ಕನ್ನಡಪ್ರಭ ವಾರ್ತೆ ನಾಗಮಂಗಲ

ನಾಡಪ್ರಭು ಕೆಂಪೇಗೌಡರ ಅಂದಿನ ಕನಸು ಮತ್ತು ದೂರದೃಷ್ಟಿಯಿಂದಾಗಿ ಬೆಂಗಳೂರು ಇಂದು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂದು ತಹಸೀಲ್ದಾರ್ ಜಿ.ಆದರ್ಶ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಆಡಳಿತ ಸೌಧದ ಒಳಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯುತ್ಸವಲ್ಲಿ ಮಾತನಾಡಿದರು.

ತಾಲೂಕಿನ ಕದಬಹಳ್ಳಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲೆ ಜಿ.ಬಿ.ಅನಿತ ಮಾತನಾಡಿ, ವಿಜಯನಗರ ಸಾಮ್ರಾಜ್ಯದಲ್ಲಿ ಏಕೈಕ ಪ್ರಾಮಾಣಿಕ ಪಾಳೇಗಾರರಾಗಿದ್ದ ನಾಡಪ್ರಭು ಕೆಂಪೇಗೌಡರು ಜನಿಸಿ 516 ವರ್ಷ ಕಳೆದರೂ ಚಿರಸ್ಥಾಯಿಯಾಗಿ ಉಳಿದಿದ್ದಾರೆಂದರೆ ಅವರ ದೂರದೃಷ್ಟಿ ಮತ್ತು ಸಾಧನೆ ಎಷ್ಟಿರಬಹುದೆಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಮಾತನಾಡಿ, ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಶಾಶ್ವತವಾಗಿ ಉಳಿಯುವಂತಹ ಸಾಧನೆ ಮಾಡಬಹುದೆಂಬುದಕ್ಕೆ ನಾಡಪ್ರಭು ಕೆಂಪೇಗೌಡರೇ ಉದಾಹರಣೆ. ನಾಡಹಬ್ಬ ದಸರಾ ಮಾದರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಆಚರಿಸಬೇಕು ಎಂದರು.


ವೇದಿಕೆಯಲ್ಲಿ ಕಳೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ್‍ಯಾಂಕ್ ಪಡೆದು ತೇರ್ಗಡೆ ಹೊಂದಿರುವ ತಾಲೂಕಿನ ಕರಡಹಳ್ಳಿ ಆರ್.ಧನಂಜಯ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮಕ್ಕಳ ತಜ್ಞ ಡಾ.ಬಿ.ಸಿ. ಆದಿತ್ಯಕುಮಾರ್, ಯಕ್ಷಗಾನ ಕಲಾವಿದ ಶ್ರೀಧರ್, ನಿವೃತ್ತ ಶಿಕ್ಷಕ ರಾಮಸ್ವಾಮಿಗೌಡ, ಬಾಯ್ಲರ್ ಕೈಗಾರಿಕಾ ಘಟಕದ ನಿರ್ದೇಶಕ ಡಿ.ಸಿ.ಜಗದೀಶ್ ಹಾಗೂ ಪ್ರಗತಿಪರ ಯುವ ರೈತ ಪರಮೇಶ್ ಅವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಅಲಂಕರಿಸಿದ ತೆರೆದ ವಾಹನದಲ್ಲಿರಿಸಿ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪೂರ್ಣಕುಂಭ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಸಮಾರಂಭದಲ್ಲಿ ತಾಪಂ ಇಒ ಬಿ.ಎಸ್.ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್, ಡಿವೈಎಸ್ ಪಿ ಬಿ.ಚಲುವರಾಜು, ಪುರಸಭೆ ಮುಖ್ಯಾಧಿಕಾರಿ ವೀಣಾ, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಸಮಾಜ ಕಲ್ಯಾಣಾಧಿಕಾರಿ ರಾಘವೇಂದ್ರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್, ಟಿಎಚ್‌ಒ ಡಾ.ನಾರಾಯಣ, ಸರ್ಕಾರಿ ನೌಕರರ ಸಂಘದ. ಅಧ್ಯಕ್ಷ ಜೆ.ವೈ.ಮಂಜುನಾಥ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ಟೌನ್ ಒಕ್ಕಲಿಗರ ಸಂಘದ ಅಧ್ಯಕ್ಷ ಎನ್.ಟಿ.ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ದಸಂಸ ಮುಖಂಡ ಎಂ.ನಾಗರಾಜಯ್ಯ, ಕನ್ನಡ ಸಂಘದ ಎನ್.ನಟರಾಜ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶಿವಣ್ಣಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಕುವೆಂಪು ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.