ವೇಮುಲಾ ಮಸೂದೆಗೆ ಸಂಪುಟ ಅಸ್ತು

Published : Apr 17, 2026, 07:44 AM IST
vidhan soudha

ಸಾರಾಂಶ

ಸರ್ಕಾರಿ, ಖಾಸಗಿ, ಡೀಮ್ಡ್‌ ಸೇರಿದಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗಾಗಿ ‘ಕರ್ನಾಟಕ ರೋಹಿತ್‌ ವೇಮುಲಾ ವಿಧೇಯಕ’ ಅನುಷ್ಠಾನಗೊಳಿಸಲು  ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

 ಬೆಂಗಳೂರು :  ಸರ್ಕಾರಿ, ಖಾಸಗಿ, ಡೀಮ್ಡ್‌ ಸೇರಿದಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗಾಗಿ ‘ಕರ್ನಾಟಕ ರೋಹಿತ್‌ ವೇಮುಲಾ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ’ ಅನುಷ್ಠಾನಗೊಳಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಎಸ್ಸಿ, ಎಸ್ಟಿ ವಿದ್ಯಾರ್ಥಿ ಎಂಬ ಕಾರಣಕ್ಕೆ ಲಿಖಿತ ಪರೀಕ್ಷೆ ಅಥವಾ ಭೌತಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗೆ ವೈವಾ ಅಥವಾ ಪ್ರಾಕ್ಟಿಕಲ್‌ ಪರೀಕ್ಷೆ ವೇಳೆ ಕಡಿಮೆ ಅಂಕ ನಿಡುವುದು ಸಹ ಜಾತಿ ತಾರತಮ್ಯ ಎಂದು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ.

ಇಂತಹ ಹಲವು ಅಂಶಗಳನ್ನು ಹೊಂದಿರುವ ವಿಧೇಯಕದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜಾತಿ ತಾರತಮ್ಯ ಮಾಡಿದರೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ಸಮಾನತೆ ಸಮಿತಿ (ಈಕ್ವಿಟಿ ಕಮಿಟಿ) ರಚಿಸಿ ಪರಿಶೀಲನೆ ನಡೆಸಬೇಕು. ಸಮಾನತೆ ಸಮಿತಿ ವರದಿ ನೀಡಿದ 30 ದಿನಗಳ ಒಳಗಾಗಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಉಂಟಾದರೆ ಸಂಸ್ಥೆಗೆ 10 ಲಕ್ಷ ರು. ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಯಾವುದೇ ವಿದ್ಯಾರ್ಥಿ ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗದಂತೆ ರಕ್ಷಣೆ ನೀಡುವುದು ವಿಧೇಯಕದ ಆಶಯ. ವಿಧೇಯಕದಲ್ಲಿನ ಅಂಶಗಳ ಉಲ್ಲಂಘನೆಯು ಜಾಮೀನುರಹಿತ ಅಪರಾಧವಾಗಲಿದ್ದು, ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಜತೆಗೆ ಸಂಬಂಧಪಟ್ಟ ಸಂಸ್ಥೆಗೆ 10 ಲಕ್ಷ ರು.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ರಾಹುಲ್‌ಗಾಂಧಿ ಅವರ ಸಲಹೆಯ ಫಲ:

ಕರ್ನಾಟಕ ರೋಹಿತ್‌ ವೇಮುಲಾ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ವಿಧೇಯಕ ಅನುಷ್ಠಾನ ಕುರಿತಂತೆ ಈ ಹಿಂದೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರೂ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರು.

ಅದರಂತೆ ಈ ಹಿಂದೆಯೂ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕ ಚರ್ಚೆಗೆ ಬಂದಿತ್ತಾದರೂ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ.

ಬದಲಿಗೆ ಕಾನೂನು ಮತ್ತು ಗೃಹ ಇಲಾಖೆ ಅಭಿಪ್ರಾಯ ನೀಡಲು ಸಂಪುಟ ಸಭೆಯಲ್ಲಿ ಸೂಚಿಸಿ, ವಿಧೇಯಕದ ಬಗೆಗಿನ ನಿರ್ಧಾರವನ್ನು ಮುಂದೂಡಲಾಗಿತ್ತು. ಇದೀಗ ಕಾನೂನು ಮತ್ತು ಗೃಹ ಇಲಾಖೆ ಅಭಿಪ್ರಾಯ ನೀಡಿದ್ದು, ಸಂಪುಟ ಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ.

ಜಾತಿ ತಾರತಮ್ಯದ ಕ್ರಮಗಳ ಪಟ್ಟಿ

ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜಾತಿ ತಾರತಮ್ಯ ಉಂಟಾಗುವ ಸಂದರ್ಭಗಳನ್ನು ಉಲ್ಲೇಖಿಸಿ ಅವುಗಳನ್ನು ನಿರ್ಬಂಧಿಸಿರುವುದಾಗಿ ವಿಧೇಯಕದಲ್ಲಿ ತಿಳಿಸಲಾಗಿದೆ.

ಉದಾಹರಣೆಗೆ:

1. ದಾಖಲಾತಿ ಪ್ರಕ್ರಿಯೆ ಹಾಗೂ ಸಂದರ್ಶನದ ಪ್ರಶ್ನೆಗಳ ವೇಳೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಸಾಮಾಜಿಕ ಹಿನ್ನೆಲೆ ಹಾಗೂ ಕೌಟುಂಬಿಕ ವೃತ್ತಿ ಬಗ್ಗೆ ಪ್ರಶ್ನಿಸುವಂತಿಲ್ಲ. ಬದಲಿಗ ಶೈಕ್ಷಣಿಕ ಹಾಗೂ ವಿಷಯಾಧಾರಿತವಾಗಿ ಮಾತ್ರ ಕೇಳಬೇಕು.

2. ಕಾಲೇಜು ಕೊಠಡಿಯಲ್ಲಿ ಪ್ರತ್ಯೇಕಿಸುವುದು. ಎಸ್ಸಿ, ಎಸ್ಟಿ ಜಾತಿ ಬಗ್ಗೆ ಕೀಳಾಗಿ ಮಾತನಾಡುವುದು.

3. ಪ್ರಯೋಗಾಲಯಕ್ಕೆ ಹೋದಾಗ ಪ್ರಯೋಗಗಳನ್ನು ಮಾಡಲು ಬಿಡದಿರುವುದು.

4. ಲಿಖಿತ ಹಾಗೂ ಭೌತಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ವೈವಾ, ಪ್ರಾಕ್ಟಿಕಲ್‌ನಲ್ಲಿ ಕಡಿಮೆ ಅಂಕ ನೀಡುವುದು.

5. ಆರ್ಥಿಕವಾಗಿ ಹಿಂದುಳಿದ ಎಸ್ಸಿ,ಎಸ್ಟಿ ವಿದ್ಯಾರ್ಥಿಗೆ ದೇಣಿಗೆ ನೀಡುವಂತೆ ಒತ್ತಾಯಿಸಿ ಅವಮಾನಿಸುವುದು ಸೇರಿದಂತೆ ಹಲವು ಅಂಶಗಳನ್ನು ಸೇರಿಸಲಾಗಿದೆ.

ಯಾವ ಸಂಸ್ಥೆಗಳಿಗೆ ಅನ್ವಯ?

ರಾಜ್ಯ ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳು ಹಾಗೂ ಸಂವಿಧಾನದ ಆರ್ಟಿಕಲ್‌ 29 ಹಾಗೂ 30ರ ಅಡಿ ಸ್ಥಾಪಿಸಲಾದ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಂಪುಟ ಪುನಾರಚನೆ ಸರ್ಕಸ್; ಶಾಸಕರು- ಸುರ್ಜೇವಾಲ ಭೇಟಿ
ಒಳಮೀಸಲು ಜಾರಿಗೆ ತಾಂತ್ರಿಕ ಸಮಿತಿ - ವೈಜ್ಞಾನಿಕವಾಗಿ ಅನುಷ್ಠಾನಕ್ಕೆ ಶಿಫಾರಸು ನೀಡಲು ರಚನೆ