ಉಪಚುನಾವಣೆ ಫಲಿತಾಂಶ ಮೂಲಕ 2028ರಲ್ಲಿ ಕೈ ಗೆಲ್ಲಿಸುವ ಸಂದೇಶ : ಡಿಕೆಶಿ

Published : May 05, 2026, 07:35 AM IST
DK Shivakumar

ಸಾರಾಂಶ

 ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲೂ ಜನ ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆ ಜತೆಗೆ ದಕ್ಷ ಆಡಳಿತ ನೀಡುತ್ತಿರುವುದನ್ನು ಜನ ಗಮನಿಸಿದ್ದು, 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬೆಂಬಲ ನೀಡುವ ಸಂದೇಶ ನೀಡಿದ್ದಾರೆ -ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌  

  ಬೆಂಗಳೂರು :  ಕರ್ನಾಟಕದ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲೂ ಜನ ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಜತೆಗೆ ದಕ್ಷ ಆಡಳಿತ ನೀಡುತ್ತಿರುವುದನ್ನು ಜನ ಗಮನಿಸಿದ್ದು, 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬೆಂಬಲ ನೀಡುವ ಸಂದೇಶ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಚುನಾವಣಾ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಮತದಾರರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿ ಹಳ್ಳಿಗೆ ಭೇಟಿ ನೀಡಿ ಹಗಲಿರುಳು ಶ್ರಮಿಸಿದ ಪರಿಣಾಮ ಗೆಲುವು ಸಿಕ್ಕಿದೆ ಎಂದರು.

ಹೆಚ್ಚಿನ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದೆವು

ದಾವಣಗೆರೆ ದಕ್ಷಿಣದಲ್ಲಿ ಹೆಚ್ಚಿನ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದೆವು. ಆದರೂ, ಗೆಲುವು ಸಾಧಿಸಿದ್ದೇವೆ. ಇನ್ನು, ಬಾಗಲಕೋಟೆಯಲ್ಲಿ ಕಳೆದ ಚುನಾವಣೆಯಲ್ಲಿ ಗೆಲುವಿನ ಅಂತರ ಕಡಿಮೆಯಿತ್ತು. ಈಗ 22,000ಕ್ಕೂ ಹೆಚ್ಚಿನ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಂಪುಟ ಸಹೋದ್ಯೋಗಿಗಳು, ಶಾಸಕರು, ಪಕ್ಷದ ಪದಾಧಿಕಾರಿಗಳು, ಜಿಲ್ಲೆ ಮತ್ತು ಬ್ಲಾಕ್‌ ಅಧ್ಯಕ್ಷರು ಹಗಲಿರುಳು ದುಡಿದಿದ್ದಾರೆ ಎಂದರು.

ದಾವಣಗೆರೆಯಲ್ಲಿ ಪಕ್ಷದ ಕೆಲ ನಾಯಕರು ಬೇರೆ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಶಿವಕುಮಾರ್‌, ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಅದರ ಹೊರತಾಗಿ ಬೇರೆ ವಿಚಾರಗಳನ್ನು ಚರ್ಚೆ ಮಾಡುವುದಿಲ್ಲ. ಇತರ ವಿಚಾರಗಳನ್ನು ತಿದ್ದುವುದು, ಮಾರ್ಗದರ್ಶನ ನೀಡುವ ಕೆಲಸವನ್ನು ಪಕ್ಷದ ವ್ಯಾಪ್ತಿಯಲ್ಲಿ ಮಾಡುತ್ತೇವೆ ಎಂದರು.

ಕೇರಳ ನಿರೀಕ್ಷೆಯಂತೆ ಗೆಲುವು:

ಕೇರಳದಲ್ಲಿ ಬಹುದೊಡ್ಡ ಅಂತರದಿಂದ ಯುಡಿಎಫ್‌ ಗೆಲುವು ನೀಡಿದೆ. ಎಲ್‌ಡಿಎಫ್‌ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡರೂ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಕೇರಳದಲ್ಲಿ ನಿರೀಕ್ಷೆಯಂತೆ ಪಕ್ಷ ಗೆದ್ದಿದೆ. ತಮಿಳುನಾಡಿನಲ್ಲಿ ಡಿಎಂಕೆ ಸೋತಿದ್ದರೂ, ಬಿಜೆಪಿ ಅಂಗಪಕ್ಷವನ್ನೂ ಸೋಲಿಸಲಾಗಿದೆ. ಆ ಮೂಲಕ ಕೋಮುವಾದಿ ಶಕ್ತಿ ದೂರ ಇಡಲಾಗಿದೆ. ಅಲ್ಲಿನ ಮತದಾರರನ್ನು ಅಭಿನಂದಿಸುತ್ತೇನೆ ಎಂದು ಶಿವಕುಮಾರ್‌ ತಿಳಿಸಿದರು.

ಬಾಗಲಕೋಟೆಯಲ್ಲಿ ಈ ಹಿಂದೆ 5 ಸಾವಿರ ಇದ್ದ ಗೆಲುವಿನ ಅಂತರ ಈಗ 22 ಸಾವಿರಕ್ಕೆ ಏರಿಕೆಯಾಗಿದೆ. ಬಾಗಲಕೋಟೆ ಮಾದರಿಯಲ್ಲಿ ದಾವಣಗೆರೆಯಲ್ಲೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ದಾವಣಗೆರೆಯಲ್ಲಿ ಸ್ವಲ್ಪ ಮತಗಳು ಎಸ್‌ಡಿಪಿಐ ಅಭ್ಯರ್ಥಿ ಪಡೆದ ಕಾರಣ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ದಾವಣಗೆರೆ ಫಲಿತಾಂಶಕ್ಕೂ ಮುನ್ನವೇ ಕೆಲವರ ವಿರುದ್ಧದ ಕ್ರಮದ ಬಗ್ಗೆ ಮಾತನಾಡಿ, ಪಕ್ಷವು ತನಗೆ ಬಂದ ಮಾಹಿತಿಯಂತೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದೆ. ಸಾಕ್ಷಿ ಸಮೇತ ಮಾಹಿತಿ ರವಾನೆಯಾಗಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿ, ಹೈಕಮಾಂಡ್‌ ನಾಯಕರು, ನನಗೆ ಮತ್ತು ಅದನ್ನು ಮಾಡಿದವರಿಗೆ ತಿಳಿದಿತ್ತು ಎಂದರು.

ನೀವು ಪ್ರಚಾರಕ್ಕೆ ಹೋದ ಕಡೆ ಸೋಲಾಗಿದೆ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಪ್ರಚಾರಕ್ಕೆ ಹೋಗಿದ್ದರು. ಅಲ್ಲಿ ಅವರು ಗೆಲ್ಲಲಿಲ್ಲ. ಮಾಧ್ಯಮಗಳು ಅವರನ್ನು ತೋರಿಸುತ್ತಾರೆ ಎಂದು ಏನೇನೋ ಟೀಕೆ ಮಾಡಿ ಮಾತನಾಡುತ್ತಾರೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಉಪಚುನಾವಣೆ ಗೆಲುವು ಸರ್ಕಾರದ ಸಾಧನೆ, ಕಾರ್‍ಯಕರ್ತರ ಜಯ: ಸಿಎಂ
ಬಂಗಾಳದಂತೆ ರಾಜ್ಯದಲ್ಲೂ ಕಾಂಗ್ರೆಸ್‌ ಸೋತು ಮನೆಗೆ ಹೋಗುತ್ತೆ : ಅಶೋಕ್‌