ಸಂಪುಟಕ್ಕೆ ಈಗ ಕೋಟಾ ಸಂಕಟ ! - ರಾಜ್ಯದಿಂದ 3, ವರಿಷ್ಠರಿಂದ 2 ಪಟ್ಟಿ

Published : Jul 19, 2026, 08:32 AM IST
DK SHivakumar

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಎರಡನೇ ಹಂತದ ಸಚಿವ ಸಂಪುಟವೆಂಬ ಖಾದ್ಯ ಸಿದ್ಧಪಡಿಸಲು ಹಲವು ಬಾಣಸಿಗರು ಅತ್ಯುತ್ಸಾಹ ತೋರುತ್ತಿರುವ ಪರಿಣಾಮ ಇಡೀ ಪ್ರಕ್ರಿಯೆಗೆ ಸೋಮವಾರದಿಂದ ಮತ್ತೊಂದು ಹಂತದ ಚಾಲನೆ ನೀಡಬೇಕಾದ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿ ಉಂಟಾಗಿದೆ.

 ಬೆಂಗಳೂರು :  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಎರಡನೇ ಹಂತದ ಸಚಿವ ಸಂಪುಟವೆಂಬ ಖಾದ್ಯ ಸಿದ್ಧಪಡಿಸಲು ಹಲವು ಬಾಣಸಿಗರು ಅತ್ಯುತ್ಸಾಹ ತೋರುತ್ತಿರುವ ಪರಿಣಾಮ ಇಡೀ ಪ್ರಕ್ರಿಯೆಗೆ ಸೋಮವಾರದಿಂದ ಮತ್ತೊಂದು ಹಂತದ ಚಾಲನೆ ನೀಡಬೇಕಾದ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿ ಉಂಟಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಂಪುಟ ರಚನೆಯಂಥ ಸಂದರ್ಭದಲ್ಲಿ ರಾಜ್ಯದಿಂದ ಎರಡು ಪಟ್ಟಿ ಮಾತ್ರ ಸಲ್ಲಿಕೆಯಾಗುತ್ತಿದ್ದು, ಇದಕ್ಕೆ ಹೈಕಮಾಂಡ್‌ ನಾಯಕರ ಕೆಲ ಹೆಸರು ಸೇರ್ಪಡೆ ಮಾಡುವ ಮೂಲಕ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ರಾಜ್ಯದಿಂದಲೇ ಮೂರು ಪ್ರತ್ಯೇಕ ಪಟ್ಟಿ ಹಾಗೂ ಹೈಕಮಾಂಡ್‌ ವಲಯದಿಂದಲೂ ಎರಡಕ್ಕೂ ಹೆಚ್ಚು ಪಟ್ಟಿ ರೂಪುಗೊಂಡಿರುವುದು ಇಡೀ ಪ್ರಕ್ರಿಯೆ ವಿಳಂಬವಾಗಲು ಕಾರಣವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಎರಡನೇ ಹಂತದ ಸಂಪುಟ ಸೇರ್ಪಡೆಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ತಮ್ಮ ಬೆಂಬಲಿಗರ ಪ್ರತ್ಯೇಕ ಪಟ್ಟಿಯನ್ನು ದೆಹಲಿಗೆ ಒಯ್ದಿದ್ದರೆ, ಹೈಕಮಾಂಡ್‌ನ ಪ್ರಭಾವಿಗಳಾದ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ್‌ ಅವರು ಸಹ ಕೆಲ ಹೆಸರುಗಳೊಂದಿಗೆ ಸಜ್ಜಾಗಿದ್ದರು ಎನ್ನುತ್ತವೆ ಮೂಲಗಳು.

ದೆಹಲಿಯಲ್ಲಿ ನಡೆದ ಎರಡು ದಿನಗಳ ಚರ್ಚೆ ವೇಳೆ ಈ ಹಲವು ಪಟ್ಟಿಗಳು ತಾಳಮೇಳ ಸೇರುತ್ತಿಲ್ಲ. ಕೆಲ ಹೆಸರುಗಳ ಬಗ್ಗೆ ನಾಯಕರಲ್ಲೇ ಒಮ್ಮತ ಮೂಡಿ ಬಂದಿಲ್ಲ. ರಾಜ್ಯ ನಾಯಕರು ಸೂಚಿಸಿದ ಕೆಲ ಹೆಸರುಗಳು ಹೈಕಮಾಂಡ್‌ಗೆ ಒಪ್ಪಿಗೆಯಾಗುತ್ತಿಲ್ಲ. ಹೀಗಾಗಿ ಕೆಲ ಸೂಚನೆಗಳನ್ನು ನೀಡಿ ಅದಕ್ಕೆ ಅನುಗುಣವಾಗಿ ಹೆಸರುಗಳನ್ನು ಶಿಫಾರಸು ಮಾಡುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್‌ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಸಂಪುಟದಲ್ಲಿ ಹೆಚ್ಚಿನ ಆದ್ಯತೆಗೆ ಸಿಎಂ ಆಗ್ರಹ:

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಂಪುಟದಲ್ಲಿ ಶೇ.75ರಷ್ಟು ಸ್ಥಾನ ತುಂಬುವ ಅವಕಾಶ ಮುಖ್ಯಮಂತ್ರಿಗೆ ಇರುತ್ತಿತ್ತು. ಉ‍ಳಿದ ನಾಯಕರು ಹಾಗೂ ಹೈಕಮಾಂಡ್‌ ಉಳಿದ ಸ್ಥಾನಗಳಿಗೆ ಶಿಫಾರಸು ಮಾಡುತ್ತಿದ್ದರು. ಆದರೆ, ಈ ಬಾರಿ ಆ ನಿಯಮದಲ್ಲಿ ಬದಲಾವಣೆ ಏಕೆ ಆಗುತ್ತಿದೆ ಎಂಬ ಪ್ರಶ್ನೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ರಾಹುಲ್ ಗಾಂಧಿ ಅವರ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರಿಗೆ ಸಂಪುಟದಲ್ಲಿ ಸ್ಥಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲ ನಿರ್ದಿಷ್ಟ ಹೆಸರುಗಳ ಸೇರ್ಪಡೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ ಅವರು ಕೂಡ ತಮ್ಮ ಆಯ್ಕೆಯ ಕೆಲ ಹೆಸರುಗಳನ್ನು ಹೈಕಮಾಂಡ್‌ ಮುಂದೆ ಪ್ರಸ್ತಾವನೆ ಮಾಡಿದ್ದರೆ, ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರ ಆಯ್ಕೆಯ ಕೆಲ ಹೆಸರಗಳು ಕೂಡ ಚರ್ಚೆಗೆ ಬಂದಿದೆ ಎನ್ನಲಾಗಿದೆ.

ಈ ಎಲ್ಲ ಕಾರಣದಿಂದ ಪಟ್ಟಿ ಅಂತಿಮಗೊಂಡಿಲ್ಲ. ಹೀಗಾಗಿಯೇ ಪರಿಷ್ಕೃತ ಪಟ್ಟಿ ನೀಡುವಂತೆ ರಾಜ್ಯ ನಾಯಕತ್ವಕ್ಕೆ ಹೈಕಮಾಂಡ್‌ ಸೂಚಿಸಿದೆ. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹಿಂತಿರುಗಿದ್ದು, ಸೋಮವಾರದ ವೇಳೆಗೆ ರಾಜ್ಯ ನಾಯಕರ ಶಿಫಾರಸು ಕೂಡ ಬಂದರೆ ನಂತರ ಅಂತಿಮ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.

ಖರ್ಗೆ ಭೇಟಿ ಮಾಡಿದ ಸಿಎಂ, ಡಿಸಿಎಂ:

ಶನಿವಾರ ನಗರದ ಸದಾಶಿವನಗರದ ನಿವಾಸದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಪಟ್ಟಿ ಪರಿಷ್ಕರಣೆ ಕುರಿತು ಚರ್ಚೆ ನಡೆಸಿದರು. ಈ ವೇಳೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕೂಡ ಜೊತೆಗಿದ್ದರು.

ಶನಿವಾರ ದೆಹಲಿಗೆ ತೆರಳಬೇಕಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಬೆಳಗ್ಗೆ ಸದಾಶಿವನಗರದ ತಮ್ಮ ಹಳೆಯ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ, ಅವರ ಜೊತೆಯಲ್ಲೇ ಕಾರಿನಲ್ಲಿ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೆಲ ಕಾಲ ಚರ್ಚೆ ನಡೆಸಿದರು. ಬಳಿಕ ವಿಮಾನ ನಿಲ್ದಾಣದವರೆಗೂ ಜೊತೆಯಲ್ಲೇ ತೆರಳಿದರು. ಈ ವೇಳೆ ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಇದ್ದರು. ಪ್ರಯಾಣದ ವೇಳೆಯೂ ಸಂಪುಟ ವಿಸ್ತರಣೆಗೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಯಾವೆಲ್ಲಾ ಬದಲಾವಣೆ ಆಗಬೇಕೆಂಬ ಬಗ್ಗೆ ಚರ್ಚೆ ನಡೆಸಿದ್ದು, ಅವರ ಸೂಚನೆಯಂತೆ ಒಂದೆರಡು ದಿನದಲ್ಲಿ ಪರಿಷ್ಕೃತ ಪಟ್ಟಿಯನ್ನು ದೆಹಲಿಗೆ ಕಳುಹಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಖರ್ಗೆ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌ ಅವರು, ಸಂಪುಟ ವಿಸ್ತರಣೆ ವಿಚಾರದಲ್ಲೇ ಕಾಂಗ್ರೆಸ್‌ ಕಾಲ ಕಳೆಯುತ್ತಿದೆ ಎಂಬ ವಿಪಕ್ಷಗಳ ಆರೋಪ ಕುರಿತ ಪ್ರಶ್ನೆಗೆ, ಒಂದು ಕಡೆ ಸಂಪುಟ ವಿಸ್ತರಣೆ ಆಗಿಲ್ಲ, 15 ಜನ ಸಚಿವರನ್ನು ಇಟ್ಟುಕೊಂಡು ಏನು ಮಾಡುತ್ತಾರೆ ಅಂತ ಅವರೇ ಸುದ್ದಿ ಮಾಡುತ್ತಾರೆ. ಮತ್ತೊಂದು ಕಡೆ ಸಂಪುಟ ವಿಸ್ತರಿಸದೆ ಅಧಿವೇಶನ ಹೇಗೆ ನಡೆಸುತ್ತೀರಿ ಎಂದು ಕೇಳುತ್ತಾರೆ. ನಾವು ಜವಾಬ್ದಾರಿ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಹೈಕಮಾಂಡ್‌ ನಮ್ಮ ಪಟ್ಟಿಗೆ ಒಪ್ಪಿಗೆ ನೀಡಿದ ಬಳಿಕ ಶೀಘ್ರ ಸಂಪುಟ ವಿಸ್ತರಣೆ ಆಗಲಿದೆ ಎಂದರು.

ಸಚಿವಾಕಾಂಕ್ಷಿಗಳ ಭೇಟಿ

ಈ ಮಧ್ಯೆ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಸೇರಿ ಕೆಲ ಸಚಿವಾಕಾಂಕ್ಷಿಗಳು ಶನಿವಾರ ನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಸಿದ್ದು ಸಂಪುಟ ಆಯ್ಕೆ ವೇಳೆ ರಾಜ್ಯದ 2 ಪಟ್ಟಿಗೆ ಕೇಂದ್ರದ ಕೆಲವು ಹೆಸರು ಸೇರ್ಪಡೆ. ಹೀಗಾಗಿ ಶೀಘ್ರ ಆಯ್ಕೆ

ಈ ಬಾರಿ ರಾಜ್ಯದಿಂದ ಡಿಕೆ, ಸಿದ್ದು, ಹರಿಪ್ರಸಾದ್‌ ಪ್ರತ್ಯೇಕ ಪಟ್ಟಿ. ಇದಕ್ಕೆ ಸುರ್ಜೇವಾಲಾ, ವೇಣು ಪಟ್ಟಿ ಸೇರ್ಪಡೆ

ರಾಜ್ಯ ನಾಯಕರು ಕಳಿಸಿದ್ದ ಪಟ್ಟಿಯ ಕೆಲ ಹೆಸರಿನ ಬಗ್ಗೆ ದಿಲ್ಲಿ ನಾಯಕರ ಆಕ್ಷೇಪ. ಕೆಲ ಹೆಸರು ಬದಲಿಗೆ ಸೂಚನೆ

ಸಿದ್ದು ಸಂಪುಟ ಆಯ್ಕೆ ವೇಳೆ ಅವರು ಸೂಚಿಸಿದ ಶೇ.75 ಹೆಸರಿಗೆ ಮನ್ನಣೆ, ನನಗೂ ಅಷ್ಟೇ ಮನ್ನಣೆ ನೀಡಿ: ಡಿಕೆ

ಸಿಎಂ ಸ್ಥಾನ ತ್ಯಜಿಸಿದ ಕಾರಣಕ್ಕೆ ಹೆಚ್ಚು ಸ್ಥಾನಕ್ಕೆ ಸಿದ್ದು ಪಟ್ಟು, ಕೆಪಿಸಿಸಿ ಅಧ್ಯಕ್ಷರಿಂದಲೂ ಇದೇ ರೀತಿಯ ವಾದ

ಹೀಗಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ದೆಹಲಿ ನಾಯಕರ ಪಾಲಿಗೆ ಸಮಸ್ಯೆ ತಂದಿದ್ದು, ವಿಳಂಬಕ್ಕೆ ಕಾರಣವಾಗಿದೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಿಡದಿಯಿಂದ ಬೆಂಗಳೂರಿಗೆ ದಳ ಪ್ರತ್ಯೇಕ ಪಾದಯಾತ್ರೆ!
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ : ಬರದ ಬಗ್ಗೆ ಚರ್ಚೆಗೆ ಇಂದು ತುರ್ತು ಸಚಿವ ಸಂಪುಟ ಸಭೆ