ಹಾಸನ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ೨೫ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮತ್ತು ಆಶಾಭಾವನೆ ಮೂಡಿಸಿದ್ದು, ಐಟಿ ಹಬ್ ಕನಸು ನನಸಾಗಲಿ, ಹಾಸನ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿ ಪಕ್ಷದ ಸಂಘಟನೆಗಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದುಡಿದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿರುವುದು ಕಾಂಗ್ರೆಸ್ ಕಾರ್ಯಕರ್ತರ ಗೆಲುವು ಎಂದರು. ಪಕ್ಷ ಸಂಕಷ್ಟದಲ್ಲಿದ್ದಾಗ ಅದನ್ನು ಕಾಪಾಡಿ, ಸಂಘಟನೆಯನ್ನು ಬಲಪಡಿಸಿ, ರಾಜ್ಯಾದ್ಯಂತ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದ ಅವರ ಪರಿಶ್ರಮಕ್ಕೆ ಸಿಕ್ಕ ಗೌರವವೇ ಮುಖ್ಯಮಂತ್ರಿ ಹುದ್ದೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಡಿ.ಕೆ. ಶಿವಕುಮಾರ್ ಅವರು ಕೇವಲ ಒಬ್ಬ ರಾಜಕಾರಣಿ ಅಲ್ಲ, ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ಭರವಸೆಯ ನಾಯಕ. ಪಕ್ಷದ ತತ್ವ, ಸಿದ್ಧಾಂತ ಹಾಗೂ ಸಂಘಟನೆಯ ಬಲವರ್ಧನೆಗಾಗಿ ಅವರು ಸಲ್ಲಿಸಿದ ಸೇವೆ ಇಂದಿನ ಈ ಐತಿಹಾಸಿಕ ಕ್ಷಣಕ್ಕೆ ಕಾರಣವಾಗಿದೆ. ಅವರ ನಾಯಕತ್ವದಲ್ಲಿ ರಾಜ್ಯ ಮತ್ತಷ್ಟು ಅಭಿವೃದ್ಧಿಯತ್ತ ಸಾಗಲಿದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ ಎಂದರು. ಹಾಸನ ಜಿಲ್ಲೆಯ ಅಭಿವೃದ್ಧಿಯ ವಿಚಾರ ಪ್ರಸ್ತಾಪಿಸಿದ ಮುಖಂಡರು, ನೂತನ ಮುಖ್ಯಮಂತ್ರಿಗಳಿಂದ ಜಿಲ್ಲೆಗೆ ವಿಶೇಷ ಗಮನ ಸಿಗುವ ನಿರೀಕ್ಷೆ ವ್ಯಕ್ತಪಡಿಸಿದರು. ವಿಶೇಷವಾಗಿ ಹಾಸನದಲ್ಲಿ ಐಟಿ ಕಂಪನಿಗಳು, ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳು ಮತ್ತು ಐಟಿ ಹಬ್ ಸ್ಥಾಪನೆಯಾಗಬೇಕೆಂಬುದು ತಮ್ಮ ಹಲವು ವರ್ಷಗಳ ಕನಸಾಗಿದೆ ಎಂದು ತಿಳಿಸಿದರು. ಇಂದು ಸಾವಿರಾರು ಯುವಕರು ಉದ್ಯೋಗ ಅರಸಿ ಬೆಂಗಳೂರು, ಮೈಸೂರು, ಹೈದರಾಬಾದ್ ಮತ್ತು ವಿದೇಶಗಳಿಗೆ ತೆರಳುತ್ತಿದ್ದಾರೆ. ಹಾಸನದಲ್ಲೇ ಐಟಿ ಉದ್ಯಮಗಳು ಸ್ಥಾಪನೆಯಾದರೆ ಜಿಲ್ಲೆಯ ಯುವ ಪ್ರತಿಭೆಗಳಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ದೊರೆಯುತ್ತದೆ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಅವಕಾಶ ಸಿಗುತ್ತದೆ. ಕುಟುಂಬಗಳನ್ನು ಬಿಟ್ಟು ದೂರ ಹೋಗುವ ಅಗತ್ಯವಿಲ್ಲ. ತಮ್ಮ ತವರು ನೆಲದಲ್ಲೇ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಜಿಲ್ಲೆಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೂ ಹೊಸ ವೇಗ ಸಿಗಲಿದೆ ಎಂದು ಅಭಿಪ್ರಾಯಪಟ್ಟರು. ಹಾಸನ ಜಿಲ್ಲೆಗೆ ಐಟಿ ಹಬ್, ಕೈಗಾರಿಕಾ ವಲಯ, ಕೌಶಲ್ಯಾಭಿವೃದ್ಧಿ ಕೇಂದ್ರಗಳು ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ತರಬೇಕೆಂಬ ಕುರಿತು ನೂತನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ ಅವರು ಶೀಘ್ರದಲ್ಲೇ ಹಾಸನ ಜಿಲ್ಲೆಗೆ ಭೇಟಿ ನೀಡಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಬೇಕು ಎಂದು ಕೋರಿದರು. ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದ್ದು, ಜಿಲ್ಲೆಯಲ್ಲಿಯೂ ಪಕ್ಷದ ಸಂಘಟನೆಗೆ ಹೊಸ ಶಕ್ತಿ ದೊರೆಯಲಿದೆ ಎಂದು ಹೇಳಿದರು. ಮುಂದಿನ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ವಿಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾರ್ಯಕರ್ತರು ಈಗಾಗಲೇ ಉತ್ಸಾಹದಿಂದ ಸಂಘಟನೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಇದು ಗೌರವದ ಕ್ಷಣ. ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತನ ಪರಿಶ್ರಮಕ್ಕೂ ಮೌಲ್ಯ ಸಿಗುವ ದಿನಗಳು ಆರಂಭವಾಗಿವೆ. ನಾನು ಸಹ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಅವರ ಸಮಸ್ಯೆಗಳಿಗೆ ಧ್ವನಿಯಾಗಿ, ಪಕ್ಷದ ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮುಂದುವರಿಸುತ್ತೇನೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅನು, ರಘು ದಾಸರಕೊಪ್ಪಲು, ಬೂದೇಶ್, ಆರೀಫ್, ವೆಂಕಟೇಗೌಡ ಇತರರು ಉಪಸ್ಥಿತರಿದ್ದರು.