ಬಿಯಾಂಡ್ ಬೆಂಗಳೂರು ನೀತಿ ಮೂಲಕ ರಾಜ್ಯದ ಇತರೆ ನಗರಗಳಿಗೆ ಉದ್ಯಮಗಳನ್ನು ವಿಸ್ತರಿಸುತ್ತಿದ್ದು, ಇದರಿಂದ ಉದ್ಯಮಗಳಿಗೆ ಕೇವಲ ಅರ್ಧ ಡಾಲರ್‌ಗೆ ಕಚೇರಿ ಜಾಗ ಸಿಗುವಂತಾಗಲಿದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು : ‘ಉದ್ಯಮಗಳ ಕಚೇರಿ ಜಾಗಕ್ಕೆ ದೇಶದ ಬೇರೆ ನಗರಗಳಲ್ಲಿ 3.5 ಡಾಲರ್ ವೆಚ್ಚವಾದರೆ ಬೆಂಗಳೂರಿನಲ್ಲಿ ಕೇವಲ 1 ಡಾಲರ್ ವೆಚ್ಚವಾಗುತ್ತಿದೆ. ಬಿಯಾಂಡ್ ಬೆಂಗಳೂರು ನೀತಿ ಮೂಲಕ ರಾಜ್ಯದ ಇತರೆ ನಗರಗಳಿಗೆ ಉದ್ಯಮಗಳನ್ನು ವಿಸ್ತರಿಸುತ್ತಿದ್ದು, ಇದರಿಂದ ಉದ್ಯಮಗಳಿಗೆ ಕೇವಲ ಅರ್ಧ ಡಾಲರ್‌ಗೆ ಕಚೇರಿ ಜಾಗ ಸಿಗುವಂತಾಗಲಿದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮುಂದಿನ 100 ದಿನಗಳಲ್ಲಿ ಅತ್ಯಂತ ಕೈಗೆಟುಕುವ ವೆಚ್ಚದಲ್ಲಿ ವಿಶ್ವದರ್ಜೆಯ ಕಚೇರಿ ಮೂಲ ಸೌಕರ್ಯ ಒದಗಿಸಿ ಕೈಗಾರಿಕೆಗಳು ಬೆಂಗಳೂರಿನ ಆಚೆಗೆ ಸ್ಥಾಪನೆಯಾಗಲು ಪ್ರೋತ್ಸಾಹಿಸುವ ನೀತಿ ಪರಿಚಯಿಸುತ್ತೇವೆ ಎಂದು ಭರವಸೆ ನೀಡಿದರು.

ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ‘ಬೆಂಗಳೂರು ಟೆಕ್ ಸಮಿಟ್-2026’ ಪೂರ್ವಭಾವಿ ಆಗಿ ಐಟಿ ಕಂಪನಿಗಳ 250ಕ್ಕೂ ಹೆಚ್ಚು ಸಿಇಓಗಳೊಂದಿಗೆ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ನಾವು ಬೆಂಗಳೂರನ್ನು ಮೀರಿ ಬೆಳೆಯೋಣ. ಬೆಂಗಳೂರು ನಮ್ಮ ಕಿರೀಟ, ಆದರೆ ಕರ್ನಾಟಕ ನಮ್ಮ ಹೃದಯ. ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮತ್ತು ಕರ್ನಾಟಕದ ಮೂಲೆ ಮೂಲೆಗೂ ಬೆಳವಣಿಗೆಯನ್ನು ಕೊಂಡೊಯ್ಯೋಣ. ಇದಕ್ಕಾಗಿ ಬೇರೆ ನಗರಗಳಲ್ಲಿ ಡಬಲ್ ಎಫ್ಎಆರ್ ಮೇಲೆ ಗಮನಹರಿಸುತ್ತಿದ್ದೇವೆ. ಜನ ತಮ್ಮ ಕುಟುಂಬಗಳ ಹತ್ತಿರ ವಾಸಿಸಬಹುದು, ತಮ್ಮ ತವರು ನಗರಗಳಿಂದಲೇ ಕೆಲಸ ಮಾಡಬಹುದು, ಅದೇ ರೀತಿಯ ಜೀವನದ ಗುಣಮಟ್ಟ ಆನಂದಿಸಬಹುದು ಮತ್ತು ಕರ್ನಾಟಕದ ಬೆಳವಣಿಗೆಗೆ ಕೊಡುಗೆ ನೀಡಬಹುದು. ಪ್ರತಿಯೊಬ್ಬರಿಗೂ ಅವಕಾಶ ಸಿಗುವಂತೆ ಮೂಲಸೌಕರ್ಯ ನಿರ್ಮಿಸುತ್ತಿದ್ದೇವೆ ಎಂದು ಶಿವಕುಮಾರ್‌ ಹೇಳಿದರು.

5.50 ಲಕ್ಷ ಕೋಟಿ ಐಟಿ ರಫ್ತು ಗುರಿ:

ಐಟಿ ರಫ್ತಿನಲ್ಲಿ 2024-25ರಲ್ಲಿ ₹4.36 ಲಕ್ಷ ಕೋಟಿ ದಾಟಿದ್ದು, ಈ ವರ್ಷ ₹5.5 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ. ನಮ್ಮ ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಕೇವಲ ಬ್ಯಾಕ್ ಆಫೀಸ್‌ಗಳಾಗಿ ಉಳಿದಿಲ್ಲ. ಅವು ಆಳವಾದ ಆವಿಷ್ಕಾರ, ಉತ್ಪನ್ನ ಅಭಿವೃದ್ಧಿ ಮತ್ತು ಹೆಚ್ಚಿನ ಮೌಲ್ಯದ, ಭವಿಷ್ಯದ-ಕೇಂದ್ರೀಕೃತ ಕೆಲಸಗಳ ಕೇಂದ್ರಗಳಾಗಿವೆ ಎಂದು ಹೇಳಿದರು.

ಐಟಿ-ಬಿಟಿ, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ, ಉದ್ಯಮಿ ಕ್ರಿಸ್ ಗೋಪಾಲಕೃಷ್ಣನ್ ಹಾಜರಿದ್ದರು.

ಗ್ರಾಮೀಣ ವಿದ್ಯಾರ್ಥಿಗೂ 6ನೇ ಕ್ಲಾಸಿಂದ ಎಐ ತರಬೇತಿ:

ಮುಂದಿನ ದಶಕವನ್ನು ಕೃತಕ ಬುದ್ಧಿಮತ್ತೆ (ಎಐ), ರೋಬೋಟಿಕ್ಸ್ ಮತ್ತು ಸುಸ್ಥಿರ ಮೂಲಸೌಕರ್ಯ ಆಳಲಿವೆ. ಹೀಗಾಗಿ ನಾವು ಎಐ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದ್ದೇವೆ. ಇದಕ್ಕೆ ನೀವೆಲ್ಲಾ ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕರೆ ನೀಡಿದರು.

ಪ್ರತಿ ಗ್ರಾಮೀಣ ವಿದ್ಯಾರ್ಥಿಯೂ 6ನೇ ತರಗತಿಯಿಂದಲೇ ಎಐ ಕಲಿಯಲು ಪ್ರಾರಂಭಿಸಬೇಕು ಎಂದು ನಾವು ಬಯಸುತ್ತೇವೆ, ಏಕೆಂದರೆ ಭವಿಷ್ಯವು ಮುಂದಿನ ಪೀಳಿಗೆಗೆ ಸೇರಿದೆ ಎಂದರು.

ಕಾವೇರಿ ವಿಚಾರದಲ್ಲಿ ಎಲ್ಲರ ಜತೆಗೆ ಮಾತನಾಡಲು ಸಿದ್ಧ:

ಕೆಲ ವಿಚಾರಗಳಲ್ಲಿ ಎಲ್ಲರೊಂದಿಗೂ ಮಾತನಾಡಲು, ಕೆಲಸ ಮಾಡಲು ಹಾಗೂ ಎಲ್ಲರೊಂದಿಗೂ ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಈ ಮೂಲಕ ಕಾವೇರಿ ವಿಚಾರ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಜೋಸೆಫ್‌ ಜತೆ ಮಾತುಕತೆ ಸುಳಿವು ನೀಡಿದ್ದಾರೆ. ಕಾವೇರಿ ನೀರು ಹಂಚಿಕೆ ಕುರಿತು ಚರ್ಚಿಸಲು ಆ.3 ರಂದು ತಮಿಳುನಾಡು ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ನಡುವೆ ಬೆಂಗಳೂರಿನಲ್ಲಿ ಸಭೆ ನಿಗದಿಯಾಗಿದೆ ಎಂದು ಹೇಳಲಾಗಿತ್ತು.

ಈ ಬಗ್ಗೆ ತಮಿಳುನಾಡಿನ ಕೃಷಿ ಸಚಿವ ಆರ್‌.ವಿನೋತ್‌, ಕರ್ನಾಟಕ ನೀಡಿದ್ದ ಆಹ್ವಾನ ಮುಖ್ಯಮಂತ್ರಿ ವಿಜಯ್‌ ಅವರಿಗೆ ತಲುಪಿದೆ ಎಂದು ಹೇಳಿದ್ದರು. ಈ ಸಂಬಂಧ ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ‘ಈ ವಾರ ಸಚಿವ ಸಂಪುಟ ವಿಸ್ತರಣೆ ಮತ್ತು ಇತರೇ ವಿಷಯಗಳಲ್ಲಿ ಕಾರ್ಯನಿರತವಾಗಿದ್ದೇವೆ. ಕೆಲ ವಿಚಾರಗಳಲ್ಲಿ ನಾವು ಎಲ್ಲರೊಂದಿಗೆ ಮಾತನಾಡಲು, ಎಲ್ಲರೊಂದಿಗೆ ಹಂಚಿಕೊಳ್ಳಲು, ಎಲ್ಲರೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ’ ಎಂದಷ್ಟೇ ಹೇಳಿದರು.