರನಾಥರ ನೇತೃತ್ವದಲ್ಲೇ ಚುನಾವಣೆ ನಡೆಯಲಿ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ಬಳಿಕ, ಯಡಿಯೂರಪ್ಪ ಹಾಗೂ ಇತರ ನಾಯಕರು ಬೆಳಗಾವಿಯ ಅತೃಪ್ತಿ ಶಮನಗೊಳಿಸುವ ನಿಟ್ಟಿನಲ್ಲಿ ಬೆಳಗಾವಿಗೆ ತೆರಳಿದರು.ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾಧಾಮೋಹನ ಅಗರವಾಲ್, ದಾವಣಗೆರೆಯಲ್ಲಿ ಉಂಟಾಗಿದ್ದ ಗೊಂದಲ ಶಮನವಾಗಿದೆ.
ಗಾಯತ್ರಿ ಸಿದ್ದೇಶ್ವರ ಅವರೇ ನಮ್ಮ ಅಭ್ಯರ್ಥಿಯಾಗಿದ್ದು, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದರು.
ಯಡಿಯೂರಪ್ಪ ಮಾತನಾಡಿ, 2 ಗಂಟೆ ಕಾಲ ಎಲ್ಲರ ಭಾವನೆಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಿದ್ದೇವೆ. ಗಾಯತ್ರಿ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂಬ ಸಂದೇಶ ನೀಡಿದ್ದೇವೆ.
ರವೀಂದ್ರನಾಥ್ ನೇತೃತ್ವದಲ್ಲೇ ಇಲ್ಲಿ ಚುನಾವಣೆ ನಡೆಯಲಿದೆ. ಆಲ್ ಈಸ್ ವೆಲ್. ಎಲ್ಲವೂ ಒಳ್ಳೆಯದಾಗಿದೆ ಎಂದು ತಿಳಿಸಿದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ಗೊಂದಲ ಬಗೆಹರಿದಿದೆ. ಗಾಯತ್ರಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.