ಸಂಪುಟ ಬಗ್ಗೆ ಚರ್ಚೆ: ನಾಳೆ ಡಿಕೆಶಿ-ಸಿದ್ದು ದಿಲ್ಲಿಗೆ?

Published : May 31, 2026, 08:38 AM IST
siddaramaiah

ಸಾರಾಂಶ

ನೂತನ ಸಚಿವ ಸಂಪುಟಕ್ಕೆ ಮೊದಲ ಹಂತದಲ್ಲಿ ಸೇರ್ಪಡೆ ಆಗುವ ಸಚಿವರ ಹೆಸರು ಅಖೈರುಗೊಳಿಸಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ದೆಹಲಿಗೆ ತೆರಳುವ ಸಾಧ್ಯತೆಯಿದೆ.

 ಬೆಂಗಳೂರು:  ನೂತನ ಸಚಿವ ಸಂಪುಟಕ್ಕೆ ಮೊದಲ ಹಂತದಲ್ಲಿ ಸೇರ್ಪಡೆ ಆಗುವ ಸಚಿವರ ಹೆಸರು ಅಖೈರುಗೊಳಿಸಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ದೆಹಲಿಗೆ ತೆರಳುವ ಸಾಧ್ಯತೆಯಿದೆ.

ಬುಧವಾರ ನಡೆಯುವ ಪ್ರಮಾಣ ವಚನ ಸಮಾರಂಭದಲ್ಲಿ ಎಷ್ಟು ಮಂದಿ ಸಂಪುಟ ಸೇರಬೇಕು ಎಂಬ ಬಗ್ಗೆ ಚರ್ಚಿಸಲು ಉಭಯ ನಾಯಕರಿಗೂ ದೆಹಲಿಗೆ ಬುಲಾವ್ ಬರಲಿದೆ ಎನ್ನಲಾಗಿದೆ. ವಾಸ್ತವವಾಗಿ ಶಾಸಕಾಂಗ ಪಕ್ಷದ ಸಭೆಗಾಗಿ ನಗರಕ್ಕೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅ‍ವರೊಂದಿಗೆ ರಾಜ್ಯ ನಾಯಕರು ಈ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ, ತುರ್ತು ಕಾರ್ಯ ನಿಮಿತ್ತ ಈ ನಾಯಕರು ತೆರಳಿದ್ದರಿಂದ ಈ ಸಭೆ ಸೋಮವಾರ ದೆಹಲಿಯಲ್ಲಿ ನಡೆಯುವ ಸಾಧ್ಯತೆಯಿದೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ಹಾಗೂ ವೇಣುಗೋಪಾಲ್‌ ಚರ್ಚೆ ನಡೆಸಲಿದ್ದಾರೆ. ನಂತರ ಈ ಸಭೆಯ ತೀರ್ಮಾನವನ್ನು ರಾಹುಲ್‌ ಗಾಂಧಿ ಅವರಿಗೆ ತಿಳಿಸಿ, ಒಪ್ಪಿಗೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಸೌಧದಿಂದ ಲೋಕಭವನಕ್ಕೆ ಶಿಪ್ಟ್!

ಮೂಲಗಳ ಪ್ರಕಾರ ಇತ್ತೀಚೆಗೆ ದೆಹಲಿ ಭೇಟಿ ವೇಳೆ ಮೊದಲ ಹಂತದ ಸಂಪುಟ ರಚನೆ ವೇಳೆ ಸಿಎಂ ಸೇರಿ ಒಟ್ಟು 9 ಮಂದಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ಇದೀಗ ಈ ಸಂಖ್ಯೆ ಬಗ್ಗೆ ಗೊಂದಲ ನಿರ್ಮಾಣವಾಗಿದೆ. ಇದಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಧಾನಸೌಧದ ಮೆಟ್ಟಿಲುಗಳ ಬದಲಾಗಿ ಲೋಕಭವನಕ್ಕೆ ಸ್ಥಳಾಂತರಗೊಂಡಿರುವುದು ಒಂದು ಕಾರಣ ಎನ್ನಲಾಗಿದೆ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಜನ ಸಾಗರದ ಎದುರು ಪ್ರಮಾಣವಚನ ಸ್ವೀಕಾರ ನಡೆಸುವ ಉದ್ದೇಶವಿತ್ತು. ಇದಕ್ಕೆ ಜಿಲ್ಲೆಗಳಿಂದ ಸುಮಾರು 1800 ಬಸ್‌ಗಳಲ್ಲಿ ಕಾರ್ಯಕರ್ತರನ್ನು ಕರೆತರಲು ಕೆಲ ನಾಯಕರು ಸಜ್ಜಾಗಿದ್ದು, ಸುಮಾರು 1 ಲಕ್ಷ ಜನ ಸೇರಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಪ್ರಮಾಣದಲ್ಲಿ ಜನ ಸೇರಿದರೆ ಗದ್ದಲ ಹಾಗೂ ಗೊಂದಲ ಉಂಟಾಗುತ್ತದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದ ಕಾರಣ ಸಮಾರಂಭವನ್ನು ಲೋಕಭವನಕ್ಕೆ ಸ್ಥಳಾಂತರಿಸಲಾಯಿತು ಎನ್ನುತ್ತವೆ ಮೂಲಗಳು.

ಡಿಕೆಶಿ ಒಬ್ಬರೇ ಪ್ರಮಾಣವಚನ?

ಲೋಕ ಭವನದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಸದಸ್ಯರು ಹಾಗೂ ಅಧಿಕಾರಿಗಳು ಸೇರಿ 500 ಜನಕ್ಕೆ ಮಾತ್ರ ಅ‍ವಕಾಶ ನೀಡಲಾಗಿದೆ. ಇಷ್ಟು ಕಡಿಮೆ ಸಂಖ್ಯೆಯಲ್ಲಿ ಆಮಂತ್ರಿತರಿಗೆ ಅವಕಾಶ ನೀಡಿರುವುದರಿಂದ 9 ಮಂದಿ ಸಚಿವರು ಪ್ರಮಾಣ ವಚನ ಮಾಡಿದರೆ ಅವರ ಬೆಂಬಲಿಗರು ಆಗಮಿಸಿ ಗೊಂದಲ ನಿರ್ಮಾಣವಾಗಬಹುದು ಎಂಬ ಶಂಕೆಯಿದೆ.

ಹೀಗಾಗಿ, ಬುಧವಾರ ಡಿ.ಕೆ.ಶಿವಕುಮಾರ್ ಮಾತ್ರ ಪ್ರಮಾಣ ವಚನ ಸ್ವೀಕರಿಸಿ ಒಂದೆರಡು ದಿನ ಬಿಟ್ಟು ಕೆಲ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಹೇಗೆ ಎಂಬ ಚಿಂತನೆ ಶಿವಕುಮಾರ್‌ ಅವರ ಆಪ್ತರಲ್ಲಿದೆ. ಆದರೆ, ಇದಕ್ಕೆ ಹೈಕಮಾಂಡ್‌ ಒಪ್ಪಬೇಕು. ಈ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಹೈಕಮಾಂಡ್‌ಗೆ ಸಿಎಂ ಜತೆಗೆ ಹಲವು ಹಿರಿಯ ಸಚಿವರು ಸಂಪುಟ ಸೇರಲಿ ಎಂಬ ಇರಾದೆ ಇದೆ ಎನ್ನಲಾಗಿದೆ. ಹೀಗಾಗಿ ಬುಧವಾರದ ಸಮಾರಂಭದಲ್ಲಿ ಎಷ್ಟು ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸೋಮವಾರ ನಿರ್ಧಾರವಾಗುವ ಸಾಧ್ಯತೆಯಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕೆಪಿಸಿಸಿ ಅಧ್ಯಕ್ಷ ಸ್ಥಾನ : ಸತೀಶ ಪರಂ, ಹರಿ ಮಧ್ಯೆ ಪೈಪೋಟಿ
ಮೊದಲ ಹಂತದಲ್ಲೇ ಸಂಪುಟಕ್ಕೆ ಸೇರಲು ಭರ್ಜರಿ ಲಾಬಿ ಶುರು - 2ನೇ ಹಂತ ತಡವಾಗುತ್ತೆಂಬ ಕಾರಣ