ಹೋರಾಟ ಮಾಡಿ, ಹಾರಾಟ ಬಿಡಿ : ಬಸನಗೌಡ ಪಾಟೀಲ್ ಯತ್ನಾಳ್ಗೆ ಕೇಂದ್ರ ಶಿಸ್ತು ಸಮಿತಿ ಸಂದೇಶ

KannadaprabhaNewsNetwork |  
Published : Dec 05, 2024, 12:30 AM ISTUpdated : Dec 05, 2024, 09:26 AM IST
BasavanaGowda Patel Yatnal

ಸಾರಾಂಶ

‘ವಕ್ಫ್‌ ವಿರುದ್ಧ ನಿಮ್ಮ ಹೋರಾಟವನ್ನು ಮುಂದುವರಿಸಿ. ಆದರೆ, ಪಕ್ಷದ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ. ಏನಾದರೂ ಇದ್ದರೆ ವರಿಷ್ಠರ ಮುಂದೆ ಹೇಳಿ’ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಖಡಕ್‌ ಸೂಚನೆ ನೀಡಿದೆ.

ನವದೆಹಲಿ/ಬೆಂಗಳೂರು : ‘ವಕ್ಫ್‌ ವಿರುದ್ಧ ನಿಮ್ಮ ಹೋರಾಟವನ್ನು ಮುಂದುವರಿಸಿ. ಆದರೆ, ಪಕ್ಷದ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ. ಏನಾದರೂ ಇದ್ದರೆ ವರಿಷ್ಠರ ಮುಂದೆ ಹೇಳಿ’ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಖಡಕ್‌ ಸೂಚನೆ ನೀಡಿದೆ.

ಪರಿಣಾಮ ಯತ್ನಾಳ್‌ ವಿರುದ್ಧ ಅಮಾನತಿನಂಥ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಕ್ಷೀಣಿಸಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ಸರಿದೂಗಿಸುವ ದಿಕ್ಕಿನಲ್ಲಿ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಯತ್ನಾಳ್ ಅವರು ನಡೆಸುತ್ತಿರುವ ವಕ್ಫ್ ವಿರುದ್ಧದ ಹೋರಾಟಕ್ಕೆ ಬ್ರೇಕ್ ಹಾಕದೆ ಅವರ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ. ಜತೆಗೆ ಯತ್ನಾಳ್ ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುವ ಅಥವಾ ಶನಿವಾರ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ಪ್ರಸ್ತಾಪಿಸಿ ಚರ್ಚಿಸುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಯಲ್ಲಿ ಒಡಕು ಮೂಡಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಆಹಾರವಾಗದಂತೆ ನೋಡಿಕೊಳ್ಳುವತ್ತ ವರಿಷ್ಠರು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಶಿಸ್ತು ಸಮಿತಿ ಮುಂದೆ ಹಾಜರು:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದ ಹಿನ್ನೆಲೆಯಲ್ಲಿ ಕೇಂದ್ರ ಶಿಸ್ತು ಸಮಿತಿ ಯತ್ನಾಳ್‌ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಹತ್ತು ದಿನಗಳ ಒಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ತಿಳಿಸಿತ್ತು. ಅದರಂತೆ ಅವರು ಬುಧವಾರ ದೆಹಲಿಯಲ್ಲಿ ಶಿಸ್ತು ಸಮಿತಿ ಮುಂದೆ ಹಾಜರಾದರು.

ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್‌ ಅವರ ಮುಂದೆ ಹಾಜರಾಗಿ, ನೋಟಿಸ್‌ಗೆ ವಿವರಣೆ ನೀಡಿದರು. ವಿಜಯೇಂದ್ರ ಬಣದ ವಿರುದ್ಧ ಅವರು ಆರೋಪ ಪಟ್ಟಿ ಸಲ್ಲಿಸಿದರು ಎನ್ನಲಾಗಿದೆ. ಈ ವೇಳೆ, ವಕ್ಫ್‌ ವಿರುದ್ಧದ ಅವರ ಹೋರಾಟವನ್ನು ಶ್ಲಾಘಿಸಿದ ಪಾಠಕ್‌, ನಿಮ್ಮ ಹೋರಾಟವನ್ನು ಮುಂದುವರಿಸಿ. ಆದರೆ, ಪಕ್ಷದ ವಿಚಾರವನ್ನು ಮಾಧ್ಯಮದ ಮುಂದೆ ಮಾತನಾಡಬೇಡಿ, ವರಿಷ್ಠರ ಮುಂದೆ ಹೇಳಿ ಎಂದು ಸೂಚನೆ ನೀಡಿದರು ಎನ್ನಲಾಗಿದೆ.ಬಳಿಕ, ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್‌, ಒಂದು ಗಂಟೆಗೂ ಅಧಿಕ ಕಾಲ ವಿಸ್ತೃತವಾಗಿ ಮಾಹಿತಿ ನೀಡಿದ್ದೇನೆ. ಅವರು ನಾನು ನೀಡಿದ ಮಾಹಿತಿಯನ್ನು ಕೇಳಿಸಿಕೊಂಡಿದ್ದಾರೆ. ನಾನು ನೀಡಿದ ಮಾಹಿತಿಯನ್ನು ವರಿಷ್ಠರಿಗೆ ತಿಳಿಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು, ಗೃಹ ಸಚಿವರ ಅಮಿತ್‌ ಶಾ, ಹಾಗೂ ಪ್ರಧಾನಿ ಮೋದಿಗೆ ತಿಳಿಸುವುದಾಗಿ ಹೇಳಿದ್ದಾರೆ. ವಕ್ಫ್ ಹೋರಾಟ ಮುಂದುವರಿಸಲು ಸೂಚನೆ ನೀಡಿದ್ದಾರೆ. ಈಗಿನ ರೀತಿಯಲ್ಲಿ ಹೋರಾಟ ಮುಂದುವರಿಸಿ ಎಂದಿದ್ದಾರೆ. ನಮ್ಮ ಹೋರಾಟವನ್ನು ಶ್ಲಾಘಿಸಿದ್ದಾರೆ ಎಂದರು.

ನಿಮಗೆ ಒಳ್ಳೆಯ ಭವಿಷ್ಯ ಇದೆ. ಶಾಂತವಾಗಿರಿ. ಪಕ್ಷದ ವಿಚಾರವನ್ನು ಮಾಧ್ಯಮದ ಮುಂದೆ ಮಾತನಾಡಬೇಡಿ, ವರಿಷ್ಠರು ಮುಂದೆ ಹೇಳಿ ಎಂದು ಸಲಹೆ ನೀಡಿದ್ದಾರೆ. ಗುರುವಾರ ಜೆಪಿಸಿ ಸಭೆಯಲ್ಲಿ ಭಾಗಿಯಾಗಿ ಬೆಂಗಳೂರಿಗೆ ಮರಳುತ್ತೇನೆ ಎಂದು ತಿಳಿಸಿದರು.

ಯತ್ನಾಳ್‌ ನಮ್ಮವರೇ, ಕೂತು ಮಾತಾಡ್ತೀವಿ

ಯತ್ನಾಳ್‌ ಕೂಡ ನಮ್ಮ ಪಕ್ಷದವರೆ. ಅವರು ಹೊರಗಿನವರಲ್ಲ. ಯಾವುದೋ ಕಾರಣಕ್ಕಾಗಿ ಆಕ್ರೋಶದಲ್ಲಿರಬಹುದು. ಆದರೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆನ್ನುವುದು ನನ್ನ ಅಪೇಕ್ಷೆ. ಏನೇ ವಿಚಾರ ಇದ್ದರೂ ಮುಖಾಮುಖಿಯಾಗಿ ಕುಳಿತು ಮಾತನಾಡಬೇಕು. ಸಮಸ್ಯೆ ಬಗೆಹರಿಸಿಕೊಂಡು ಮುಂದೆ ನಡೆಯಬೇಕು.

- ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಬಿಎಸ್‌ವೈ ಹೇಳಿಕೆ ಸ್ವಾಗತ ಮಾಡ್ತೀನಿ

ಯಡಿಯೂರಪ್ಪ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ.

- ಬಸನಗೌಡ ಪಾಟೀಲ್‌ ಯತ್ನಾಳ್‌

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ