ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆ ನಡೆಸಿದ ಸ್ಥಳದಲ್ಲಿ ಹೋಮ ನಡೆಸಿ ಅದನ್ನು ಶುದ್ಧೀಕರಿಸಿದ ಆಘಾತಕಾರಿ ಘಟನೆ ಉತ್ತರಾಖಂಡದ ನೈನಿತಾಲ್‌ ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ತಮಗೆ ಅವಮಾನವಾಗಿದೆ ಹಾಗೂ ಅಸ್ಪೃಶ್ಯತೆಯ ಅನುಭವವಾಗಿದೆ ಎಂದು ಬೇಸರಿಸಿರುವ ಖರ್ಗೆ, ಇದು ಬಿಜೆಪಿಗರ ಕೆಲಸ ಎಂದು ಆರೋಪಿಸಿದ್ದಾರೆ.

ಆ.8ರಂದು ಖರ್ಗೆ ಅವರು ನೈನಿತಾಲ್‌ನ ರಾಮಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದರು. ಅದಾದ 2 ದಿನಗಳ ಬಳಿಕ ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್‌ ಅಲ್ಲಿ ಶುದ್ಧೀಕರಣ ಹವನ ನಡೆಸಿತ್ತು. ಇದಕ್ಕೆ ಗುರುವಾರ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಖರ್ಗೆ, ‘ನಾನಲ್ಲಿ ಜನರ ಸಮಸ್ಯೆಗಳ ಬಗ್ಗೆ ಮಾತಾಡಿದ್ದೆ. ಆದರೆ ಬಿಜೆಪಿಯವರು ಅಲ್ಲಿ ಶುದ್ಧೀಕರಣ ಮಾಡಿದರು. ಇದರಿಂದ ನನಗೆ ನೋವಾಗಿದೆ. ಶುದ್ಧೀಕರಣ ಮಾಡಿದವರ ವಿರುದ್ಧ ಅಸ್ಪೃಶ್ಯತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು’ ಎಂದು ಆಗ್ರಹಿಸಿದರು.

ಅತ್ತ ಹೋಮ ನಡೆಸಿದ ಗುಂಪಿನ ಅಧ್ಯಕ್ಷ ಮಾತನಾಡಿ, ‘ಧಾರ್ಮಿಕ ಕಾರ್ಯಕ್ರಮಗಳಿಗೆಂದು ಮೀಸಲಿರುವ ಸ್ಥಳದಲ್ಲಿ ರಾಜಕೀಯ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಶುದ್ಧೀಕರಣ ಮಾಡಿದೆವು. ನಮಗೆ ಬಿಜೆಪಿ, ಆರ್‌ಎಸ್‌ಎಸ್‌ ಜತೆ ನಂಟಿಲ್ಲ’ ಎಂದರು.


ಬಿಜೆಪಿಯಿಂದಲೂ ಖಂಡನೆ:

ಅತ್ತ ಈ ಘಟನೆಗೂ ತನಗೂ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತನಾಡಿ, ‘ಇದು ಕಾಂಗ್ರೆಸ್‌ಗೆ ಮಾತ್ರವಲ್ಲ, ಎಲ್ಲರಿಗೂ ದುಃಖದ ವಿಷಯ. ಬಿಜೆಪಿ ಇಂತಹ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ. ನಾನಿದನ್ನು ಖಂಡಿಸುತ್ತೇನೆ. ತನಿಖೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

- ನೈನಿತಾಲ್‌ ಸಂಘಟನೆಯೊಂದರಿಂದ ಕೃತ್ಯ

- ಆ.8ರಂದು ನೈನಿತಾಲ್‌ನ ರಾಮಲೀಲಾ ಮೈದಾನದಲ್ಲಿ ಖರ್ಗೆ ಅವರಿಂದ ಸಾರ್ವಜನಿಕ ಭಾಷಣ

- ಅದಾದ 2 ದಿನ ಬಳಿಕ ಸ್ಥಳದಲ್ಲಿ ಶ್ರೀಮಾ ಸೇವಾ ನ್ಯಾಸ್‌ನಿಂದ ಹೋಮದ ಮೂಲಕ ಶುದ್ಧೀಕರಣ

- ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಮಾತನಾಡಿದ್ದಕ್ಕಾಗಿ ಶುದ್ಧೀಕರಣ ಎಂದು ನ್ಯಾಸ್‌ನಿಂದ ಸ್ಪಷ್ಟನೆ