ಹರಿಹರ ಪಂಚಮಸಾಲಿ ಟ್ರಸ್ಟ್‌ ಹೆಸರಿನಲ್ಲಿ ಲಕ್ಷಾಂತರ ರು. ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಿದ್ದಾಗಿ ಹೇಳಿದ ವೀಡಿಯೋ ಸಾಕ್ಷ್ಯಗಳೊಂದಿಗೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಿದ್ದು, ಒಂದು ವೇಳೆ ಉಭಯ ಇಲಾಖೆ ತನಿಖೆಗೆ ಮುಂದಾಗದಿದ್ದರೆ ಭಕ್ತರು ಸೇರಿ ಹೈಕೋರ್ಟ್ ಮೂಲಕ ತನಿಖೆಗೆ ನಿರ್ದೇಶನ ಕೊಡಿಸುತ್ತೇವೆ ಎಂದು ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಹೇಳಿದ್ದಾರೆ.

- ಪಂಚಮಸಾಲಿ ಟ್ರಸ್ಟಿಗಳು ಬ್ಲಾಕ್ ಮನಿ ವೈಟ್ ಮನಿ ಮಾಡುವ ಹೇಳಿಕೆ ಬಗ್ಗೆ ತನಿಖೆಗೆ ಎಚ್‌.ಎಸ್‌. ಶಿವಶಂಕರ ಒತ್ತಾಯ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಹರಿಹರ ಪಂಚಮಸಾಲಿ ಟ್ರಸ್ಟ್‌ ಹೆಸರಿನಲ್ಲಿ ಲಕ್ಷಾಂತರ ರು. ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಿದ್ದಾಗಿ ಹೇಳಿದ ವೀಡಿಯೋ ಸಾಕ್ಷ್ಯಗಳೊಂದಿಗೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಿದ್ದು, ಒಂದು ವೇಳೆ ಉಭಯ ಇಲಾಖೆ ತನಿಖೆಗೆ ಮುಂದಾಗದಿದ್ದರೆ ಭಕ್ತರು ಸೇರಿ ಹೈಕೋರ್ಟ್ ಮೂಲಕ ತನಿಖೆಗೆ ನಿರ್ದೇಶನ ಕೊಡಿಸುತ್ತೇವೆ ಎಂದು ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠದ ಹೆಸರಿನಲ್ಲಿ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿದ್ದಾಗ ಪೀಠದಲ್ಲಿ ಈಚೆಗೆ ₹27.61 ಕೋಟಿಗಳ ಲೆಕ್ಕ ಮಂಡಿಸಿದ ವೇಳೆ ಟ್ರಸ್ಟ್‌ನವರೇ ಹೇಳಿಕೊಂಡಿದ್ದು, ಇದರ ವೀಡಿಯೋಗಳನ್ನು ನಾವು ಸಂಗ್ರಹ ಮಾಡಿದ್ದೇವೆ. ಇ.ಡಿ. ಮತ್ತು ಐ.ಟಿ. ಇಲಾಖೆಗಳಿಗೆ ಲಿಖಿತ ದೂರನ್ನು ಸಹ ನೀಡಲಿದ್ದೇವೆ ಎಂದರು.

ನಮ್ಮ ದೂರನ್ನು ಪರಿಗಣಿಸಿ, ಇಡಿ ಮತ್ತು ಐಟಿ ಅಧಿಕಾರಿಗಳು ತನಿಖೆ ಕೈಗೊಳ್ಳದಿದ್ದರೆ ಹೈಕೋರ್ಟ್ ಮೊರೆ ಹೋಗುತ್ತೇವೆ. ಹೈಕೋರ್ಟ್‌ನಲ್ಲಿ ಪಂಚಮಸಾಲಿ ಭಕ್ತರು ಕೇಸ್ ಮಾಡಿ, ಶ್ರೀ ಪೀಠದ ಟ್ರಸ್ಟ್‌ನಲ್ಲಿ ಕಪ್ಪು ಹಣವನ್ನು ಬಿಳಿ ಹಣ‍ವನ್ನಾಗಿಸಿದ ಹೇಳಿಕೆಯನ್ನು ಆಧರಿಸಿ, ತನಿಖೆ ಕೈಗೊಳ್ಳುವಂತೆ ಉಭಯ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡುತ್ತೇವೆ. ನ್ಯಾಯಾಲಯದಿಂದಲೇ ತನಿಖೆಗೆ ನಿರ್ದೇಶನ ಕೊಡಿಸುವುದಕ್ಕೂ ನಾವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಶ್ರೀಪೀಠದಲ್ಲಿ ಏ.27ರಂದು ಕಳೆದ 18 ವರ್ಷಗಳ ಸುಮಾರು ₹27.61 ಕೋಟಿಗಳ ಲೆಕ್ಕ ಮಂಡಿಸಲಾಗಿದೆ. ಇದನ್ನು ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳಿಗೆ ದಾಖಲೆಗಳ ಸಮೇತ ಯಾಕೆ ಟ್ರಸ್ಟ್‌ನವರು ನೀಡಲಿಲ್ಲ? ಕೇವಲ ಬಾಯಿ ಮಾತಿನಲ್ಲಿ ಲೆಕ್ಕ ಹೇಳುವುದಕ್ಕಿಂತಲೂ ಪೀಠದ ಆಸ್ತಿ ಮತ್ತು ಖರ್ಚು-ವೆಚ್ಚಗಳ ಬಗ್ಗೆ ಅಧಿಕೃತ ದಾಖಲೆಗಳನ್ನು ಟ್ರಸ್ಟ್‌ನವರು ಪತ್ರಿಕೆಗಳ ಮುಂದೆ ಇಡಬೇಕು. ಅಂದು ಮಂಡಿಸಿದ ಲೆಕ್ಕದಲ್ಲಿ ₹1.5 ಕೋಟಿ ವ್ಯತ್ಯಾಸವಾಗಿದ್ದು, ನಮ್ಮ ಲೆಕ್ಕಕ್ಕೂ ಹಾಗೂ ಟ್ರಸ್ಟ್‌ನವರ ಲೆಕ್ಕಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಅವರು ಆರೋಪಿಸಿದರು.

ವಿಜಯ ನಗರ ಜಿಲ್ಲೆ ಕೊಟ್ಟೂರಿನಿಂದ ಮೇ 20ರಂದು ಲೆಕ್ಕ ಸಂಗ್ರಹಿಸುವ ಅಭಿಯಾನವನ್ನು ಆರಂಭಿಸಲು ನಿರ್ಧರಿಸಲಾಗಿದೆ. ಪ್ರತಿ ತಾಲೂಕಿನಿಂದ 20 ಜನರ ಸಮಿತಿ ರಚಿಸಿ, ಲೆಕ್ಕ ಸಂಗ್ರಹಿಸುವ ಕೆಲಸ ಮಾಡಲಾಗುವುದು. ಕೊಟ್ಟೂರಿನ ಅಭಿಯಾನದ ಒಳಗಾಗಿ ಟ್ರಸ್ಟ್‌ನವರು ಬಂದು ಲೆಕ್ಕ ಕೊಡಿ ಚಳವಳಿ ಸಮಿತಿ ಮುಖಂಡರು ಹಾಗೂ ಸಮಾಜ ಬಾಂಧವರ ಮುಂದೆ ಲೆಕ್ಕಾಚಾರದಲ್ಲಿ ಆಗಿರುವ ಲೋಪದೋಷ ಒಪ್ಪಿಕೊಂಡು, ಎಲ್ಲರೂ ಒಂದಾಗಿ ಹೋಗೋಣವೆಂದರೆ ಸಂತೋಷ. ತಪ್ಪು ಮಾಡಿದ್ದರೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಪ್ರಾಯಶ್ಚಿತ್ತಕ್ಕಿಂತಲೂ ದೊಡ್ಡ ಶಕ್ತಿ ಮತ್ತೊಂದಿಲ್ಲ ಎಂದು ಅವರು ಹೇಳಿದರು.

ಲೆಕ್ಕ ಕೊಡಿ ಚಳವಳಿ ಸಮಿತಿ ಅಧ್ಯಕ್ಷ ಹೊಳೆಸಿರಿಗೆರೆ ಪರಮೇಶ್ವರ ಗೌಡ ಮಾತನಾಡಿ, ಏ.27ರಂದು ಟ್ರಸ್ಟ್ ಮಂಡಿಸಿದ ಲೆಕ್ಕಪತ್ರಗಳು ಸುಳ್ಳಿನಿಂದ ಕೂಡಿವೆ. ಕೇವಲ ಶ್ರೀಮಂತ ದಾನಿಗಳ ಹೆಸರನ್ನಷ್ಟೇ ಉಲ್ಲೇಖಿಸಿದ್ದಾರೆ. ಸಾಮಾನ್ಯರು, ಶ್ರಮಿಕರು, ಕಡುಬಡವರು, ರೈತರು ನೀಡಿದ ದೇಣಿಗೆ ಪೈಸೆ ಪೈಸೆ ಲೆಕ್ಕ, ಅಕ್ಕಿ, ಬೇಳೆ, ದವಸ ಧಾನ್ಯದ ಲೆಕ್ಕ ಕೊಡುವುದನ್ನೇ ಟ್ರಸ್ಟ್‌ನವರು ಮರೆತಿದ್ದಾರೆ. ಮಠದ ಆದಾಯ ಮತ್ತು ಖರ್ಚಿನ ಬಗ್ಗೆ ಪಾರದರ್ಶಕತೆ ಇರಲೆಂದು ಲೆಕ್ಕ ಕೊಡಿ ಚಳವಳಿ ನಡೆಸಿದ್ದೇವೆ. ಟ್ರಸ್ಟ್‌ನವರು ಮಠದ ಅಭಿವೃದ್ಧಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಠದಲ್ಲಿ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮ ಆಯೋಜಿಸದಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದು ಸರಿಯಲ್ಲ. ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಇಂತಹ ಏಕಪಕ್ಷೀಯ ನಿರ್ಧಾರ ಸರಿಯಲ್ಲ. ಸಮಾಜಕ್ಕಿಂತಲೂ ದೊಡ್ಡವರು ಯಾರೂ ಇಲ್ಲ. ಈ ಹಿನ್ನೆಲೆಯಲ್ಲಿ ಶ್ರೀಮಠ ಮತ್ತು ಕಚೇರಿಗಳಿಗೆ ಬೀಗ ಹಾಕಿರುವುದೂ ಹಿಂದೂ ಸಂಸ್ಕೃತಿಯಲ್ಲ. ಮಠದ ಸೇವಕರಾದ ಅಶೋಕ ಮೇಲೆ ಅನ್ಯ ಸಮಾಜದವರನ್ನು ಕರೆಸಿ, ಹಲ್ಲೆ ಮಾಡಿಸಿದ್ದಾರೆ. ಮೇ 20ರಂದು ಕೊಟ್ಟೂರಿನಲ್ಲಿ ಆರಂಭಿಸುವ ಲೆಕ್ಕ ಸಂಗ್ರಹ ಅಭಿಯಾನದಲ್ಲಿ ಟ್ರಸ್ಟ್‌ನವರು ಲೆಕ್ಕಪತ್ರದಲ್ಲಿ ಆದ ವ್ಯತ್ಯಾಸವನ್ನು ಸಮಾಜದ ಮುಂದೆ ಒಪ್ಪಿಕೊಂಡು, ಕ್ಷಮೆಯಾಚಿಸಲಿ ಎಂದು ತಾಕೀತು ಮಾಡಿದರು.

ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಟ್ರಸ್ಟನ್ನು ತಮಗೆ ಬೇಕಾದಂತೆ ರಚಿಸಿದ್ದಾರೆ. ಸಮಾಜದ ಗಣ್ಯರಾದ ನಾಗನಗೌಡರು, ಪ್ರಕಾಶ ಪಾಟೀಲ, ಡಾ.ರಾಜಕುಮಾರ ಸೇರಿದಂತೆ ಅನೇಕರಿಗೆ ಅವಮಾನಿಸಿದ್ದಾರೆ. ಸಮಿತಿಗೆ ನಾನು ಸ್ವಯಂ ಘೋಷಿತ ಅಧ್ಯಕ್ಷನೆಂದಿದ್ದಾರೆ. ನಾನು ಸ್ವಘೋಷಿತ ಅಧ್ಯಕ್ಷನಲ್ಲ. ಬದಲಾಗಿ ಸಮಾಜದ ಮುಖಂಡರು, ಶಾಸಕರು-ಮಾಜಿ ಶಾಸಕರು ಸೇರಿ, ತಮ್ಮನ್ನು ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. 2008ರಲ್ಲಿ ಮಠ ಸ್ಥಾಪನೆಯಾದಾಗ ತಮ್ಮ ಗ್ರಾಮದಿಂದ ₹3.36 ಲಕ್ಷ ದೇಣಿಗೆ ಸಂಗ್ರಹಿಸಿ ನೀಡಿದ್ದೇವೆ. 2008ರಲಲಿ ತಾವು, ತಮ್ಮ ಸ್ನೇಹಿತರು ಪೀಠಕ್ಕೆ 50 ಸಾವಿರ ರು. ನೀಡಿದ್ದೇವೆ ಎಂದು ತಿಳಿಸಿದರು.

ರಾಣೆಬೆನ್ನೂರು ಮಾಜಿ ಶಾಸಕ ಅರುಣ ಕುಮಾರ ಪೂಜಾರ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ಆನಂದ ಜಿರ್ಲೆ, ಡಾ.ಬಸವರಾಜ ವೀರಾಪುರ, ಬ್ಯಾಡಗಿ ಶಂಕರಗೌಡ, ಸಿದ್ದಣ್ಣ ಚಿಕ್ಕ ಬಿದರಿ, ಎಚ್.ಸಿ. ಬಾಬಣ್ಣ, ಡಾ.ಸಿದ್ದನಗೌಡ, ನಾಗೇಂದ್ರ ಗೌಡ, ಕಡಕೋಳ ನಾಗಣ್ಣ, ಹೊಳೆ ಸಿರಿಗೆರೆ ಕುಮಾರ, ಕಿರಣ ಇತರರು ಇದ್ದರು.

- - -

(ಕೋಟ್‌) ಬಿ.ಸಿ. ಉಮಾಪತಿ, ಬಸವರಾಜ ದಿಂಡೂರು, ಬಾವಿ ಬೆಟ್ಟಪ್ಪನವರಂತಹ ಮೂಲ ಟ್ರಸ್ಟಿಗಳು ಸಮಾಜಕ್ಕೆ ಯಾವುದೇ ಗಮನಾರ್ಹ ಕೊಡುಗೆ ನೀಡಿಲ್ಲ. ಬೇರೆಯವರ ಹಣದ ಮೇಲೆ ಮಠ ಕಟ್ಟಿ, ಅದರಿಂದ ಬರುವ ಬಡ್ಡಿ ಹಣವನ್ನು ತಾವು ನೀಡಿದ ದೇಣಿಗೆಯೆಂದು ಹೇಳಿಕೊಳ್ಳುವ ಮೊದಲು, ತಮ್ಮ ಸ್ವಂತ ಕೊಡುಗೆ ಏನೆಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ. 2008ರಲ್ಲಿ ಪೀಠ ಸ್ಥಾಪನೆ ವೇಳೆ ಹೇಳಿದಂತೆ 2008 ಮಕ್ಕಳ ದತ್ತು ಸ್ವೀಕಾರ, ವಿದ್ಯಾಭ್ಯಾಸ ಮತ್ತು ಹಾಸ್ಟೆಲ್ ವ್ಯವಸ್ಥೆ ಭರವಸೆ ಇನ್ನೂ ಈಡೇರಿಲ್ಲ. 2015ರಲ್ಲಿ ಲಿಂಗೈಕ್ಯ ಡಾ.ಮಹಾಂತ ಸ್ವಾಮಿಗಳು ಟ್ರಸ್ಟಿಗಳ ನೈಜ ಸ್ವರೂಪದ ಬಗ್ಗೆ ಪತ್ರ ಬರೆದಿದ್ದರು. ಒಗ್ಗಟ್ಟಾಗಿದ್ದ ಪಂಚಮಸಾಲಿ ಸಮಾಜ ಮತ್ತು ಲಿಂಗಾಯತ ಒಳಪಂಗಡಗಳನ್ನು ಒಡೆದು ಪ್ರತ್ಯೇಕ ಪೀಠ ಸ್ಥಾಪಿಸಿರುವುದು ಸಮಾಜಕ್ಕೆ ಮಾಡಿದ ದ್ರೋಹ.

- ಪರಮೇಶ್ವರ ಗೌಡ್ರು ಹೊಳೆಸಿರಿಗೆರೆ, ಅಧ್ಯಕ್ಷ, ಲೆಕ್ಕ ಕೊಡಿ ಚಳವಳಿ ಸಮಿತಿ.

- - -

-10ಕೆಡಿವಿಜಿ2: ದಾವಣಗೆರೆಯಲ್ಲಿ ಭಾನುವಾರ ಪಂಚಮಸಾಲಿ ಮುಖಂಡರಾದ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ, ಅರುಣ ಕುಮಾರ ಪೂಜಾರ, ಲೆಕ್ಕ ಕೊಡಿ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ್ರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.